ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯ ರಾಜ್ಯಗಳಿಂದ ಬಂದವರಿಗೆ ಸೋಂಕು

ನಗರದಲ್ಲಿ ಒಂದೇ ದಿನ 21 ಕೋವಿಡ್ ಪ್ರಕರಣ, ಮೃತರ ಸಂಖ್ಯೆ 12ಕ್ಕೆ ಏರಿಕೆ
Last Updated 3 ಜೂನ್ 2020, 22:23 IST
ಅಕ್ಷರ ಗಾತ್ರ

ಬೆಂಗಳೂರು: ದೆಹಲಿ, ಮಹಾರಾಷ್ಟ್ರ ಸೇರಿದಂತೆ ಅನ್ಯ ರಾಜ್ಯಗಳಿಂದ ವಾಪಸ್ ಆದ 19 ಮಂದಿ ಸೇರಿದಂತೆ ಒಂದೇ ದಿನ 21 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಕೋವಿಡ್ ಪೀಡಿತರ ಸಂಖ್ಯೆ 418ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕಿತರ ಜಿಲ್ಲಾವಾರು ಪಟ್ಟಿಯಲ್ಲಿ ಬೆಂಗಳೂರು ನಗರ ಜಿಲ್ಲೆ 3ನೇ ಸ್ಥಾನಕ್ಕೆ ಹಾಗೂ ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ತಲುಪಿದೆ. 48 ಗಂಟೆಗಳಲ್ಲಿ 33 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಸಕ್ರೀಯ ಪ್ರಕರಣಗಳ ಸಂಖ್ಯೆ 150ಕ್ಕೆ ತಲುಪಿದೆ.

ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿ 9 ಮಂದಿ ದೆಹಲಿ ಹಾಗೂ 4 ಮಂದಿ ಮಹಾರಾಷ್ಟ್ರಕ್ಕೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದಾರೆ. ಬಿಹಾರದಿಂದ 3 ಮಂದಿ, ತಮಿಳು ನಾಡಿನಿಂದ ವಾಪಸ್‌ ಆದ ಇಬ್ಬರು ಹಾಗೂ ರಾಜಸ್ಥಾನದಿಂದ ಬಂದ ಒಬ್ಬರಿಗೆ ಸೋಂಕು ತಗುಲಿದೆ. ಇವರಲ್ಲಿ ಕೆಲವರು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಮುಗಿಸಿ, ಮನೆಗೆ ತೆರಳಿದ ಬಳಿಕ ಸೋಂಕಿತರಾಗಿದ್ದಾರೆ.

ಅನಂತಪುರದಿಂದ ಕೆಲದಿನಗಳ ಹಿಂದೆ ಬಂದಿದ್ದ 58 ವರ್ಷದ ಮಹಿಳೆ ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರಿಗೆ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ.

ಮೃತರ ಸಂಖ್ಯೆ 12ಕ್ಕೆ:ಛಲವಾದಿಪಾಳ್ಯದ ಓಲ್ಡ್ ಪೆನ್ಶನ್ ಮೊಹಲ್ಲಾದ 67 ವರ್ಷದ ವೃದ್ಧ ಕೊರೊನಾ ಸೋಂಕಿ ನಿಂದ ಮೃತಪಟ್ಟಿರುವುದು ಪರೀಕ್ಷಾ ವರದಿಯಿಂದ ಬುಧವಾರ ರಾತ್ರಿ ದೃಢ ಪಟ್ಟಿದೆ. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಅವರು ಮೇ 31ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜೂ.1ರಂದು ಮೃತಪಟ್ಟಿದ್ದರು. ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸ ಲಾಗಿತ್ತು. ನಗರದಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಯಲಹಂಕ:ಮತ್ತೊಂದು ಪ್ರಕರಣ
ಇಲ್ಲಿನ ಉಪನಗರದ ಮಾತೃ ಲೇಔಟ್‌ನಲ್ಲಿ ಮತ್ತೊಂದು ಕೊರೊನಾ ಪಾಸಿಟೀವ್ ಪ್ರಕರಣ ಪತ್ತೆಯಾಗಿದ್ದು, ಬಡಾವಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ದೆಹಲಿಯಿಂದ ಬಂದಿದ್ದ ವ್ಯಕ್ತಿಯು ಹೋಟೆಲ್ ಕ್ವಾರಂಟೈನ್‌ನಲ್ಲಿ 7 ದಿನಗಳ ಕಾಲ ಇದ್ದರು. ಮಾತೃ ಲೇಔಟ್‌ನ ಅಪಾರ್ಟ್‌ಮೆಂಟ್‌ನ ನಿವಾಸಿಯಾದ ಅವರ ವರದಿ ಬುಧವಾರ ಮಧ್ಯಾಹ್ನ ಪರೀಕ್ಷೆ ಬಂದಿದೆ. ಇವರ ಮನೆಯಲ್ಲಿದ್ದ ಮತ್ತೊಬ್ಬ ವ್ಯಕ್ತಿಯನ್ನು ಹೋಟೆಲ್ ಕ್ವಾರಂಟೈನ್‌ಗೆ ಕಳುಹಿಸಿಕೊಡಲಾಗಿದೆ.

ಬ್ಯಾಟರಾಯನಪುರ ಸಮೀಪದ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದ ಪುಣೆಯ ವ್ಯಕ್ತಿಯ ಪರೀಕ್ಷಾ ವರದಿ ಪಾಸಿಟಿವ್ ಬಂದ
ಹಿನ್ನೆಲೆಯಲ್ಲಿ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT