ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

400ರ ಗಡಿ ಸಮೀಪಿಸಿದ ಕೋವಿಡ್, ಒಂದೇ ದಿನ 12 ಮಂದಿಗೆ ಸೋಂಕು

ನಾಲ್ವರು ಅನ್ಯರಾಜ್ಯಗಳಿಗೆ ಪ್ರಯಾಣಿಸಿದ ಇತಿಹಾಸ
Last Updated 2 ಜೂನ್ 2020, 22:34 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಂಗಳವಾರ ಒಂದೇ ದಿನ 12 ಕೋವಿಡ್‍ಪ್ರಕಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 397ಕ್ಕೆ ಏರಿಕೆಯಾಗಿದೆ.

ನಾಲ್ವರು ಅನ್ಯ ರಾಜ್ಯಗಳಿಗೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದಾರೆ. ಇದರಲ್ಲಿ ಇಬ್ಬರಿಗೆ ಸಾಂಸ್ಥಿಕ ಕ್ವಾರಂಟೈನ್‌ ಮುಗಿಸಿ, ಮನೆಗೆ ತೆರಳಿದ ಬಳಿಕ ಸೋಂಕು ತಗುಲಿರುವುದು ದೃಢಪಟ್ಟಿದೆ.

ಯಶವಂತಪುರದ ಎಪಿಎಂಸಿ ಯಲ್ಲಿ ಕೆಲಸ ಮಾಡುತ್ತಿದ್ದ 48 ವರ್ಷದ ವ್ಯಕ್ತಿ ಮೇ 30ರಂದು ಸೋಂಕಿತರಾಗಿದ್ದರು. ಇವರು ಮುದ್ದನಪಾಳ್ಯದವರಾಗಿದ್ದು, ಅವರೊಂದಿಗೆ ಸಂಪರ್ಕ ಹೊಂದಿದ್ದರವನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಅವರೊಂದಿಗೆ ನೇರ ಸಂಪರ್ಕ ಹೊಂದಿದ್ದವರಲ್ಲಿ ಪತ್ನಿ, ಪುತ್ರ ಹಾಗೂ ತಂಗಿಯ ಮಗಳು ಸೋಂಕಿತರಾಗಿದ್ದಾರೆ.

ಅಗ್ರಹಾರ ದಾಸರಹಳ್ಳಿಯ 61 ವರ್ಷದ ಮಹಿಳೆಯ ಸಂಪರ್ಕದಿಂದ 45 ವರ್ಷದ ಪುರುಷ, 40 ವರ್ಷದ ಮಹಿಳೆ ಹಾಗೂ 37 ವರ್ಷದ ಮಹಿಳೆ ಸೋಂಕಿತರಾಗಿದ್ದಾರೆ. ಸಿಂಗ್ರಸಂದ್ರದ 35 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಸೋಂಕು ಹೇಗೆ ತಗುಲಿತು ಎನ್ನುವುದನ್ನು ಪತ್ತೆ ಮಾಡಲಾಗುತ್ತಿದೆ.ಮಹಾರಾಷ್ಟ್ರದಿಂದ ಬಂದಿದ್ದ66 ವರ್ಷದ ಮಹಿಳೆ, ದೆಹಲಿಯಿಂದ ಬಂದಿದ್ದ 25 ವರ್ಷದ ವ್ಯಕ್ತಿ, 30 ವರ್ಷದ ವ್ಯಕ್ತಿ ಹಾಗೂ 23 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

ಮುದ್ದನಪಾಳ್ಯ ಗ್ರಾಮ ಸೀಲ್‍ಡೌನ್
ಹೆಸರಘಟ್ಟ: ದಂಪತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕಸಘಟ್ಟಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದನಪಾಳ್ಯ ಗ್ರಾಮವನ್ನು ಸೀಲ್‍ಡೌನ್ ಮಾಡಲಾಯಿತು.

ಗ್ರಾಮದಲ್ಲಿರುವ 46 ವರ್ಷದ ವ್ಯಕ್ತಿಯೊಬ್ಬರು ತಲೆನೋವು, ಸುಸ್ತು ಬಂದಿದ್ದರಿಂದ ನಗರದ ವಿಕ್ರಂ ಅಸ್ಪತ್ರೆಗೆ ಸ್ವಯಂ ಪ್ರೇರಿತರಾಗಿ ದಾಖಲಾಗಿದ್ದರು. ರೋಗ ಲಕ್ಷಣಗಳನ್ನು ಗುರುತಿಸಿದ ವೈದ್ಯರು ಕಫ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಅವರ ಪತ್ನಿಗೂ ಸೋಂಕು ತಗುಲಿದೆ. ಹೀಗಾಗಿ, ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದುಚಿಕ್ಕಬಾಣಾವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಯರಾಂ ತಿಳಿಸಿದರು.

ಪಾದರಾಯನಪುರ: ಎಫ್‌ಐಆರ್ ತಡೆಗೆ ನಕಾರ
ಪಾದರಾಯನಪುರದಲ್ಲಿ ಕೊರೊನಾ ನಿಯಂತ್ರಣ ಕರ್ತವ್ಯದಲ್ಲಿದ್ದ ವೈದ್ಯರು, ಆರೋಗ್ಯ ಕಾರ್ಯಕರ್ತರು ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 126 ಆರೋಪಿಗಳ ವಿರುದ್ಧ ಜೆಜೆ ನಗರ ಠಾಣಾ ಪೊಲೀಸರು ದಾಖಲಿಸಿರುವ 4 ಎಫ್‌ಐಆರ್‌ಗಳಿಗೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಈ ಸಂಬಂಧ ವಜೀರ್ ಖಾನ್ ಸೇರಿದಂತೆ 126 ಆರೋಪಿಗಳು ಸಲ್ಲಿಸಿದ್ದ ನಾಲ್ಕು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಪಿ.ಬಿ.ಭಜಂತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಜೆ.ಜೆ.ನಗರ ಠಾಣೆ ಭೇಟಿಗೆ ನಿರ್ಬಂಧ
ಬೆಂಗಳೂರು:
ನಿಯಂತ್ರಿತ ಪ್ರದೇಶ (ಕಂಟೈನ್‌ಮೆಂಟ್) ಪಾದರಾಯನಪುರ ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಹೆಡ್‌ ಕಾನ್‌ಸ್ಟೆಬಲೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಬೆನ್ನಲ್ಲೇ, ಜಗಜೀವನರಾಮ್ ನಗರ ಠಾಣೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

‘ಹೆಡ್ ಕಾನ್‌ಸ್ಟೆಬಲ್ ಜೊತೆ ಸಂಪರ್ಕವಿಟ್ಟುಕೊಂಡಿದ್ದವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಠಾಣೆಯನ್ನೂ ಸ್ಯಾನಿಟೈಸ್ ಮಾಡಿಸಲಾಗಿದೆ. ಕಚೇರಿ ಕೆಲಸಕ್ಕೆ ಮಾತ್ರ ಸಿಬ್ಬಂದಿಗೆ ಅವಕಾಶ ನೀಡಲಾಗಿದ್ದು, ಅವರಷ್ಟೇ ಠಾಣೆಗೆ ಬಂದು ಹೋಗುತ್ತಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸಾರ್ವಜನಿಕರು ಠಾಣೆಗೆ ಬರುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಈ ಬಗ್ಗೆ ಠಾಣೆ ವ್ಯಾಪ್ತಿಯ ಜನರಿಗೂ ಮಾಹಿತಿ ನೀಡಲಾಗಿದೆ. ತುರ್ತು ಸಂದರ್ಭದಲ್ಲಿ ನಿಯಂತ್ರಣ ಕೊಠಡಿಗೆ ಕರೆ ಮಾಡುವಂತೆಯೂ ಸೂಚಿಸಲಾಗಿದೆ’ ಎಂದರು.

ಮುಂಜಾಗ್ರತಾ ಕ್ರಮವಾಗಿ ಇಡೀ ಠಾಣೆಯನ್ನೇ ಸೀಲ್‌ಡೌನ್‌ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಸೀಲ್‌ಡೌನ್ ಮಾಡಬೇಕಾ? ಅಥವಾ ಬೇಡವೇ? ಎಂಬ ಬಗ್ಗೆ ಹೆಚ್ಚುವರಿ ಪೊಲೀಸ್ ಕಮಿಷನರ್ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಮಹಾನಿರ್ದೇಶಕರ ಜೊತೆ ಮಾತುಕತೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು ಹೇಳಿದರು.

ಆರು ವಾರ್ಡ್‌ಗಳಲ್ಲಿ ಕಂಟೈನ್‌ಮೆಂಟ್‌ ಪ್ರದೇಶ
ಬೆಂಗಳೂರು:
ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯಂತ್ರಿತ (ಕಂಟೈನ್‌ಮೆಂಟ್‌) ಪ್ರದೇಶಗಳಿರುವ ವಾರ್ಡ್‌ಗಳ ಸಂಖ್ಯೆ 39ಕ್ಕೆ ಏರಿದೆ. ಮಂಗಳವಾರ ಈ ಪಟ್ಟಿಗೆ ಆರು ವಾರ್ಡ್‌ಗಳು ಸೇರ್ಪಡೆಯಾಗಿವೆ.

ಪಶ್ಚಿಮ ವಲಯದ ಸುಭಾಷ್‌ನಗರ, ಸುಬ್ರಹ್ಮಣ್ಯನಗರ, ಆಜಾದ್‌ನಗರ, ನಾಯಂಡಹಳ್ಳಿ, ರಾಯಪುರ ಹಾಗೂ ಯಲಹಂಕ ವಲಯದ ಕೆಂಪೇಗೌಡ ವಾರ್ಡ್‌ಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಈ ವಾರ್ಡ್‌ಗಳಲ್ಲಿ ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT