ಭಾನುವಾರ, ಆಗಸ್ಟ್ 1, 2021
23 °C
ಸವಾಲಾದ 2960 ರೋಗಿಗಳ ಸಂಪರ್ಕ ಪತ್ತೆ

ಬೆಂಗಳೂರಿನಲ್ಲಿ ಸೋಂಕಿನ ಮೂಲವೇ ತಿಳಿದಿಲ್ಲ, ಇನ್ನಷ್ಟು ಮಂದಿಗೆ ಹರಡುವ ಸಾಧ್ಯತೆ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ವರದಿಯಾದ ಒಟ್ಟು ಪ್ರಕರಣಗಳಲ್ಲಿ 2,960 ರೋಗಿಗಳಿಗೆ ಹೇಗೆ ಸೋಂಕು ತಗುಲಿತು ಎಂಬುದೇ ಗೊತ್ತಾಗಿಲ್ಲ. ಇದರಿಂದಾಗಿ ಅವರ ಸಂಪರ್ಕ ಪತ್ತೆ ಕೂಡ ಈವರೆಗೆ ಸಾಧ್ಯವಾಗಿಲ್ಲ.

ನಗರದಲ್ಲಿ ಮೊದಲ ಪ್ರಕರಣ ವರದಿಯಾದ ಬಳಿಕ (ಮಾ.8) ಪ್ರತಿ ರೋಗಿಯ ಪ್ರಯಾಣದ ಇತಿಹಾಸ ಕಲೆ ಹಾಕಿ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚಿ, ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿತ್ತು. ಅವರಿಗೆ ಕೋವಿಡ್‌ ಪರೀಕ್ಷೆ ನಡೆಸಿ, ಸೋಂಕು ತಗುಲಿಲ್ಲ ಎಂಬುದು ಖಚಿತವಾದ ಬಳಿಕವಷ್ಟೇ ಮನೆಗೆ ತೆರಳಲು ಅವಕಾಶ ನೀಡಲಾಗುತ್ತಿತ್ತು. ಇದರಿಂದಾಗಿ ಕೊರೊನಾ ಸೋಂಕು ನಿಯಂತ್ರಣದಲ್ಲಿತ್ತು. ಆದರೆ, ಲಾಕ್‌ ಡೌನ್‌ ಸಡಿಲಿಸಿದ ಬೆನ್ನಲ್ಲಿಯೇ ಕೋವಿಡ್‌ ಪೀಡಿತರ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ, ಕ್ವಾರಂಟೈನ್‌ ಹಾಗೂ ಕೋವಿಡ್‌ ಪರೀಕ್ಷೆಯ ನಿಯಮಗಳನ್ನು ಸಡಿಲಿಸಲಾಗಿದೆ. ಇದು ಕೂಡ ನಗರದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಲು ಕಾರಣ.

ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸುತ್ತಿಲ್ಲ. ಕೋವಿಡ್ ಪರೀಕ್ಷೆಗೆ ಒಳಗಾದಾಗ ಮಾತ್ರ ಸೋಂಕು ತಗುಲಿರುವುದು ಬೆಳಕಿಗೆ ಬರುತ್ತಿದೆ. ವ್ಯಕ್ತಿಗೆ ಹೇಗೆ ಸೋಂಕು ತಗುಲಿತು, ಎಷ್ಟು ಮಂದಿಯ ಜತೆಗೆ ಸಂಪರ್ಕ ಹೊಂದಿದ್ದರು ಎಂಬುದನ್ನು ಪತ್ತೆ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.

ಶೇ 12ರಷ್ಟು ಮಂದಿ ಗುಣಮುಖ: ನಗರದಲ್ಲಿ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಶೇ 12 ರಷ್ಟು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಶೇ 88.47 ರಷ್ಟು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಸೋಂಕಿತರಾದವರಲ್ಲಿ ಬಹುತೇಕರು ಮಧ್ಯ ವಯಸ್ಕರು.

‘ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ ಸಂಪರ್ಕ ಪತ್ತೆ ಕಷ್ಟ. ಅದರಲ್ಲೂ ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳೇ ಬಹಿರಂಗವಾಗಿ ಗೋಚರಿಸುತ್ತಿಲ್ಲ. ಇದರ ನಡುವೆಯೂ, ಕೆಲವರ ಸಂಪರ್ಕ ಪತ್ತೆ ಮಾಡಿದ್ದೇವೆ. ಸಿಬ್ಬಂದಿ ಕೊರತೆಯಿಂದಾಗಿ ಸಂಪರ್ಕ ಪತ್ತೆಗೆ ಹಿನ್ನಡೆ ಆಗಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. 

*
ಸೋಂಕು ಲಕ್ಷಣ ಗೋಚರಿಸದ ರೋಗಿಯ ಸಂಪರ್ಕದಿಂದ ಬೇರೆಯವರು ಕೋವಿಡ್‌ ಪೀಡಿತರಾಗಬಹುದು ರ್‍ಯಾಂಡಮ್ ಪರೀಕ್ಷೆ ನಡೆಸಿದರೆ ಇನ್ನಷ್ಟು ರೋಗಿಗಳ ಪತ್ತೆ ಸಾಧ್ಯ.
–ಡಾ.ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ

*
ಕೋವಿಡ್‌ ಸಮುದಾಯಕ್ಕೆ ವಿಸ್ತರಿಸಿದೆ ಎಂದು ಹೇಳಲು ಸಾಧ್ಯವಿಲ್ಲ. ಲಕ್ಷಣಗಳು ಗೋಚರಿಸುತ್ತಿದ್ದಂತೆ ಜನರು ಪರೀಕ್ಷೆ ಮಾಡಿಸಿಕೊಂಡಲ್ಲಿ ಹರಡುವಿಕೆ ತಡೆಯಬಹುದು.
–ಡಾ.ಸಿ. ನಾಗರಾಜ್, ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು