ಮಂಗಳವಾರ, ಜೂನ್ 28, 2022
26 °C
ಸಿ.ವಿ.ರಾಮನ್‌ ನಗರ ಶಾಸಕ ರಘು ವಿರುದ್ಧ ಆಕ್ರೋಶ

ಜನರಿಗೆ ನೀಡಬೇಕಾಗಿದ್ದ ಲಸಿಕೆ ಬಿಜೆಪಿ ಕಾರ್ಯಕರ್ತರ ಪಾಲು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜನರಿಗೆ ನೀಡಬೇಕಾಗಿದ್ದ ಕೋವಿಡ್‌ ಲಸಿಕೆಯನ್ನು ಪಕ್ಷದ ಕಾರ್ಯಕರ್ತರಿಗೆ ಹಾಕಿಸಿರುವ ಸಿ.ವಿ.ರಾಮನ್‌ ನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ರಘು ನಡೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭುವನೇಶ್ವರಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆಯಲು ಸುಮಾರು 300 ಮಂದಿ ಹೆಸರು ನೋಂದಾಯಿಸಿದ್ದರು. ಅವರಿಗೆ ಟೋಕನ್‌ ಕೂಡ ನೀಡಲಾಗಿತ್ತು. ಆರೋಗ್ಯ ಕೇಂದ್ರಕ್ಕೆ ಬಂದವರನ್ನು ಅಲ್ಲಿನ ಸಿಬ್ಬಂದಿ ಲಸಿಕೆ ಇಲ್ಲ ಎಂದು ಹೇಳಿ ವಾಪಸ್‌ ಕಳಿಸಿದ್ದಾರೆ. ಇದರಿಂದ ಕೆರಳಿದ ಅವರು ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾಕಬೇಕಾಗಿದ್ದ ಲಸಿಕೆಗಳನ್ನು ರಘು ಅವರ ಒಡೆತನದ ಓಂ ಶಕ್ತಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರಿಗಾಗಿ ವ್ಯವಸ್ಥೆ ಮಾಡಿದ್ದ ಕಾರ್ಯಕ್ರಮಕ್ಕೆ ಕಳುಹಿಸಲಾಯಿತು. ಹೀಗಾಗಿ, ನೋಂದಾಯಿಸಿ ಕಾಯುತ್ತಿದ್ದವರಿಗೆ ಲಸಿಕೆ ಸಿಗಲಿಲ್ಲ ಎಂದು ಜನ ಅಸಹನೆ ವ್ಯಕ್ತಪಡಿಸಿದ್ದಾರೆ.

‘ರಘು ಅವರು ತಮ್ಮ ಒಡೆತನದ ಓಂ ಶಕ್ತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರು, ತಮ್ಮ ಆಪ್ತರು ಹಾಗೂ ಕುಟುಂಬದ ಸದಸ್ಯರಿಗೆ ಲಸಿಕೆಯನ್ನು ಉಚಿತವಾಗಿ ನೀಡಿದ್ದಾರೆ. ಈ ಸಂಬಂಧ ಬ್ಯಾನರ್‌ ಕೂಡ ಹಾಕಿಸಿದ್ದಾರೆ. ಅಲ್ಲಿ ಸೇರಿದ್ದವರು ಅಂತರ ನಿಯಮವನ್ನೂ ಗಾಳಿಗೆ ತೂರಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ವಯಸ್ಸಾದ ಅಪ್ಪ ಅಮ್ಮನಿಗೆ ಲಸಿಕೆ ಹಾಕಿಸಬೇಕಿತ್ತು. ಹೀಗಾಗಿ ಬೆಳಿಗ್ಗೆ 7 ಗಂಟೆಗೇ ಹೋಗಿ ಟೋಕನ್‌ ಪಡೆದುಕೊಂಡಿದ್ದೆ. 9.45ಕ್ಕೆ ಅಪ್ಪ ಅಮ್ಮನನ್ನು ಕರೆದುಕೊಂಡು ಬರುವಂತೆ ಆರೋಗ್ಯ ಕೇಂದ್ರದ ಸಿಬ್ಬಂದಿ ಸೂಚಿಸಿದ್ದರು. ಪೋಷಕರು ಮಧು ಮೇಹದಿಂದ ಬಳಲುತ್ತಿದ್ದಾರೆ. ಹೀಗಾಗಿ ಉಪಾಹಾರವಿದ್ದ ಬಾಕ್ಸ್‌ನೊಂದಿಗೆ ನಿಗದಿತ ಸಮಯಕ್ಕೆ ಕೇಂದ್ರದ ಬಳಿ ಹೋದೆ. 10.15ಕ್ಕೆ ಬಂದ ಸಿಬ್ಬಂದಿ, ‘ಇಲ್ಲಿ ಲಸಿಕೆ ನೀಡುವುದಿಲ್ಲ ನೀವೆಲ್ಲಾ ಕಲ್ಯಾಣ ಮಂಟಪಕ್ಕೆ ಹೋಗಿ’ ಅಂದರು. ಅಲ್ಲಿ ತುಂಬಾ ಜನ ಸೇರಿದ್ದರು. ಹೀಗಾಗಿ ನಾನೇ ಸರತಿ ಸಾಲಿನಲ್ಲಿ ನಿಂತೆ. ಸುಮಾರು ಸಮಯ ಕಾದರೂ ಲಸಿಕೆ ಸಿಗಲಿಲ್ಲ. ಸರ್ಕಾರದಿಂದ ನೀಡಿರುವ ಲಸಿಕೆಯನ್ನು ಶಾಸಕರು ತಮ್ಮ ಕಾರ್ಯಕರ್ತರಿಗೆ ಹೇಗೆ ಕೊಡುತ್ತಾರೆ’ ಎಂದು ಸ್ಥಳೀಯ ನಿವಾಸಿ ಮಂಜು ಪ್ರಶ್ನಿಸಿದರು.

ಸ್ಥಳೀಯರಾದ ಜಗದೀಶ್‌ ಹಾಗೂ ಕವಿತಾ ಅವರು ಶಾಸಕರ ವಿರುದ್ಧ ಕಿಡಿ ಕಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು