ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಗತಿಕರಿಗೆ, ಬಡವರಿಗೆ ನೆರವಿನ ಮಹಾಪೂರ

ಇಸ್ಕಾನ್‌, ರಾಜಸ್ಥಾನಿ ಯೂತ್ ಅಸೋಸಿಯೇಷನ್‌ ನೆರವು
Last Updated 30 ಮಾರ್ಚ್ 2020, 21:06 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಇಸ್ಕಾನ್ ಅಕ್ಷಯಪಾತ್ರಾ ಹಾಗೂ ರಾಜಸ್ಥಾನಿ ಯೂತ್ ಅಸೋಸಿಯೇಷನ್ ವತಿಯಿಂದ ಆಹಾರ ಸಾಮಗ್ರಿ, ಮುಖಗವಸು (ಮಾಸ್ಕ್), ಸೋಂಕು ನಿವಾರಕ ದ್ರಾವಣವನ್ನು (ಸ್ಯಾನಿಟೈಸರ್) ಸೋಮವಾರ ಪಾಲಿಕೆಗೆ ಹಸ್ತಾಂತರಿಸಲಾಯಿತು.

21 ದಿನಗಳವರೆಗೆ ಅಡುಗೆ ಮಾಡಲು ಸಾಕಾಗುವಷ್ಟು ಅಕ್ಕಿ, ಉಪ್ಪು, ಎಣ್ಣೆ, ಬೇಳೆ, ಸಾಂಬಾರ್ ಪುಡಿಗಳನ್ನು ಒಳಗೊಂಡ ತಲಾ 14 ಕೆ.ಜಿ. ತೂಕದ 40 ಸಾವಿರ ಬಾಕ್ಸ್‌ಗಳನ್ನು ಇಸ್ಕಾನ್ ಸಂಸ್ಥೆಯು ಒದಗಿಸಿದೆ. ಇವುಗಳನ್ನು ನಿರ್ಗತಿಕರು, ವಲಸಿಗರು, ಕಟ್ಟಡ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರಿಗೆ ವಿತರಿಸುವಂತೆ ಕೋರಿದೆ.

ರಾಜಸ್ಥಾನಿ ಯೂತ್ ಅಸೋಸಿಯೇಷನ್ ಪೌರಕಾರ್ಮಿಕರಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ವಿತರಿಸುವ ಸಲುವಾಗಿ 60 ಸಾವಿರ ಮುಖಗವಸು, 1ಸಾವಿರ ಸ್ಯಾನಿಟೈಸರ್ ಹಾಗೂ ಆರೋಗ್ಯ ಸಿಬ್ಬಂದಿಗಾಗಿ 100 ಸಂಪೂರ್ಣ ದೇಹವನ್ನು ಮುಚ್ಚುವ ಕವಚ ಪೂರೈಸಿದೆ.

ಈ ಸಾಮಗ್ರಿಗಳನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ, 'ಆಹಾರ ಸಹಾಯವಾಣಿ 15524ಕ್ಕೆ ಅಥವಾ ಪೊಲೀಸ್ ಇಲಾಖೆಯ ಸಹಾಯವಾಣಿ 100ಕ್ಕೆ ಕರೆ ಮಾಡಿದರೆ ಕಟ್ಟಡ ಕಾರ್ಮಿಕರಿಗೆ ಆಹಾರ ತಲುಪಿಸಲಾಗುವುದು. ಊಟದ ವ್ಯವಸ್ಥೆ ಕಲ್ಪಿಸುವಂತೆ ಕೋರಿ 15 ಸಾವಿರ ಮಂದಿ ಇದುವರೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಆಹಾರ ಸಾಮಗ್ರಿಗಳನ್ನು ಡಿಸಿಪಿ ಕಚೇರಿಗಳಿಗೆ ಇಂದೇ ಕಳುಹಿಸಿ ಹೊಯ್ಸಳ ವಾಹನದ ಮೂಲಕ ಮನೆ-ಮನೆಗೆ ತಲುಪಿಸುತ್ತೇವೆ’ ಎಂದರು.

‘ಪ್ರತಿ ಪೌರಕಾರ್ಮಿಕರಿಗೆ ತಲಾ 5 ಮಾಸ್ಕ್‌ ವಿತರಿಸಲು, ಒಟ್ಟು 50ಸಾವಿರ ಮಾಸ್ಕ್‌ಗಳನ್ನು ಪಾಲಿಕೆಗೆ ಒದಗಿಸಲಾಗುತ್ತಿದೆ. ಪೊಲೀಸ್ ಸಿಬ್ಬಂದಿಗೆ 10ಸಾವಿರ ಮಾಸ್ಕ್‌ಗಳನ್ನು ಹಾಗೂ 800 ಸ್ಯಾನಿಟೈಸರ್‌ಗಳನ್ನು ನೀಡಲಾಗುತ್ತಿದೆ’ ಎಂದು ಅಶೋಕ ತಿಳಿಸಿದರು.

ತಹಶೀಲ್ದಾರ್‌ಗಳಿಗೆ ಆಹಾರ ವಿತರಣೆ ಜವಾಬ್ದಾರಿ
ಕೆ.ಆರ್.ಪುರ:
ಕೊರೊನಾ ಸೋಂಕು ತಡೆಯಲು ಸರ್ಕಾರಗಳು ಲಾಕ್‍ಡೌನ್ ಘೋಷಿಸಿರುವುದರಿಂದ ಯಾರಿಗೂ ಹಸಿವಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ಎಲ್ಲ ತಹಶೀಲ್ದಾರ್‌ಗಳಿಗೆ ಜವಾಬ್ದಾರಿ ನೀಡಿ, ಅನುದಾನ ಬಿಡುಗಡೆ ಮಾಡಲಾಗಿದೆ' ಎಂದು ತಹಶೀಲ್ದಾರ್ ತೇಜಸ್ ಕುಮಾರ್ ತಿಳಿಸಿದರು.

ಕೆ.ಆರ್.ಪುರ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು," ಬೆಂಗಳೂರು ಪೂರ್ವ ತಾಲ್ಲೂಕು ವ್ಯಾಪ್ತಿಯಲ್ಲಿ ಈಗಾಗಲೇ 24 ಸಾವಿರ ಬಡವರನ್ನು ಗುರುತಿಸಲಾಗಿದ್ದು, ಅವರಿಗೆ ನಿತ್ಯ ಊಟ ಮತ್ತು ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ. ಅಧಿಕಾರಿಗಳಿಗೆ ಕರೆ ಮಾಡುವ ಮೂಲಕ ಆಹಾರ ಸಮಸ್ಯೆ ಎದುರಾದವರು ನೆರವು ಪಡೆಯಬಹುದು. ನಿರಾಶ್ರಿತರಿಗೆ ಈಸ್ಟ್ ಪಾಯಿಂಟ್ ಸಮೀಪದ ಕಲ್ಯಾಣ ಮಂಟಪ ಹಾಗೂ ತಾಲ್ಲೂಕು ಕಚೇರಿ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ' ಎಂದರು.

'ಕೊರೊನಾ ನಿಯಂತ್ರಣಕ್ಕಾಗಿ ತಾಲ್ಲೂಕು ಆಡಳಿತ ವತಿಯಿಂದ ಸಹಾಯವಾಣಿ ರಚಿಸಲಾಗಿದೆ. ಈ ವ್ಯಾಪ್ತಿಯಲ್ಲಿ 4 ಸಾವಿರ ಮಂದಿ ವಿದೇಶ ಪ್ರಯಾಣ ಮಾಡಿದ್ದಾರೆ. ಪ್ರತಿಯೊಂದು ಮನೆಗೆ ಭೇಟಿ ನೀಡಿ ಎಲ್ಲರಿಗೂ ಮುದ್ರೆ ಹಾಕಿ, ಮನೆಯ ಗೋಡೆಗೆ ಸೂಚನಾ ಫಲಕ ಹಾಕಲಾಗಿದೆ. ಜನಸಂದಣಿ ನಿಯಂತ್ರಣಕ್ಕೆ ಇಲ್ಲಿನ ಕೆ.ಆರ್.ಪುರ ಮಾರುಕಟ್ಟೆಯಲ್ಲಿ ಸಗಟು ಮತ್ತು ಚಿಲ್ಲರೆ ವ್ಯಾಪಾರಕ್ಕೆ ತಡೆ ನೀಡಲಾಗಿದೆ. ಮೇಡಹಳ್ಳಿ, ಅಯ್ಯಪ್ಪ ನಗರ, ಟಿಸಿ ಪಾಳ್ಯ , ಐಟಿಐ ಬಸ್ ನಿಲ್ದಾಣ, ಕೆ.ಆರ್.ಪುರ ಬಸ್ ನಿಲ್ದಾಣಗಳ ಬಳಿ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗುವುದು' ಎಂದರು.

ಜಂಟಿ ಆಯುಕ್ತ ವೆಂಕಟಚಲಪತಿ, ತಾಲ್ಲೂಕು ಆಡಳಿತಾಧಿಕಾರಿ ಚಂದ್ರಶೇಖರ, ಕೆ.ಆರ್.ಪುರ ಪೆÇಲೀಸ್ ಠಾಣೆಯ ವೃತ್ತ ನಿರೀಕ್ಷಕ ಅಂಬರೀಶ್ ಇದ್ದರು.

ಅಡುಗೆ ಸಿದ್ಧಪಡಿಸಿರುವುದು

30 ಸಾವಿರ ಕೂಲಿ ಕಾರ್ಮಿಕರಿಗೆ ಆಹಾರ ವ್ಯವಸ್ಥೆ
ರಾಜರಾಜೇಶ್ವರಿನಗರ:
ಬಿಜೆಪಿ ಮುಖಂಡ ಮುನಿರತ್ನ ಪ್ರತಿನಿತ್ಯ 30 ಸಾವಿರ ಕಟ್ಟಡ ಕಾರ್ಮಿಕರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಸರಬರಾಜು ಮಾಡುತ್ತಿದ್ದಾರೆ.

ರಾಜ್ಯ ಮತ್ತು ದೇಶದಲ್ಲಿ ಲಾಕ್‍ಡೌನ್ ಆಗಿರುವುದರಿಂದ ಕೊಳಚೆ ಪ್ರದೇಶದ ನಿವಾಸಿಗಳು, ವಲಸೆ ಕಾರ್ಮಿಕರು ಆಹಾರಕ್ಕಾಗಿ ಕಣ್ಣೀರು ಹಾಕಬಾರದು ಎಂಬ ಉದ್ದೇಶದಿಂದ 60 ಬಾಣಸಿಗರು ನಿತ್ಯ ಊಟವನ್ನು ಯಶವಂತಪುರ ಜೆ.ಸಿ.ಆರ್ ಕನ್ವೆಂಷನ್ ಹಾಲ್‍ನಲ್ಲಿ ತಯಾರಿಸುತ್ತಿದ್ದಾರೆ. 40 ಜನ ಸ್ವಯಂ ಸೇವಕರು ವಿವಿಧ ಪ್ರದೇಶಗಳಿಗೆ ತೆರಳಿ ಅಲ್ಲಿಯೇ ಊಟದ ಪಾಕೆಟ್‍ಗಳನ್ನು ವಿತರಿಸಿ ಬರುತ್ತಿದ್ದಾರೆ ಎಂದು ಮುನಿರತ್ನ ತಿಳಿಸಿದರು.

ಆಹಾರ ತಯಾರಿಸುವ ಉಸ್ತುವಾರಿ ವಹಿಸಿರುವ ಬಿಬಿಎಂಪಿ ವಾರ್ಡ್ ಮಟ್ಟದ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಕೆ.ವೆಂಕಟೇಶ್ (ಎನ್.ಟಿ.ಆರ್), ’ಅಡುಗೆ ಭಟ್ಟರು, ಸಹಾಯಕರು ಅಂತರ ಕಾಯ್ದುಕೊಳ್ಳಬೇಕು. ಕೈಗಳಿಗೆ ಗ್ಲೌಸ್, ಮುಖಕ್ಕೆ ಮಾಸ್ಕ್‌ಗಳನ್ನು ಒದಗಿಸಿ ಅಡುಗೆ ತಯಾರಿಕೆ ಸಂದರ್ಭದಲ್ಲಿ ಸ್ವಚ್ಚತೆಗೆ ಗಮನಹರಿಸಲಾಗಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT