ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬನ್ನೇರುಘಟ್ಟದಲ್ಲಿ ದೇಶದ ಅತಿ ದೊಡ್ಡ ಚಿರತೆ ಸಫಾರಿ ಶುರು

ಬನ್ನೇರುಘಟ್ಟದಲ್ಲಿ ಪ್ರವಾಸಿರಿಂದ ಉತ್ತಮ ಪ್ರತಿಕ್ರಿಯೆ
Published 28 ಜೂನ್ 2024, 0:12 IST
Last Updated 28 ಜೂನ್ 2024, 0:12 IST
ಅಕ್ಷರ ಗಾತ್ರ

ಆನೇಕಲ್ : ದೇಶದಲ್ಲೇ ಅತಿ ದೊಡ್ಡ ಚಿರತೆ ಸಫಾರಿ ಬುಧವಾರ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆರಂಭವಾಗಿದೆ. ಹುಲಿ, ಸಿಂಹ, ಕರಡಿ ಸಫಾರಿ ಜತೆಗೆ ಚಿರತೆ ಸಫಾರಿ ಹೊಸ ಸೇರ್ಪಡೆಯಾಗಿದ್ದು, ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಲಿದೆ.

ಚಿರತೆ ಸಫಾರಿಗೆ ಪ್ರವಾಸಿರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೂರಾರು ಪ್ರವಾಸಿಗರು ಗುರುವಾರ ಚಿರತೆ ಸಫಾರಿಗೆ ಭೇಟಿ ನೀಡಿ,ವಾಹನದ ಸಮೀದಲ್ಲಿಯೇ  ಚಿರತೆಗಳನ್ನು ಕಂಡು ಸಂಭ್ರಮಿಸಿದರು. ಮೊಬೈಲ್‌ಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.  

ಗುರುವಾರ ಆರು ಟ್ರಿಪ್‌ಗಳನ್ನು ಮಾಡಲಾಯಿತು. ಎಲ್ಲ ಟ್ರಿಪ್‌ಗಳಲ್ಲಿಯೂ ಚಿರತೆಗಳು ಪ್ರವಾಸಿಗರಿಗೆ ಕಂಡವು. ರಸ್ತೆ ಪಕ್ಕದಲ್ಲಿಯೇ ಚಿರತೆಗಳು ಖುಷಿಯಿಂದ ಓಡಾಡುತ್ತಿರುವ ದೃಶ್ಯ ಪ್ರವಾಸಿಗರಿಗೆ ಮುದ ನೀಡಿತು ಎಂದು ಉದ್ಯಾನದ ವಾಹನ ಚಾಲಕ ಜನಾರ್ಧನ್‌ ಹೇಳಿದರು. ಸಫಾರಿಯಲ್ಲಿ ಚಿರತೆಗಳನ್ನು ನೋಡಲು ಪ್ರವಾಸಿಗರು ಮುಗಿಬಿದ್ದರು ಎಂದು ಸಫಾರಿ ಕೆಎಸ್‌ಟಿಡಿಸಿ ಚಾಲಕ ರಾಮಕೃಷ್ಣ ಹೇಳಿದರು.

₹4.50 ಕೋಟಿ ವೆಚ್ಚ

ಸುಮಾರು 20 ಹೆಕ್ಟೇರ್‌ ಪ್ರದೇಶವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಚಿರತೆ ಸಫಾರಿಗಾಗಿ ಮೀಸಲಿಡಲಾಗಿದೆ. ಈ ಪ್ರದೇಶದಲ್ಲಿ ಸುತ್ತಲೂ ಚೈನ್‌ ಲಿಂಕ್‌ ಮೆಸ್‌ ಮತ್ತು ರೈಲ್ವೆ ಕಂಬಿಗಳೊಂದಿಗೆ ಭದ್ರ ಪಡಿಸಲಾಗಿದೆ. ಅಂದಾಜು ₹4.50 ಕೋಟಿ ವೆಚ್ಚದಲ್ಲಿ ಈ ಸಫಾರಿ ತಲೆ ಎತ್ತಿದೆ. ಸಫಾರಿ ಪ್ರದೇಶವು ನೈಸರ್ಗಿಕ ಬಂಡೆ ಮತ್ತು ಕಾಡಿನಂತಹ ವಾತಾವರಣದೊಂದಿಗೆ ಆವರಿಸಿರುವುದರಿಂದ ಸಂಪೂರ್ಣ ಪ್ರದೇಶ ಚಿರತೆಗಳ ಆವಾಸಕ್ಕೆ ಉತ್ತಮ ಪ್ರದೇಶವಾಗಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ, ವನ್ಯ ಪ್ರಾಣಿಗಳ ಸಂಘರ್ಷದಿಂದಾಗಿ ಗಾಯಗೊಂಡಿರುವ ಅಥವಾ ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಗಳನ್ನು ಸಂರಕ್ಷಿಸಿ ಚಿಕಿತ್ಸೆ ಮತ್ತು ಪುನರ್ವಸತಿಗೆ ಬನ್ನೇರುಘಟ್ಟಕ್ಕೆ ತರಲಾಗುತ್ತಿದೆ. ಈ ಮರಿಗಳು ಗುಂಪಿನೊಂದಿಗೆ ಹೊಂದಾಣಿಕೆಯಾದ ನಂತರ ಅವುಗಳನ್ನು ಚಿರತೆ ಸಫಾರಿಗೆ ಸ್ಥಳಾಂತರಿಸಿ ಅವುಗಳು ಮೂಲ ಆವಾಸಸ್ಥಾನದಲ್ಲಿಯೇ ಇರುವಂತೆ ಸಫಾರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್‌ ತಿಳಿಸಿದರು.

ಚಿರತೆ ಸಫಾರಿಯಲ್ಲಿ ಆರು ಮಂದಿ ಪ್ರಾಣಿ ಪಾಲಕರಿದ್ದು ಚಿರತೆಗಳ ನಿರ್ವಹಣೆ ಮಾಡಲಿದ್ದಾರೆ. ಸಫಾರಿಯಲ್ಲಿ ಎರಡು ಪ್ರಾಣಿ ಸಂಕಿರ್ಣಗಳನ್ನು ನಿರ್ಮಿಸಲಾಗಿದೆ. ಪ್ರತಿ ಸಂಕಿರ್ಣದಲ್ಲಿ ಆರು ಪ್ರಾಣಿ ಮನೆಗಳನ್ನು ನಿರ್ಮಿಸಲಾಗಿದೆ. ಇದಕ್ಕೆ ಹೊಂದಿಕೊಂಡಂತೆ ಸಣ್ಣ ಕ್ರಾಲ್‌ ಪ್ರದೇಶವನ್ನು ನಿರ್ಮಿಸಲಾಗಿದೆ. 

ಬನ್ನೇರುಘಟ್ಟದಲ್ಲಿನ ಚಿರತೆ ಸಫಾರಿಯಲ್ಲಿ ವಿರಮಿಸುತ್ತಿರುವ ಚಿರತೆ
ಬನ್ನೇರುಘಟ್ಟದಲ್ಲಿನ ಚಿರತೆ ಸಫಾರಿಯಲ್ಲಿ ವಿರಮಿಸುತ್ತಿರುವ ಚಿರತೆ
ಚಿರತೆ ಆಕರ್ಷಕ ನೋಟ
ಚಿರತೆ ಆಕರ್ಷಕ ನೋಟ
ಸಫಾರಿಯ ಮೊದಲನೇ ದಿನ ಕಂಡು ಬಂದ ಬಂಡೆ ಕಲ್ಲಿನ ಮೇಲೆ ವಿರಮಿಸುತ್ತಿರುವ ಚಿರತೆ. 
ಸಫಾರಿಯ ಮೊದಲನೇ ದಿನ ಕಂಡು ಬಂದ ಬಂಡೆ ಕಲ್ಲಿನ ಮೇಲೆ ವಿರಮಿಸುತ್ತಿರುವ ಚಿರತೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT