ಸೋಮವಾರ, ಆಗಸ್ಟ್ 10, 2020
21 °C
ಬೆಂಗಳೂರಿನ 200 ವಾರ್ಡ್‌ಗಳಿಗೆ 400 ಆಂಬುಲೆನ್ಸ್‌‌

ಗೌರವಯುತ ಶವ ಸಂಸ್ಕಾರ ಸರ್ಕಾರದಿಂದ ಮಾರ್ಗಸೂಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟವರ ಶವಸಂಸ್ಕಾರವನ್ನು ಗೌರವಯುತವಾಗಿ ನಡೆಸಲು ಮಾರ್ಗಸೂಚಿ ರೂಪಿಸಿರುವ ಸರ್ಕಾರ, ಅದನ್ನು ಪಾಲಿಸದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ.

ಅಲ್ಲದೆ, ಬೆಂಗಳೂರು ನಗರದಲ್ಲಿ ಪ್ರತಿ ಎರಡು ವಾರ್ಡ್‌ಗಳಿ‌ಗೆ ತಲಾ ಎರಡು ಆಂಬುಲೆನ್ಸ್‌ಗಳನ್ನು ನಿಗದಿ ಮಾಡಲಾಗುವುದು. 200 ವಾರ್ಡ್‌ಗಳಿಗೆ ಒಟ್ಟು 400 ಆಂಬುಲೆನ್ಸ್‌ಗಳನ್ನು ಕೋವಿಡ್‌ ನಿರ್ವಹಣೆಗೆ ಬಳಸಲು ತೀರ್ಮಾನಿಸಲಾಗಿದೆ.

ಶುಕ್ರವಾರ ನಡೆದ ಸಚಿವರ ಕಾರ್ಯಪಡೆ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಂಡಿದ್ದು, ಸಭೆಯ ಬಳಿಕ ಗೃಹ ಸಚಿವ
ಬಸವರಾಜ ಬೊಮ್ಮಾಯಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಆಂಬುಲೆನ್ಸ್‌ನಲ್ಲಿ ಯಾವ ರೀತಿ ತೆಗೆದುಕೊಂಡು ಹೋಗಬೇಕು. ಹಾಸಿಗೆಯಲ್ಲಿ ಅಸುನೀಗಿದ್ದರೆ ಯಾವ ರೀತಿಯ ಜಾಗ್ರತೆ ವಹಿಸಬೇಕು. ಬಳ್ಳಾರಿ ಘಟನೆ ಹಿನ್ನೆಲೆಯಲ್ಲಿ ಗೌರವಯುತವಾಗಿ ಶವಸಂಸ್ಕಾರ ನಡೆಸಲು ಮಾರ್ಗಸೂಚಿಗೆ ಇನ್ನೂ ಎರಡು– ಮೂರು ಅಂಶಗಳನ್ನು ಸೇರಿಸಲಾಗಿದೆ ಎಂದು ಸಚಿವ ಸುಧಾಕರ್‌ ತಿಳಿಸಿದರು.

775 ಹೆಚ್ಚುವರಿ ಹಾಸಿಗೆ: ಬೆಂಗಳೂರು ನಗರದ ವಿಕ್ಟೋರಿಯಾ, ರಾಜೀವ್‌ ಗಾಂಧಿ ಎದೆರೋಗಗಳ ಸಂಸ್ಥೆ ಮತ್ತು

ಬೌರಿಂಗ್ ಆಸ್ಪತ್ರೆಗಳನ್ನು‌ ಹೊರತುಪಡಿಸಿ, ಉಳಿದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಧಿಕ ಆಮ್ಲಜನಕ ಪೂರೈಕೆಯ 775 ಹಾಸಿಗೆಗಳನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ ಎಂದು ಬಸವರಾಜ‌ ಬೊಮ್ಮಾಯಿ ತಿಳಿಸಿದರು.

ಜಿಲ್ಲಾ ಕೋವಿಡ್‌ ಪ್ರಯೋಗಾಲಯಗಳಲ್ಲಿ ಸಾಮರ್ಥ್ಯಕ್ಕೆ ತಕ್ಕಷ್ಟು ಪರೀಕ್ಷೆಗಳನ್ನು ನಡೆಸುತ್ತಿಲ್ಲ. ಸಾಮರ್ಥ್ಯ ಹೆಚ್ಚಿಸಲು ಹೆಚ್ಚುವರಿ ಕಾರ್ಯದರ್ಶಿಯವರ ನೇತೃತ್ವದಲ್ಲಿ ಈ ಕಾರ್ಯ ನಿರ್ವಹಿಸಲಾಗುವುದು. ಇದರಿಂದ ಬೆಂಗಳೂರಿನ ಪ್ರಯೋಗಾಲಯಗಳ ಮೇಲೆ ಹೊರೆ ಬೀಳುವುದನ್ನು ತಪ್ಪಿಸಬಹುದು ಎಂದರು.

ಸಿಬಿಐ ತನಿಖೆಗೂ ಸಿದ್ಧ–ಸುಧಾಕರ್‌
‘ಕೋವಿಡ್‌ ನಿರ್ವಹಣೆಗೆಂದು ಸರ್ಕಾರ ಖರೀದಿಸಿದ ವೈದ್ಯಕೀಯ ಉಪಕರಣಗಳು ಮತ್ತು ಖರ್ಚು ಮಾಡಿದ ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇವೆ. ಕೊರೊನಾ ಸೋಂಕು ತಗ್ಗುವವರೆಗೆ ಸ್ವಲ್ಪ ತಾಳ್ಮೆ ವಹಿಸಲಿ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಸಾವಿರಾರು ಕೋಟಿ ಹಗರಣ ಆಗಿದೆ ಎಂಬ ಆರೋಪ ಅಚ್ಚರಿ ತಂದಿದೆ. ಸಿಬಿಐ ಸೇರಿದಂತೆ ಯಾವುದೇ ತನಿಖೆಗೂ ಸಿದ್ಧ ಎಂದು ಅವರು ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು