ಶನಿವಾರ, ಜುಲೈ 24, 2021
22 °C

ಸೋಂಕು ಲಕ್ಷಣವಿದ್ದರೆ ಮಾತ್ರ ಪರೀಕ್ಷೆ: ನಿಯಮಾವಳಿ ಬದಲಿಸಿದ ಆರೋಗ್ಯ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಾರಾಷ್ಟ್ರದಿಂದ ಬಂದವರಿಗೂ ಕೋವಿಡ್ ಪರೀಕ್ಷೆಯ ನಿಯಮಾವಳಿ ಸಡಿಲಿಸಿರುವ ಆರೋಗ್ಯ ಇಲಾಖೆ, 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಅವಧಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವರಿಗೆ ಮಾತ್ರ ಪರೀಕ್ಷೆ ಮಾಡಲು ನಿರ್ಧರಿಸಿದೆ. 

ಮಹಾರಾಷ್ಟ್ರದಿಂದ ಬಂದವರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದ ಪರಿಣಾಮ ಅಲ್ಲಿಂದ ವಾಪಸ್ ಆದವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿ, ಕೋವಿಡ್ ಪರೀಕ್ಷೆ ನಡೆಸಲಾಗುತ್ತಿತ್ತು. ಮನೆಗೆ ತೆರಳುವ ವೇಳೆ ಇನ್ನೊಮ್ಮೆ ಪರೀಕ್ಷೆ ನಡೆಸಿ,  ಖಚಿತಪಡಿಸಿಕೊಳ್ಳಲಾಗುತ್ತಿತ್ತು. ಒಂದು ವೇಳೆ ಸೋಂಕಿತರಾಗಿರುವುದು ಖಚಿತವಾದಲ್ಲಿ ಕೂಡಲೇ ಕೋವಿಡ್–19 ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗುತ್ತಿತ್ತು.

ಕರ್ನಾಟಕ ಕೋವಿಡ್‌ ವಾರ್‌ ರೂಮ್ ವಿಶ್ಲೇಷಣೆಯ ಪ್ರಕಾರ ರಾಜ್ಯದಲ್ಲಿ ಈವರೆಗೆ ವರದಿಯಾಗಿರುವ ಒಟ್ಟು ಪ್ರಕರಣಗಳಲ್ಲಿ ಶೇ 96 ರಷ್ಟು ಮಂದಿಗೆ ಸೋಂಕಿನ ಲಕ್ಷಣಗಳೇ ಗೋಚರಿಸಿಲ್ಲ. ಇನ್ನೊಂದೆಡೆ ಸಾಂಸ್ಥಿಕ ಕ್ವಾರಂಟೈನ್‌ ಮುಗಿಸಿ, ಮನೆಗೆ ತೆರಳಿದ ಬಳಿಕ ಕೆಲವರು ಸೋಂಕಿತರಾಗುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಲಕ್ಷಣ ಗೋಚರಿಸದವರಿಗೆ ಪರೀಕ್ಷಾ ವಿನಾಯಿತಿ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ.

ಗರ್ಭಿಣಿಯರಿಗೆ ವಿನಾಯಿತಿ: ಗರ್ಭಿಣಿ, 10 ವರ್ಷದ ಒಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟ ವೃದ್ಧರು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಮನೋರೋಗದ ಸಮಸ್ಯೆ ಎದುರಿಸುತ್ತಿರುವವರಿಗೆ ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ. ಮಹಾರಾಷ್ಟ್ರದಿಂದ ಹೊರತುಪಡಿಸಿ ಇತರೆ ರಾಜ್ಯಗಳಿಂದ ಬಂದವರು ಮನೆಯಲ್ಲಿಯೇ 14 ದಿನಗಳು ಕ್ವಾರಂಟೈನ್‌ಗೆ ಒಳಪಡಬೇಕು.

ಸಂದರ್ಶಕರಿಗೆ 7 ದಿನಗಳ ಅವಕಾಶ
ವ್ಯಾಪಾರ ವ್ಯವಹಾರಗಳ ಸಂಬಂಧ ಹೊರ ರಾಜ್ಯಗಳಿಂದ ಬರುವವರು ತಮ್ಮ ವಿಳಾಸದೊಂದಿಗೆ ತಾವು ಭೇಟಿ ಮಾಡುವವರ ಸಂಪೂರ್ಣ ಮಾಹಿತಿ ನೀಡಬೇಕು. 7 ದಿನಗಳಿಗೂ ಹೆಚ್ಚಿನ ಅವಧಿ ಇರಲು ಅವಕಾಶವಿಲ್ಲ. ವಾಪಸ್ ತೆರಳುವ ಮುಂಗಡ ಟಿಕೆಟ್ ಸಹ ಮೊದಲೇ ಹಾಜರುಪಡಿಸಬೇಕು. ಒಂದು ವೇಳೆ ವ್ಯಾಪಾರ ವಿಚಾರವಾಗಿ ರಸ್ತೆ ಮಾರ್ಗವಾಗಿ ಬಂದಲ್ಲಿ ಭೇಟಿ ಮಾಡುವವರ ವಿಳಾಸ ಸೇರಿದಂತೆ ವಿವರವಾದ ಮಾಹಿತಿ ಒದಗಿಸಬೇಕು. 48 ಗಂಟೆಗಳ ಅಲ್ಪಾವಧಿ ಭೇಟಿ ಸಂಬಂಧ ಬರುವವರಿಗೆ ಕೋವಿಡ್ ಪರೀಕ್ಷೆ ಹಾಗೂ ತಪಾಸಣೆ ಅಗತ್ಯ ಇರುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು