ಸೋಮವಾರ, ಏಪ್ರಿಲ್ 12, 2021
29 °C
ಅನ್ಯ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಳ

ಕೋವಿಡ್‌ ನಿಯಂತ್ರಣ: ಕಟ್ಟೆಚ್ಚರ ವಹಿಸಲು ಬಿಬಿಎಂಪಿ ಆಯುಕ್ತರ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅಕ್ಕಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಪಂಜಾಬ್, ಮಧ್ಯಪ್ರದೇಶ, ಚತ್ತೀಸ್‌ಘಡ ರಾಜ್ಯಗಳಲ್ಲೂ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬರುತ್ತಿವೆ. ಆದ್ದರಿಂದ ನಗರದಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಿಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಆರೋಗ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಕುರಿತು ಆಯುಕ್ತರು ಎಲ್ಲಾ ವಲಯಗಳ  ಜಂಟಿ ಆಯುಕ್ತರು, ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಜೊತೆ ವಿಡಿಯೊ ಸಂವಾದವನ್ನು ಭಾನುವಾರ ನಡೆಸಿದರು.

‘ಕೆಲದಿನಗಳಿಂದ ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಪರೀಕ್ಷೆಗೊಳಗಾಗುವವರಲ್ಲಿ ಸೋಂಕು ಪತ್ತೆ ಪ್ರಮಾಣ ಹಾಗೂ ಈ ಸೋಂಕಿನಿಂದ ಮರಣ ಹೊಂದುವವರ ಪ್ರಮಾಣವೂ ಹೆಚ್ಚುತ್ತಿದೆ. ಹಾಗಾಗಿ ರೋಗ ನಿಯಂತ್ರಣದ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಕೋವಿಡ್ ಹೊಸ ಪ್ರಕರಣಗಳು ಹಾಗೂ ಹೆಚ್ಚು ಪ್ರಕರಣಗಳು ಕಂಡುಬರುವ ಕ್ಲಸ್ಟರ್‌ಗಳಲ್ಲಿ ವ್ಯವಸ್ಥಿತವಾಗಿ ಯೋಜನೆ ರೂಪಿಸಿಕೊಂಡು ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆಗಳನ್ನು ತ್ವರಿತವಾಗಿ ಹೆಚ್ಚಳ ಮಾಡಬೇಕು. ಕೋವಿಡ್ ಪರೀಕ್ಷೆ ನಡೆಸಲೆಂದು 500 ತಂಡಗಳನ್ನು ಅಣಿಗೊಳಿಸಲಾಗಿದೆ. ಲಭ್ಯ ಇರುವ ಸಿಬ್ಬಂದಿಯನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ಕೋವಿಡ್‌ ಪರೀಕ್ಷೆಗಳನ್ನು ನಡೆಸಬೇಕು. ಸೋಂಕಿತರ ಜೊತೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದವರನ್ನು ಪತ್ತೆಹಚ್ಚಿ ಪರೀಕ್ಷೆಗೆ ಒಳಪಡಿಸಬೇಕು. ಆರೋಗ್ಯಾಧಿಕಾರಿಗಳ ಜೊತೆಗೆ ಕಂದಾಯ ಅಧಿಕಾರಿಗಳನ್ನು ಹಾಗೂ ಎಂಜಿನಿಯರ್‌ಗಳನ್ನೂ ಈ ಉದ್ದೇಶಕ್ಕೆ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಕ್ರಮವಹಿಸಬೇಕು. ಶೀತ ಜ್ವರ, ತೀವ್ರ ಉಸಿರಾಟದ ತೊಂದರೆ ಹೊಂದಿರುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡುವಂತೆ ನೋಡಿಕೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ತಮ್ಮ ವ್ಯಾಪ್ತಿಯಲ್ಲಿ ಕೋವಿಡ್ ಪತ್ತೆಯಾದ ಪ್ರಕರಣಗಳ ವರದಿಯನ್ನು ಪ್ರತಿನಿತ್ಯ ಕೇಂದ್ರ ಕಚೇರಿಗೆ ಸಲ್ಲಿಸಬೇಕು. ಯಾವುದೇ ಪ್ರಕರಣ ಕಂಡುಬರದಿದ್ದರೆ ಶೂನ್ಯ ಪ್ರಕರಣ ಎಂದು ವರದಿಯನ್ನು ನೀಡಬೇಕು’ ಎಂದು ಸೂಚನೆ ನೀಡಿದರು.

‘ನಗರದ ಆಸ್ಪತ್ರೆಗಳಲ್ಲಿ ರೋಗಿಗಳು ಕೋವಿಡ್‌ನಿಂದ ಮೃತಪಟ್ಟರೆ, ಪಾಲಿಕೆಗೆ ಅದೇ ದಿನ ವರದಿ ನೀಡಬೇಕು. ಎಷ್ಟು ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂಬ ನಿಖರ ಮಾಹಿತಿಯನ್ನು ಒದಗಿಸಬೇಕು. ಈ ಸಂಬಂಧ ಪ್ರತಿವಲಯದಲ್ಲೂ ವಾರಕ್ಕೊಮ್ಮೆ ಪರಿಶೀಲನೆ ಸಭೆ ನಡೆಸಬೇಕು’ ಎಂದು ಆಯುಕ್ತರು ಸೂಚಿಸಿದರು.

ವಿಶೇಷ ಆಯುಕ್ತರಾದ ರಾಜೇಂದ್ರ ಚೋಳನ್, ತುಳಸಿ ಮದ್ದಿನೇನಿ, ಡಿ.ರಂದೀಪ್, ರವೀಂದ್ರ ಅವರು ಸಲಹೆ ನೀಡಿದರು. 

‘ಮದುವೆ ಮನೆಗೆ ಮಾರ್ಷಲ್‌ಗಳನ್ನು ಕಳುಹಿಸಿ’ 

‘ಸಾಮಾಜಿಕ ಸಮಾರಂಭಗಳು, ಕಾರ್ಯಕ್ರಮಗಳು, ಮದುವೆ ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಕೊರೊನಾ ಸೋಂಕಿತರು ಇಂತಹ ಸಮಾರಂಭಗಳಲ್ಲಿ ಭಾಗವಹಿಸಿದರೆ, ಸೋಂಕು ತೀವ್ರಗತಿಯಲ್ಲಿ ಹರಡಲಿದೆ. ಸೂಪರ್‌ ಸ್ಪ್ರೆಡರ್‌ ಆಗಬಲ್ಲ ಕಾರ್ಯಕ್ರಮಗಳ ಬಗ್ಗೆ ಎಚ್ಚರವಹಿಸುವ ಅಗತ್ಯವಿದೆ’ ಎಂದು ಬಿಬಿಎಂಪಿ ಆಯುಕ್ತರು ನೆನಪಿಸಿದರು.

‘ನಗರದಲ್ಲಿ ಮದುವೆ ಸಮಾರಂಭಗಳು ನಡೆಯುವ ಕಡೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡುವ ಕುರಿತ ಭಿತ್ತಿಪತ್ರಗಳನ್ನು ಅಂಟಿಸಬೇಕು. ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮ ಪಾಲನೆ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಮಾರ್ಷಲ್‌ಗಳನ್ನು ಸಮಾರಂಭಗಳಿಗೆ ಕಳುಹಿಸಬೇಕು’ ಎಂದು ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

‘ಕಲ್ಯಾಣಮಂಟಪದ ಮಾಲೀಕರ ಸಂಘದ ಜೊತೆ ಶೀಘ್ರವೇ ಸಭೆ ನಡೆಸಿ ಕೋವಿಡ್ ನಿಯಂತ್ರಣ ನಿಯಮಗಳ ಪಾಲನೆ ಮಾಡುವ ಜಾಗೃತಿ ಮೂಡಿಸಲಾಗುತ್ತದೆ’ ಎಂದರು. 

‘ಶಾಲಾ ಕಾಲೇಜುಗಳಿಗೆ ಆರೋಗ್ಯ ತಂಡ ಭೇಟಿ’

ನಗರದಲ್ಲಿ ಈಗಾಗಲೇ ಶಾಲಾ-ಕಾಲೇಜುಗಳು ಪ್ರಾರಂಭವಾಗಿವೆ. ಪಾಲಿಕೆಯ ಆರೋಗ್ಯ ಸಿಬ್ಬಂದಿಯ ತನಿಖಾ ತಂಡವು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಕೋವಿಡ್ ಪ್ರಕರಣಗಳು ಕಂಡುಬರುವ ಬಗ್ಗೆ, ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ವಿಚಾರಣೆ ನಡೆಸಲಿದೆ.

‘ಶಾಲಾ– ಕಾಲೇಜುಗಳು ವಿದ್ಯಾರ್ಥಿಗಳ ಪಟ್ಟಿ ಮತ್ತು ಸಿಬ್ಬಂದಿಯ ಪಟ್ಟಿಯನ್ನು ತನಿಖಾ ತಂಡಕ್ಕೆ ಒದಗಿಸಬೇಕು. ವಿದ್ಯಾರ್ಥಿಗಳಲ್ಲಿ ಹಾಗೂ ಸಿಬ್ಬಂದಿಯಲ್ಲಿ ಸೋಂಕು ಲಕ್ಷಣಗಳು ಕಂಡುಬಂದರೆ ತನಿಖಾ ತಂಡಕ್ಕೆ ಮಾಹಿತಿ ಒದಗಿಸಬೇಕು’ ಎಂದು ಮಂಜುನಾಥ ಪ್ರಸಾದ್ ಸೂಚಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು