ಶುಕ್ರವಾರ, ಜೂನ್ 18, 2021
28 °C
ಆಸ್ಪತ್ರೆಗಳಲ್ಲಿ ಶೇ 40ರಷ್ಟು ಹಾಸಿಗೆಗಳು ಖಾಲಿ: ಮಂಜುನಾಥ ಪ್ರಸಾದ್‌

ಜನರಲ್ಲಿ ದೂರವಾಗುತ್ತಿದೆ ಕೊರೊನಾ ಭಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜನರ ಮನಸ್ಸಿನಲ್ಲಿ ಕೋವಿಡ್‌ ಕುರಿತು ಆರಂಭದಲ್ಲಿ ಇದ್ದ ಭಯ ಕ್ರಮೇಣ ದೂರವಾಗುತ್ತಿದೆ. ಕೊರೊನಾ ಸೋಂಕಿತರು ಧೈರ್ಯದಿಂದ ಮನೆಯಲ್ಲೇ ಆರೈಕೆ ಒಳಗಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ಹಾಸಿಗೆ ಸಿಗುತ್ತಿಲ್ಲ ಎಂಬ ದೂರುಗಳೂ ಕಡಿಮೆಯಾಗಿವೆ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್‌ ತಿಳಿಸಿದರು.

ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಕೋವಿಡ್‌ ಸೋಂಕು ದೃಢಪಟ್ಟ ಬಿಬಿಎಂಪಿಯ ಬಹುತೇಕ ಅಧಿಕಾರಿಗಳು ಮನೆಯಲ್ಲೇ ಆರೈಕೆಗೆ ಒಳಗಾಗಿ ಗುಣಮುಖರಾಗಿದ್ದಾರೆ. ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟ ಶೇ 40ರಷ್ಟು ಹಾಸಿಗೆಗಳು ಖಾಲಿ ಇವೆ. ಈಗ ಶೇ 50ರಷ್ಟು ಹಾಸಿಗೆ ಕಾಯ್ದಿರಿಸಿದರೂ ರೋಗಿಗಳೇ ದಾಖಲಾಗುತ್ತಿಲ್ಲ. ಕೋವಿಡ್‌ ಆರೈಕೆ ಕೇಂದ್ರಗಳಲ್ಲೂ 2,869 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 1,707 ಹಾಸಿಗೆಗಳು ಖಾಲಿ ಇವೆ. ಬಿಐಇಸಿಯ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಸಾರ್ವಜನಿಕರಿಗೆ 5,000 ಹಾಸಿಗೆ ವ್ಯವಸ್ಥೆ ಮಾಡಿದ್ದರೂ 1,500ರಷ್ಟು ಮಾತ್ರ ಬಳಸಲಾಗುತ್ತಿದೆ’ ಎಂದು ವಿವರಿಸಿದರು.

‘ಕೋವಿಡ್‌ ಪರೀಕ್ಷೆಗಳ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದೇವೆ. ಈ ಹಿಂದೆ ನಿತ್ಯ 2 ಸಾವಿರ ಪರೀಕ್ಷೆ ನಡೆಸಲಾಗುತ್ತಿತ್ತು. ಸೋಮವಾರ 25,359 ಜನರ ಪರೀಕ್ಷೆ ನಡೆಸಿದ್ದೇವೆ’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಸದಸ್ಯ ಡಾ.ರಾಜು, ‘ನಿತ್ಯ 20 ಸಾವಿರ ಮಂದಿಯ ಪರೀಕ್ಷೆ ನಡೆಸಲೇ ಬೇಕು ಎಂದು ಕಡ್ಡಾಯ ಮಾಡುವುದು ಒಳ್ಳೆಯದಲ್ಲ. ಇದರಿಂದ ಆರೋಗ್ಯಾಧಿಕಾರಿಗಳ ಮೇಲೆ ಅನಗತ್ಯ ಒತ್ತಡ ಬೀಳುತ್ತಿದೆ. ಅನಗತ್ಯ ಪರೀಕ್ಷೆ ನಡೆಸಿದರೆ ₹ 450 ವ್ಯರ್ಥ ಮಾಡಿದಂತೆ’ ಎಂದರು.

‘ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಪ್ರಕಾರ, ಸೋಂಕಿತರ ನೇರ ಹಾಗೂ ಪರೋಕ್ಷ ಸಂಪರ್ಕಕ್ಕೆ ಬಂದವರು, ಕಂಟೈನ್‌ಮೆಂಟ್‌ ಪ್ರದೇಶದವರು, ಐಎಲ್‌ಐ ಮತ್ತು ಸಾರಿ ಲಕ್ಷಣ ಇರುವವರು ಹಾಗೂ ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಮಾತ್ರ ಕೋವಿಡ್‌ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ. ಇಂಥಹವರ ಸಂಖ್ಯೆಯೇ ದಿನಕ್ಕೆ 20 ಸಾವಿರ ದಾಟುತ್ತಿದೆ’ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

‘ಕೋವಿಡ್‌ ಬಿಕ್ಕಟ್ಟು–ದುರ್ಬಳಕೆ ಮಾಡಿದರೆ ಕಠಿಣ ಕ್ರಮ’
‘ಕೆಲವರು ಕೋವಿಡ್‌ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸ್ವಂತ ಲಾಭಕ್ಕಾಗಿ ದುರ್ಬಳಕೆ ಮಾಡುತ್ತಿರುವ ದೂರುಗಳಿವೆ. ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಅಮರಜ್ಯೋತಿ ನಗರದಲ್ಲಿ ಕೋವಿಡ್‌ ಸೋಂಕು ಪತ್ತೆಯಾದ ವ್ಯಕ್ತಿಯ ಮನೆಗೆ ಸ್ಟಿಕ್ಕರ್‌ ಅಂಟಿಸದಿರಲು ದುಡ್ಡು ಕೇಳಿದ ದೂರು ಬಂದಿದೆ. ಇಂಥ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಆಯುಕ್ತರು ಎಚ್ಚರಿಕೆ ನೀಡಿದರು.

‘ಬಿಬಿಎಂಪಿ ಕಳುಹಿಸಿದ ಕೋವಿಡ್‌ ರೋಗಿಗಳಿಂದ ಖಾಸಗಿ ಆಸ್ಪತ್ರೆಗಳು ಶುಲ್ಕ ಪಡೆಯುವುದಿಲ್ಲ. ಆದರೆ, ಔಷಧ ಮತ್ತು ಊಟಕ್ಕೆ ಹಣ ವಸೂಲಿ ಮಾಡುತ್ತಿವೆ’ ಎಂದು ಪಾಲಿಕೆ ಸದಸ್ಯೆಯೊಬ್ಬರು ದೂರಿದರು.

‘ಕೋವಿಡ್‌ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಟೈಲರ್‌ ಅವರನ್ನು ಆಸ್ಪತ್ರೆಯವರು ಎರಡೇ ದಿನಕ್ಕೆ ಮನೆಗೆ ವಾಪಸ್‌ ಕಳಿಸಿದರು. ಮಧುಮೇಹ ಹೊಂದಿದ್ದ ಅವರಿಗೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಬಳಿಕ ಮತ್ತೊಂದು ಖಾಸಗಿ ಕ್ಲಿನಿಕ್‌ನಲ್ಲಿ ಆಕ್ಸಿಜನ್‌ ಪಡೆಯಬೇಕಾಯಿತು. ನಿರ್ಲಕ್ಷ್ಯ ಮಾಡಿದ ಆಸ್ಪತ್ರೆ ವಿರುದ್ಧ ಕ್ರಮಕೈಗೊಳ್ಳಿ’ ಎಂದು ಅವರು ಒತ್ತಾಯಿಸಿದರು. 

‘ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಪೂರೈಕೆ ವ್ಯವಸ್ಥೆ ಇಲ್ಲದೇ ರೋಗಿಗಳನ್ನು ಸ್ಥಳಾಂತರಿಸುವ ಪರಿಸ್ಥಿತಿ ಇದೆ. ಕಂಟೈನ್‌ಮೆಂಟ್‌ ನಿಯಮಗಳನ್ನೂ ಪಾಲಿಸಲಾಗುತ್ತಿಲ್ಲ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ಪಾಲಿಕೆ ಸಡಿಲ ಬಿಟ್ಟಿದೆ’ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಆರೋಪಿಸಿದರು.

‘ಕಂಟೈನ್‌ಮೆಂಟ್‌: ಏಕರೀತಿ ದರ ನಿಗದಿ’
‘ಕಂಟೈನ್‌ಮೆಂಟ್‌ ಪ್ರದೇಶದ ನಿರ್ವಹಣೆಗೆ ಒಂದೊಂದು ವಾರ್ಡ್‌ಗಳಲ್ಲಿ ಒಂದೊಂದು ರೀತಿ ವೆಚ್ಚವಾಗುತ್ತಿದೆ. ಇವುಗಳ ನಿರ್ವಹಣೆಗೆ ಸಾವಿರಾರು ಕೋಟಿ ವೆಚ್ಚವಾಗಿದೆ ಎಂಬುದು ಊಹಾಪೋಹ. ಬಿಬಿಎಂಪಿಯಲ್ಲಿ ಇದಕ್ಕಾಗಿ ಇದುವರೆಗೆ ವೆಚ್ಚವಾಗಿರುವುದು ₹ 25 ಕೋಟಿಗಳಷ್ಟು ಮಾತ್ರ. ಅವುಗಳಲ್ಲೂ ಎರಡು ಬಿಲ್‌ ಹೊರತಾಗಿ ಉಳಿದವುಗಳ ಪಾವತಿ ಇನ್ನೂ ಬಾಕಿ ಇದೆ. ಏಕರೀತಿಯ ದರ ನಿಗದಿಪಡಿಸಿ ನಂತರವೇ ಬಿಲ್‌ ಪಾವತಿ ಮಾಡಲಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ದೇಶದಲ್ಲಿ ಅತಿ ಹೆಚ್ಚು ಕೋವಿಡ್‌ ಪ್ರಕರಣ ಪತ್ತೆಯಾದ ನವದೆಹಲಿಯಲ್ಲಿ 250 ಕಂಟೈನ್‌ಮೆಂಟ್‌ ಪ್ರದೇಶಗಳಿದ್ದರೆ ನಮ್ಮಲ್ಲಿ 12 ಸಾವಿರ ಇವೆ. ಇದು ಸರಿಯಲ್ಲ. ಹಾಗಾಗಿ ನಾವು 100 ಮೀ ವ್ಯಾಪ್ತಿಯ ಒಳಗೆ ಮೂರಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣ ಪತ್ತೆಯಾದರೆ ಮಾತ್ರ ಅಲ್ಲಿ ಬ್ಯಾರಿಕೇಡ್‌ ಅಳವಡಿಸಲಿದ್ದೇವೆ’ ಎಂದು ಆಯುಕ್ತರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು