ಮಂಗಳವಾರ, ಜೂನ್ 15, 2021
25 °C

ಕೋವಿಡ್: ಸಜ್ಜಾಗಲು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕೋವಿಡ್ ‍ಪ್ರಕರಣಗಳು ಹೆಚ್ಚಳವಾಗುತ್ತಿರುವ ಕಾರಣ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಗುರುತಿಸಿರುವ ಸರ್ಕಾರ, ಸೋಂಕಿತರ ಸಂಖ್ಯೆ ಇನ್ನಷ್ಟು ಏರಿಕೆ ಕಂಡಲ್ಲಿ ಚಿಕಿತ್ಸೆಗೆ ಸಜ್ಜಾಗಲು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದೆ.

ಈ ಸಂಬಂಧ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜತೆಗೆ ಸಭೆ ನಡೆಸಿ, ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಲಾಗಿದೆ. ಕಳೆದ ವರ್ಷ ಜೂನ್ ಬಳಿಕ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿ ಪಡೆಯುತ್ತಿದ್ದಂತೆ ಹಾಸಿಗೆಗಳ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಹಲವರು ಚಿಕಿತ್ಸೆ ಸಂಬಂಧ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ, ಖಾಸಗಿ ಆಸ್ಪತ್ರೆಗಳನ್ನು ವಿಶ್ವಾಸಕ್ಕೆ ಪಡೆದು, ಶಿಫಾರಸು ಅನುಸಾರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. 73 ಮಧ್ಯಮ ಮತ್ತು ದೊಡ್ಡ ಗಾತ್ರದ ಆಸ್ಪತ್ರೆಯನ್ನು ಗುರುತಿಸಲಾಗಿತ್ತು. ಈಗ 200ಕ್ಕೂ ಅಧಿಕ ಹಾಸಿಗೆಗಳಿರುವ ಆಸ್ಪತ್ರೆಗಳನ್ನು ಮಾತ್ರ ಮೊದಲ ಹಂತದಲ್ಲಿ ಚಿಕಿತ್ಸೆಗೆ ಆಯ್ಕೆ ಮಾಡಲು ಸರ್ಕಾರ ಮುಂದಾಗಿದೆ. 

ಸದ್ಯ ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿಕ್ಟೋರಿಯಾ, ಬೌರಿಂಗ್ ಮತ್ತು ಲೇಡಿ ಕರ್ಜನ್, ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯ ಜತೆಗೆ ಆರೋಗ್ಯ ಇಲಾಖೆಯಡಿ ಸೇವೆ ನೀಡುತ್ತಿರುವ ಕೆ.ಸಿ. ಜನರಲ್, ಜಯನಗರ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ 15 ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಹಾಸಿಗೆಗಳ ವ್ಯವಸ್ಥೆಯನ್ನು ಸಮರ್ಪಕವಾಗಿ ನೋಡಿಕೊಳ್ಳಲು ಪ್ರತಿ ಆಸ್ಪತ್ರೆಗೂ ತಲಾ ಒಬ್ಬರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಕೋರಮಂಗಲದ ಒಳಾಂಗಣ ಕ್ರೀಡಾಂಗಣ, ಹಜ್ ಭವನ ಹಾಗೂ ಜಿಕೆವಿಕೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ಸಜ್ಜುಗೊಳಿಸಿ, ಸೇವೆ ನೀಡಲು ಆರೋಗ್ಯ ಇಲಾಖೆಯು ಬಿಬಿಎಂಪಿಗೆ ಶಿಫಾರಸು ಮಾಡಿತ್ತು. ಈಗಾಗಲೇ ಕೊರಮಂಗಲದ ಒಳಾಂಗಣ ಕ್ರೀಡಾಂಗಣ ಚಿಕಿತ್ಸೆಗೆ ಸಜ್ಜಾಗಿದೆ.

‘ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿರುವುದರಿಂದ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಬಹುತೇಕ ಪ್ರಕರಣಗಳಲ್ಲಿ ಸೋಂಕಿತರಿಗೆ ಲಕ್ಷಣಗಳು ಬಹಿರಂಗವಾಗಿ ಗೋಚರಿಸುತ್ತಿಲ್ಲ. ಹೀಗಾಗಿ, ಅಂತಹವರಿಗೆ ಕೋವಿಡ್ ಆರೈಕೆ ಕೇಂದ್ರಗಳಲ್ಲಿಯೇ ಚಿಕಿತ್ಸೆ ಒದಗಿಸಬಹುದು. ಖಾಸಗಿ ಆಸ್ಪತ್ರೆಗಳ ಜತೆಗೆ ಕೂಡ ಮಾತುಕತೆ ನಡೆಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅರ್ಧಕ್ಕೂ ಅಧಿಕ ಹಾಸಿಗೆಗಳು ಭರ್ತಿಯಾದಲ್ಲಿ 200ಕ್ಕೂ ಅಧಿಕ ಹಾಸಿಗೆಗಳಿರುವ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಗುತ್ತದೆ. ಸದ್ಯ ತೀವ್ರ ನಿಗಾ ಘಟಕಗಳ (ಐಸಿಯು) ಹಾಸಿಗೆ ಕೂಡ ಕೊರತೆಯಿಲ್ಲ’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

 ‘ವೈದ್ಯಕೀಯ ಕಾಲೇಜುಗಳಲ್ಲಿ ವ್ಯವಸ್ಥೆ’

‘ಈ ಹಿಂದೆ ಕೋವಿಡ್‌ ಪ್ರಕರಣಗಳು ಏರಿಕೆ ಕಂಡಾಗ ಸರ್ಕಾರ ಶಿಫಾರಸು ಮಾಡಿದ ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗಿತ್ತು. ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲು ಸರ್ಕಾರ ತಿಳಿಸಿದೆ. ಮೊದಲು ವೈದ್ಯಕೀಯ ಕಾಲೇಜುಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿ ಕೂಡ ಹಾಸಿಗೆ ಭರ್ತಿಯಾದಲ್ಲಿ 200ಕ್ಕೂ ಅಧಿಕ ಹಾಸಿಗೆ ಒಳಗೊಂಡಿರುವ ಆಸ್ಪತ್ರೆಗಳನ್ನು ಗುರುತಿಸಿ, ಸೇವೆ ನೀಡಲಾಗುತ್ತದೆ’ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫಾನಾ) ಅಧ್ಯಕ್ಷ ಡಾ. ಪ್ರಸನ್ನ ಎಚ್.ಎಂ. ತಿಳಿಸಿದರು.

‘ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಕೆಲ ಪ್ರಕರಣಗಳ ಚಿಕಿತ್ಸಾ ವೆಚ್ಚವನ್ನು ಆಸ್ಪತ್ರೆಗಳಿಗೆ ಈವರೆಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಸಾಸ್ಟ್) ಪಾವತಿಸಿಲ್ಲ. ಆದಷ್ಟು ಬೇಗ ಚಿಕಿತ್ಸಾ ವೆಚ್ಚವನ್ನು ಒದಗಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ’ ಎಂದು ಹೇಳಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು