ಸೋಮವಾರ, ಮೇ 17, 2021
30 °C
ಕೋವಿಡ್‌ ಆಸ್ಪತ್ರೆಗಳಲ್ಲಿ ಲಸಿಕೆ ವಿತರಣೆ: ಆರೋಗ್ಯವಂತರಿಗೂ ಸೋಂಕು ತಗುಲುವ ಭೀತಿ

ಬೆಂಗಳೂರು: ‘ಲಸಿಕೆ ವಿತರಣೆಗೆ ಕ್ರೀಡಾಂಗಣ ಬಳಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ನಿಂದ ಪಾರಾಗಲು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಆಸ್ಪತ್ರೆಗೆ ಬರುತ್ತಿರುವವರಲ್ಲಿಯೇ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದೆ. ಕೋವಿಡ್‌ ಆಸ್ಪತ್ರೆಗಳಲ್ಲಿಯೇ ಲಸಿಕೆ ವಿತರಣೆ ಮಾಡುತ್ತಿರುವುದು ಇದಕ್ಕೆ ಕಾರಣ ಎಂದು ಹಿರಿಯ ನಾಗರಿಕರು ದೂರುತ್ತಾರೆ.

‘ಕೋವಿಡ್‌ ರೋಗಿಗಳಿರುವ ಆಸ್ಪತ್ರೆಯಲ್ಲಿಯೇ ಲಸಿಕೆ ವಿತರಣೆಯೂ ಮಾಡಲಾಗುತ್ತಿದೆ. ಅಂದರೆ, ಆರೋಗ್ಯವಾಗಿರುವವರೂ ಇಂತಹ ಅಪಾಯಕಾರಿ ಸ್ಥಳಗಳಿಗೆ ಬರಬೇಕಾಗಿದೆ. ಹೆಚ್ಚು ಜನ ಸೇರುತ್ತಿರುತ್ತಿರುವುದರಿಂದ ಅಂತರ ಕಾಪಾಡಿಕೊಳ್ಳುವುದಕ್ಕೂ ಆಗುತ್ತಿಲ್ಲ’ ಎಂದು ಹಿರಿಯ ನಾಗರಿಕ ಕೃಷ್ಣಮೂರ್ತಿ ದೂರಿದರು.

ಸಿ.ವಿ. ರಾಮನ್‌ ನಗರ ಮತ್ತು ಇಂದಿರಾ ನಗರದಲ್ಲಿ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದ ಅನೇಕರು ಇದೇ ರೀತಿ ಅಸಮಾಧಾನ ವ್ಯಕ್ತಪಡಿಸಿದರು.

‘ನಗರದ ದೊಡ್ಡ ಕ್ರೀಡಾಂಗಣಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲು ಅವಕಾಶವಿದೆ. ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಿ ಕಾರ್ಯಪ್ರವೃತ್ತರಾಗಬೇಕು. ವಿಶಾಲ ಮೈದಾನಗಳಲ್ಲಿ ಜನ ತಾವೇ ತಾವಾಗಿ ಅಂತರ ಕಾಪಾಡಿಕೊಳ್ಳುತ್ತಾರೆ. ಸೋಂಕು ತಗುಲುವ ಅಪಾಯವೂ ಇರುವುದಿಲ್ಲ. ಕೋವಿಡ್ ಆಸ್ಪತ್ರೆಗಳಲ್ಲಿನ ರೋಗಿಗಳಿಗೂ ತೊಂದರೆ ಉಂಟಾಗುವುದಿಲ್ಲ’ ಎಂದು ಅವರು ಸಲಹೆ ನೀಡಿದರು.

ಮಲ್ಲೇಶ್ವರದ ಫುಟ್‌ಬಾಲ್ ಮೈದಾನ, ನ್ಯಾಷನಲ್ ಕಾಲೇಜು ಮೈದಾನ, ಅರಮನೆ ಮೈದಾನ, ಕಂಠೀರವ ಕ್ರೀಡಾಂಗಣ, ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ ನಲ್ಲಿ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಬೇಕು ಎಂದು ಹಲವರು ಒತ್ತಾಯಿಸುತ್ತಾರೆ.

3 ಮೀಟರ್ ಅಂತರ ಅಗತ್ಯ: ‘ಎರಡನೇ ಅಲೆಯಲ್ಲಿ ವೈರಾಣು ತೀವ್ರವಾಗಿ ಹರಡುತ್ತಿದೆ. ಕೇವಲ 6 ಅಡಿ ಅಂತರ ಕಾಪಾಡಿಕೊಂಡರೂ ಪ್ರಯೋಜನವಾಗದು. ಕನಿಷ್ಠ 3 ಮೀಟರ್‌ ಅಂತರ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಎಷ್ಟೇ ವೈದ್ಯರು, ಶುಶ್ರೂಷಕರು ಕೆಲಸ ಮಾಡಿದರೂ, ಸಾವಿರಾರು ಐಸಿಯು ಹಾಸಿಗೆಗಳು ಇದ್ದರೂ ಯಾರೂ ಕಾಪಾಡಲು ಆಗುವುದಿಲ್ಲ. ಆದರೆ, ಆಸ್ಪತ್ರೆಗಳು ಚಿಕ್ಕದಿರುವುದರಿಂದ ಹೆಚ್ಚು ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ವೈದ್ಯರೊಬ್ಬರು ಹೇಳಿದರು.

ಮಾರ್ಗಸೂಚಿ ಪಾಲನೆ: ‘ಲಸಿಕೆ ಹಾಕಿಸಿಕೊಳ್ಳಲು ಕೋವಿಡ್‌ ಆಸ್ಪತ್ರೆಗೆ ಬರುತ್ತಿರುವವರಿಗೂ ಸೋಂಕು ತಗುಲುವ ಅಪಾಯ ಇರಬಹುದು. ಆದರೆ, ನಾವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಕೋವಿಡ್‌ ಮಾರ್ಗಸೂಚಿಗಳ ಅನ್ವಯವೇ ಲಸಿಕೆ ವಿತರಿಸಲಾಗುತ್ತಿದೆ’ ಎಂದು ಬೆಂಗಳೂರು ನಗರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅನ್ಸರ್ ಅಹಮದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಆಸ್ಪತ್ರೆಗಳ ಬದಲು ಕ್ರೀಡಾಂಗಣ ಅಥವಾ ಆಟದ ಮೈದಾನಗಳಲ್ಲಿ ಇದಕ್ಕೆ ವ್ಯವಸ್ಥೆ ಮಾಡುವುದು ಉತ್ತಮ ಸಲಹೆ. ಇದನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದೂ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು