ಗುರುವಾರ , ಮಾರ್ಚ್ 4, 2021
26 °C

ಬೆಂಗಳೂರಿನ ವಿವಿಧೆಡೆ ಸೀಲ್‌ಡೌನ್‌ಗಾಗಿ ₹25 ಕೋಟಿ ವೆಚ್ಚ: ಅವ್ಯವಹಾರದ ನಂಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ವ್ಯಾಪ್ತಿಯಲ್ಲಿ ಸೀಲ್‌ಡೌನ್‌ ಮಾಡಲಾಗಿರುವ ಪ್ರದೇಶ–ಸಾಂದರ್ಭಿಕ ಚಿತ್ರ

ಬೆಂಗಳೂರು: ‘ಸೋಂಕಿತರ ಮನೆಗಳನ್ನು ಕಂಟೈನ್‌ಮೆಂಟ್ ಮಾಡಲು ಖರ್ಚು ಮಾಡಿರುವ ಹಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇನೆ. ₹25 ಕೋಟಿ ವೆಚ್ಚ ಮಾಡಿರಬೇಕು ಎಂದು ಅಂದಾಜಿಸಲಾಗಿದೆ’ ಎಂದು ಪಾಲಿಕೆ ಆಯುಕ್ತ ಎನ್. ಮಂಜುನಾಥ ಪ್ರಸಾದ್  ಹೇಳಿದರು.

ಹಲವು ಕಂಟೈನ್‌ಮೆಂಟ್‌ ವಲಯಗಳಲ್ಲಿ ಕಟ್ಟಡಗಳ ಸೀಲ್‌ಡೌನ್‌ಗೆ ₹15,000ದಿಂದ ಕೆಲವು ಲಕ್ಷಗಳ ವರೆಗೂ ಖರ್ಚು ಮಾಡಲಾಗಿದೆ.

‘ಪಾಲಿಕೆ ಹಣವನ್ನು ಹತ್ತು ಬಾರಿ ಯೋಚನೆ ಮಾಡಿ ಖರ್ಚು ಮಾಡಬೇಕು. ಎರಡೂವರೆ ತಿಂಗಳ ಅವಧಿಯಲ್ಲಿ ಎಷ್ಟು ಕಂಟೈನ್‌ಮೆಂಟ್ ವಲಯ ಮಾಡಲಾಗಿದೆ, ಅದಕ್ಕೆ ಎಷ್ಟು ಖರ್ಚಾಗಿದೆ, ಅನುಮತಿ ಕೊಟ್ಟವರು ಯಾರು ಎಂಬುದರ ವರದಿ ತರಿಸಿಕೊಳ್ಳುತ್ತಿದ್ದೇನೆ’ ಎಂದರು. 

ಸೋಮವಾರ ವಲಯ ಎಂಜಿನಿಯರ್‌ಗಳ ಸಭೆ ನಡೆಸಿದ ಆಯುಕ್ತ ಮಂಜುನಾಥ ಪ್ರಸಾದ್‌, 'ಆರ್‌ಆರ್‌ ನಗರ ಒಂದರಲ್ಲಿಯೇ ಜೂನ್‌ ಮತ್ತು ಆಗಸ್ಟ್‌ ನಡುವೆ ಕಟ್ಟಡಗಳ ಸೀಲ್‌ಡೌನ್‌ಗಾಗಿ ₹1.5 ಕೋಟಿಯಿಂದ ₹2 ಕೋಟಿ ಖರ್ಚು ಮಾಡಲಾಗಿದೆ. ಕೆಲವು ವಲಯಗಳಲ್ಲಿ ಕಾರ್ಯಾಕಾರಿ ಎಂಜಿನಿಯರ್‌ಗಳು ಮನೆಗಳ ಸೀಲ್‌ಡೌನ್‌ಗಾಗಿ ಶೀಟ್‌ಗಳು ಹಾಗೂ ಇತರೆ ಸಾಮಗ್ರಿಗಳನ್ನು ಖರೀದಿಸಿದ್ದಾರೆ. ಅದೇ ಸಾಮಗ್ರಿಗಳನ್ನು ಪ್ರಕರಣಗಳು ದಾಖಲಾಗಿರುವ ಕಡೆಗೆ ಬಳಸಿಕೊಳ್ಳಲಾಗಿದೆ. ಆದರೆ, ಒಂದೇ ವಲಯದಲ್ಲಿ ಅಧಿಕಾರಿಗಳು ₹2 ಕೋಟಿ ಖರ್ಚು ಮಾಡಿದ್ದರೆ, ಎಲ್ಲ ವಲಯಗಳು ಸೇರಿ ನಾವು ₹20ರಿಂದ ₹25 ಕೋಟಿ ಖರ್ಚು ಮಾಡಿರಬಹುದು. ಎಲ್ಲರಿಗೂ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ' ಎಂದು ಹೇಳಿದರು.

100 ಮೀಟರ್ ಅಂತರದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಸೋಂಕಿತರಿದ್ದರೆ ಮಾತ್ರ ಆ ಪ್ರದೇಶವನ್ನು ಸೀಲ್‌ಡೌನ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಕಂಟೈನ್‌ಮೆಂಟ್ ವಲಯದ ಎಸ್ಒಪಿ (ಮಾರ್ಗದರ್ಶಿ ಸೂತ್ರ) ಬದಲಿಸಲಾಗುತ್ತಿದೆ.

‘ಈ ಹಿಂದೆ ಒಂದು ಪ್ರಕರಣ ಇದ್ದರೂ ಬ್ಯಾರಿಕೇಡ್‌, ತಗಡು ಮತ್ತು ಮರದ ಕಂಬ ಅಳವಡಿಸಿ ಸೀಲ್‌ಡೌನ್ ಮಾಡಲಾಗುತ್ತಿತ್ತು. ಈ ನಿಯಮ ಕೈಬಿಡಲು ನಿರ್ಧರಿಸಲಾಗಿದೆ. ಒಂದು ಅಥವಾ ಎರಡು ಪ್ರಕರಣ ಇದ್ದರೆ ಪೋಸ್ಟರ್ ಮಾತ್ರ ಹಾಕಿ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.

ನಗರದಲ್ಲಿ ಸದ್ಯ 14,767 ಕಂಟೈನ್‌ಮೆಂಟ್ ವಲಯಗಳಿವೆ.

‘ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಜನರು ಆತಂಕ ಪಡುವ ಅಗತ್ಯ ಇಲ್ಲ. ದಿನಕ್ಕೆ 20 ಸಾವಿರ ಜನರ ಪರೀಕ್ಷೆ ನಡೆಸುತ್ತಿರುವ ಕಾರಣ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚು ಪರೀಕ್ಷೆ ನಡೆಸಿ ಸೋಂಕಿತರನ್ನು ಐಸೊಲೇಷನ್ ಮಾಡಿಸುವುದರಿಂದ ಸೋಂಕು ಹರಡುವುದು ತಡೆಗಟ್ಟಿದಂತೆ ಆಗಲಿದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು