ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಯುನಲ್ಲಿ ಹಾಸಿಗೆ ಅಭಾವ ಉಂಟಾಗುವ ಆತಂಕ

21 ಸರ್ಕಾರಿ ಸಂಸ್ಥೆಗಳಲ್ಲಿ 47 ಹಾಸಿಗೆಗಳು ಮಾತ್ರ ಖಾಲಿ l ಐಸಿಯುವಿಗೆ ದಾಖಲಾಗುವವರ ಸಂಖ್ಯೆ ಏರಿಕೆ ಸಾಧ್ಯತೆ
Last Updated 8 ನವೆಂಬರ್ 2020, 23:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಒಂದು ತಿಂಗಳಿನಿಂದ ಕೋವಿಡ್ ಹೊಸ ಪ್ರಕರಣಗಳು ಹಾಗೂ ಮೃತರ ಸಂಖ್ಯೆ ಇಳಿಮುಖ ಕಂಡರೂ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುವವರ ಸಂಖ್ಯೆಯಲ್ಲಿ ವ್ಯತ್ಯಾಸವಾಗಿಲ್ಲ.

ಸದ್ಯ ನಗರದ 21 ಸರ್ಕಾರಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಿಂದ ಕೇವಲ 47 ಐಸಿಯು ಹಾಸಿಗೆಗಳು ಮಾತ್ರ ಖಾಲಿಯಿದ್ದು, ಚಳಿಗೆ ತೀವ್ರ ಅಸ್ವಸ್ಥಗೊಳ್ಳುವವರ ಸಂಖ್ಯೆ ಏರಿಕೆ ಕಂಡಲ್ಲಿ ಹಾಸಿಗೆಗಳ ಅಭಾವ ಸೃಷ್ಟಿಯಾಗಲಿದೆ.

ಕಳೆದ ತಿಂಗಳು ಇದೇ ವೇಳೆಗೆ 302 ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದರು. ಈಗ ಆ ಸಂಖ್ಯೆ 473ಕ್ಕೆ (ನ.6ರ ವೇಳೆಗೆ) ಏರಿದೆ. ಚಳಿಗಾಲದಲ್ಲಿ ವೃದ್ಧರು ಹಾಗೂ ಆಸ್ತಮಾ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಉಸಿ
ರಾಟದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಕೋವಿಡ್‌ ಪೀಡಿತರಲ್ಲಿಯೂ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಂಕೀರ್ಣ ಸ್ವರೂಪ ಪಡೆಯಬಹುದು ಎನ್ನುತ್ತಾರೆ ವೈದ್ಯರು.

ಆರೋಗ್ಯದ ಬಗ್ಗೆ ನಿಷ್ಕಾಳಜಿ: ಕೋವಿಡ್‌ ಪೀಡಿತರಲ್ಲಿ ಬಹುತೇಕರು ಮನೆಯಲ್ಲೇ ಆರೈಕೆಗೆ ಒಳಪಡುತ್ತಿದ್ದಾರೆ. ಹೀಗಾಗಿ ಸದ್ಯ 17 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದರೂ ಸರ್ಕಾರಿ ಕೋಟಾದಡಿ 3,014 ಸೋಂಕಿತರು ಮಾತ್ರ ಆಸ್ಪತ್ರೆಗಳು ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 8,592 ಹಾಸಿಗೆಗಳು ಅಲ್ಲಿ ಖಾಲಿಯಿವೆ. ಮನೆಯಲ್ಲೇ ಆರೈಕೆ ಪಡೆಯುತ್ತಿರುವವರು ಆರೋಗ್ಯದ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿರುವುದು ಹಾಗೂ ವೈದ್ಯರನ್ನು ಸಂಪರ್ಕಿಸದಿರುವ ಪರಿಣಾಮ ಅವರಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಪರಿಸ್ಥಿತಿ ಕೈಮೀರುವ ಹಂತದಲ್ಲಿ ಕೆಲವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದಾಗಿ ಐಸಿಯುವಿಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ತಜ್ಞರು ವಿಶ್ಲೇಷಿಸಿದರು.

‘ಚಳಿಗಾಲದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರಲಿದೆ. ಕೆಲವರು ಭಯಕ್ಕೆ ಒಳಗಾಗಿ ಸಮಸ್ಯೆ ತಂದೊಡ್ಡಿಕೊಳ್ಳುತ್ತಿದ್ದಾರೆ. ಅಂತಹವರಿಗೂ ಐಸಿಯುವಿಗೆ ದಾಖಲಿಸಲಾಗುತ್ತಿದೆ. ಮನೆ ಆರೈಕೆಗೆ ಒಳಗಾದವರು ಚಿಕಿತ್ಸೆಯ ಬಗ್ಗೆ ಅಸಡ್ಡೆ ಮಾಡಿದಲ್ಲಿ ಸಮಸ್ಯೆ ಸಂಕೀರ್ಣ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅನ್ಸರ್ ಅಹಮದ್ ತಿಳಿಸಿದರು.

‘ಚಳಿಗೆ ಆತಂಕ ಪಡಬೇಕಾಗಿಲ್ಲ’

‘ಚಳಿ ಕಾಣಿಸಿಕೊಂಡ ಬಳಿಕ ವಿದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ. ಆದರೆ, ನಮ್ಮಲ್ಲಿ ಅಷ್ಟು ಪ್ರಮಾಣದಲ್ಲಿ ಚಳಿ ಇರುವುದಿಲ್ಲ. ಹಾಗಾಗಿ ಕೋವಿಡ್‌ ಅಲ್ಲಿಯ ಹಾಗೆ ನಮ್ಮ ವಾತಾವರಣದಲ್ಲಿ ಹರಡದು. ಅದೇ ರೀತಿ, ಸೋಂಕಿತರಾದಲ್ಲಿ ಹೆಚ್ಚಿನ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ ಎಂದೂ ಆತಂಕ ಪಡಬೇಕಾಗಿಲ್ಲ. ಬದಲಾಗಿ ಮುನ್ನೆಚ್ಚರಿಕೆ ವಹಿಸಬೇಕು. 15 ದಿನಗಳಿಂದ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದೆ. ಹೀಗಾಗಿ ಎರಡು ವಾರಗಳ ಬಳಿಕ ಐಸಿಯುವಿಗೆ ದಾಖಲಾಗುವವರ ಸಂಖ್ಯೆಯೂ ಇಳಿಕೆ ಕಾಣಲಿದೆ’ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಡಾ. ಓಂಪ್ರಕಾಶ್ ಪಾಟೀಲ ತಿಳಿಸಿದರು.

ಆಸ್ಪತ್ರೆಗಳಲ್ಲಿ ಲಭ್ಯವಿರುವ ಐಸಿಯು ಹಾಸಿಗೆಗಳು (ಸರ್ಕಾರಿ ಕೋಟಾ)

ಚಿಕಿತ್ಸಾ ಕೇಂದ್ರಗಳು; ಒಟ್ಟು ಐಸಿಯು ಹಾಸಿಗೆ; ಖಾಲಿ ಇರುವ ಹಾಸಿಗೆ

ಸರ್ಕಾರಿ ಆಸ್ಪತ್ರೆಗಳು; 39; 17

ಸರ್ಕಾರಿ ವೈದ್ಯಕೀಯ ಕಾಲೇಜುಗಳು; 75; 30

ಖಾಸಗಿ ಆಸ್ಪತ್ರೆಗಳು; 312; 148

ಖಾಸಗಿ ವೈದ್ಯಕೀಯ ಕಾಲೇಜುಗಳು; 166; 56


* ಐಸಿಯುವಿಗೆ ಒಮ್ಮೆ ದಾಖಲಾದವರು ಚೇತರಿಸಿಕೊಳ್ಳುವವರೆಗೂ ಅಲ್ಲಿಯೆ ಇರುತ್ತಾರೆ. ಸದ್ಯ ಐಸಿಯು ಹಾಸಿಗೆಗಳ ಕೊರತೆ ಇಲ್ಲ.

– ಡಾ. ಓಂಪ್ರಕಾಶ್ ಪಾಟೀಲ, ಆರೋಗ್ಯ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT