ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ತತ್ವದಡಿ ರಿಯಲ್‌ ಎಸ್ಟೇಟ್‌: ಸಚಿವ ಜಗದೀಶ ಶೆಟ್ಟರ್‌

ರಾಜ್ಯದಲ್ಲೂ ಪುಣೆ ಮಾದರಿ ಜಾರಿ
Last Updated 14 ನವೆಂಬರ್ 2019, 23:58 IST
ಅಕ್ಷರ ಗಾತ್ರ

ಬೆಂಗಳೂರು:‘ಸಹಕಾರ ಚಳವಳಿ ಮಾದರಿಯಲ್ಲಿ ಪುಣೆಯಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದೇ ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳುವ ಚಿಂತನೆ ಇದೆ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಭಾರತೀಯ ರಿಯಲ್‌ ಎಸ್ಟೇಟ್‌ ಡೆವಲಪರ್ಸ್‌ ಒಕ್ಕೂಟದ (ಕ್ರೆಡೈ) ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕ್ರೆಡೈ ರಾಷ್ಟ್ರೀಯ ಅಧ್ಯಕ್ಷ ಸತೀಸ್‌ ಮಗರ್‌ ಅವರು ಪುಣೆಯಲ್ಲಿ 300ರಿಂದ 400 ರೈತರನ್ನು ಒಗ್ಗೂಡಿಸಿ ಸಹಕಾರ ಸೊಸೈಟಿ ರಚಿಸಿ, ರಿಯಲ್‌ ಎಸ್ಟೇಟ್‌ ಅಭಿವೃದ್ಧಿಪಡಿಸಿದ್ದಾರೆ. ದೇಶದಲ್ಲಿ ಇದು ಮೊದಲ ಮಾದರಿ. ಈ ಯೋಜನೆ ಅಲ್ಲಿ ಯಶಸ್ವಿಯಾಗಿದ್ದು, ಶೀಘ್ರದಲ್ಲಿಯೇ ಪುಣೆಗೆ ಭೇಟಿ ನೀಡಿ ವೀಕ್ಷಿಸಿ ಬರುತ್ತೇನೆ’ ಎಂದರು.

‘ರಿಯಲ್‌ ಎಸ್ಟೇಟ್‌ ರಾಜ್ಯದ ಅಭಿವೃದ್ಧಿಗೆ ಪೂರಕವಾದುದು. ಕಾನೂನಿಗೆ ಅನುಗುಣವಾಗಿ ಕ್ರೆಡೈ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ನಡೆಸುತ್ತಿದೆ. ಆದರೆ, ಕ್ರೈಡೈನ ಶೇ 20ರಷ್ಟು ಸದಸ್ಯರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದ್ದು, ಇಡೀ ಒಕ್ಕೂಟಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ತಪ್ಪಿಸಬೇಕು. ಕಾನೂನು ಪ್ರಕಾರ, ನಿಯಮಗಳಿಗೆ ಅನುಗುಣವಾಗಿ ಕೆಲಸ ಮಾಡುವ ಎಲ್ಲರಿಗೂ ಸರ್ಕಾರ ಉತ್ತೇಜನ ನೀಡಲಿದೆ’ ಎಂದೂ ಅವರು ಹೇಳಿದರು.

ಕ್ರೆಡೈ ರಾಜ್ಯಘಟಕದ ಮಾರ್ಗದರ್ಶಕ ಎ. ಬಾಲಕೃಷ್ಣ ಹೆಗ್ಡೆ, ‘ಕೇಂದ್ರ ಸರ್ಕಾರದ ಅಜೆಂಡಾದಲ್ಲಿ ರಿಯಲ್‌ ಎಸ್ಟೇಟ್‌ ಮೊದಲ ಸ್ಥಾನದಲ್ಲಿದೆ. ಆದರೆ, ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಪರವಾನಗಿ ನೀಡುವ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಅವಶ್ಯಕತೆ ಇದೆ. ಕಟ್ಟಡ ನಕ್ಷೆ ಮಂಜೂರು ಮಾಡುವಾಗ, ವಿದ್ಯುತ್‌–ನೀರು ಸೇರಿದಂತೆ ಪ್ರತಿಯೊಂದಕ್ಕೂ ನಿರಾಕ್ಷೇಪಣ ಪತ್ರ (ಎನ್‌ಒಸಿ) ಕೇಳುತ್ತಾರೆ. ಇದರಿಂದ ತುಂಬಾ ವಿಳಂಬವಾಗುತ್ತಿದೆ’ ಎಂದರು.

‘ಪರಿಸರ ಸಂಬಂಧಿತ ಅನುಮೋದನೆ ಮತ್ತು ಅಗ್ನಿ ಸುರಕ್ಷತಾ ನಿಯಮಗಳೆಲ್ಲವನ್ನೂ ಬೈಲಾದಲ್ಲಿಯೇ ಸೇರಿಸಬೇಕು. ನಾವೆಲ್ಲರೂ ಬೈಲಾವನ್ನು ಪಾಲಿಸುತ್ತೇವೆ. ಹೀಗಾಗಿ, ಅದರಲ್ಲಿಯೇ ಈ ನಿಯಮ ಅಳವಡಿಸಿಕೊಂಡರೆ ಕಟ್ಟಡ ಮಂಜೂರಾತಿ ಪಡೆಯುವುದು ಸುಲಭವಾಗುತ್ತದೆ’ ಎಂದರು.

‘ಈಗಲೂ ಮಾಸ್ಟರ್‌ ಪ್ಲ್ಯಾನ್‌ 1904ರ ಗ್ರಾಮ ನಕ್ಷೆ ಆಧಾರದ ಮೇಲೆ ಕಟ್ಟಡ ನಕ್ಷೆ ಮಂಜೂರಾತಿ ನೀಡಲಾಗುತ್ತಿದೆ. ಅದನ್ನು ನೋಡಿ ಕಾಲುದಾರಿ ಇದೆ, ಹಳ್ಳ–ನಾಲಾ ಇದೆ ಎಂದು ಹೇಳುತ್ತಾರೆ. ಆದರೆ, ಎಷ್ಟೋ ಸಂದರ್ಭದಲ್ಲಿ ಈಗ ಅಲ್ಲಿ ಹಳ್ಳ, ನಾಲಾಗಳೇ ಇಲ್ಲ. ನೂರಾರು ವರ್ಷಗಳ ಹಿಂದಿನ ನಕ್ಷೆ ನೋಡಿದರೆ ವಿಧಾನಸೌಧದ ಕೆಳಗೆಯೂ ನಾಲಾ ಇದ್ದಿರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ನೀಡುವಾಗ 1904ರ ಗ್ರಾಮ ನಕ್ಷೆ ಆಧಾರವಾಗಿ ಇಟ್ಟುಕೊಳ್ಳಬಾರದು’ ಎಂದು ಮನವಿ ಮಾಡಿದರು.

ವಸತಿ ಯೋಜನೆ: ಖಾಸಗಿಗೆ ಆಹ್ವಾನ
ರಾಜ್ಯ ಸರ್ಕಾರಿ ಒಡೆತನದ ರಾಜೀವ್‌ ಗಾಂಧಿ ವಸತಿ ನಿಗಮವು (ಆರ್‌ಜಿಎಚ್‌ಸಿಎಲ್‌) ನಗರದಲ್ಲಿ ಯೋಗ್ಯ ಬೆಲೆಯಲ್ಲಿ ವಸತಿ ಸೌಲಭ್ಯ ಒದಗಿಸುವ ಯೋಜನೆಗೆ ಕೈ ಜೋಡಿಸುವಂತೆ ಖಾಸಗಿ ಡೆವಲಪರ್‌ಗಳನ್ನು ಆಹ್ವಾನಿಸಿದೆ. ಇದಕ್ಕೆ ಅಗತ್ಯವಿರುವ ಎಲ್ಲ ಪರವಾನಗಿಗಳನ್ನು ಏಕಗವಾಕ್ಷಿ ವ್ಯವಸ್ಥೆ ಮೂಲಕ 60 ದಿನದೊಳಗೆ ನೀಡಲಾಗುವುದು ಎಂದೂ ನಿಗಮ ಹೇಳಿದೆ.

‘ಯೋಗ್ಯ ಬೆಲೆಯಲ್ಲಿ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ ಜಾರಿಗಾಗಿಯೇ ಬೆಂಗಳೂರು ನಗರದಲ್ಲಿ ಒಂದು ಸಾವಿರ ಎಕರೆ ಭೂಮಿಯನ್ನು ಮೀಸಲಿಟ್ಟಿದ್ದೇವೆ. ಖಾಸಗಿಯವರ ಜೊತೆ ಜಂಟಿಯಾಗಿ ಈ ಯೋಜನೆ ಅನುಷ್ಠಾನಕ್ಕೆ ತರುವ ಉದ್ದೇಶವಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮ್‌ ಪ್ರಶಾಂತ್‌ ಮನೋಹರ್‌ ತಿಳಿಸಿದರು.

‘ಬೆಂಗಳೂರು ಕೇಂದ್ರಿತ ಅಭಿವೃದ್ಧಿ ಬಿಡಿ’
‘ರಾಜ್ಯದಲ್ಲಿ ಹೆಚ್ಚಾಗಿ ಬೆಂಗಳೂರು ಕೇಂದ್ರಿತ ಅಭಿವೃದ್ಧಿ ಇದೆ. ಕೈಗಾರಿಕೋದ್ಯಮಿಗಳು ಅಥವಾ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಬೆಂಗಳೂರಿನಿಂದ ಹೊರಗೆ ಕೈಗಾರಿಕೆ ಸ್ಥಾಪನೆಗೆ ಮುಂದಾಗಬೇಕು’ ಎಂದು ಜಗದೀಶ ಶೆಟ್ಟರ್‌ ಹೇಳಿದರು.

‘ಬೆಂಗಳೂರು ಸುತ್ತ–ಮುತ್ತ ಭೂಮಿ ಕೊಡಿ ಎಂದು ಎಲ್ಲರೂ ಕೇಳುತ್ತಾರೆ. ಆದರೆ, ನಾನು ಇದಕ್ಕೆ ಒಪ್ಪುತ್ತಿಲ್ಲ. ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಸೇರಿದಂತೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಕೈಗಾರಿಕಾ ಸ್ಥಾಪನೆಗೆ ಮುಂದಾದರೆ ಅವರಿಗೆ ಎಲ್ಲ ಸೌಲಭ್ಯ ನೀಡುವ ಜೊತೆಗೆ ಸಹಾಯಧನವನ್ನೂ ಕೊಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT