ಶನಿವಾರ, ಏಪ್ರಿಲ್ 1, 2023
32 °C
ಮುಂಗಡ ಹಣ ತನ್ನದಾಗಿಸಿಕೊಳ್ಳಲು ನಾಟಕ l ಪಾದರಕ್ಷೆ ಮಾರಾಟ ಏಜೆನ್ಸಿ ಮಾಲೀಕ ಬಂಧನ

ದರೋಡೆ ಕಥೆ ಕಟ್ಟಿ ₹ 10 ಲಕ್ಷ ಮುಚ್ಚಿಟ್ಟಿದ್ದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಾದರಕ್ಷೆ ಮಾರಾಟ ಮಳಿಗೆಗಳ ವ್ಯಾಪಾರಿಗಳು ನೀಡಿದ್ದ ₹ 10 ಲಕ್ಷವನ್ನು ತನ್ನದಾಗಿಸಿಕೊಳ್ಳಲು ದರೋಡೆ ಕಥೆ ಕಟ್ಟಿ ಪೊಲೀಸರಿಗೆ ಸುಳ್ಳು ದೂರು ನೀಡಿದ್ದ ಆರೋಪಿ ಮೂಲರಾಮ್ ಎಂಬುವರನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಮೂಲರಾಮ್, ಮನವರ್ತಪೇಟೆಯಲ್ಲಿ ಮೆಟ್ರೊ ಪಾದರಕ್ಷೆ ಮಾರಾಟ ಏಜೆನ್ಸಿ ನಡೆಸುತ್ತಿದ್ದ. ಪಾದರಕ್ಷೆ ಪೂರೈಕೆ ಸಂಬಂಧ ನಗರದ ಹಲವು ಮಳಿಗೆಗಳ ವ್ಯಾಪಾರಿಗಳು ಮುಂಗಡ ಹಣ ನೀಡಿದ್ದರು. ಅದೇ ಹಣವನ್ನು ತನ್ನದಾಗಿಸಿಕೊಳ್ಳಲು ದರೋಡೆ ನಾಟಕವಾಡಿದ್ದ’ ಎಂದು ಪೊಲೀಸರು ಹೇಳಿದರು.

‘ಮೂಲರಾಮ್ ನೀಡಿದ್ದ ದೂರು ನಿಜವೆಂದು ನಂಬಿ ತನಿಖೆ ಆರಂಭಿಸ ಲಾಗಿತ್ತು. ಆದರೆ, ಘಟನೆ ನಡೆದ ಬಗ್ಗೆ ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ. ಆತನ ಮೇಲೆಯೇ ಅನುಮಾನ ಬಂದಿತ್ತು. ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡ. ಏಜೆನ್ಸಿಯ ಗೋದಾಮಿನಲ್ಲಿ ಹಣ ಮುಚ್ಚಿಟ್ಟಿದ್ದ ಸಂಗತಿ ಬಾಯ್ಬಿಟ್ಟಿದ್ದ. ನಂತರ, ಗೋದಾಮಿಗೆ ಹೋಗಿ ₹ 10 ಲಕ್ಷ ಜಪ್ತಿ ಮಾಡಲಾಗಿದೆ’ ಎಂದರು.

ಸಾಲ ತೀರಿಸಲು ದರೋಡೆ ಕಥೆ: ‘ಆರೋಪಿ ಹಲವರ ಬಳಿ ಸಾಲ ಮಾಡಿದ್ದ. ಆದರೆ, ಅದನ್ನು ತೀರಿಸಲು ಸಾಧ್ಯವಾಗಿರಲಿಲ್ಲ. ಸಾಲ ಕೊಟ್ಟವರು ಕಿರುಕುಳ ನೀಡಲಾರಂಭಿಸಿದ್ದರು. ಅವಾಗಲೇ ಆರೋಪಿ, ₹ 10 ಲಕ್ಷ ತನ್ನದಾಗಿಸಿಕೊಂಡು ಸಾಲ ತೀರಿಸಲು ದರೋಡೆ ಕಥೆ ಕಟ್ಟಿದ್ದ’ ಎಂದು ಪೊಲೀಸರು ಹೇಳಿದರು.

ಇತ್ತೀಚೆಗೆ ಠಾಣೆಗೆ ಬಂದಿದ್ದ ಮೂಲರಾಮ್, ತಮ್ಮ ₹ 10 ಲಕ್ಷ ದರೋಡೆ ಆಗಿರುವುದಾಗಿ ದೂರು ನೀಡಿದ್ದರು. ‘ಪಾದರಕ್ಷೆ ಅಂಗಡಿ ಮಾಲೀಕರು ನೀಡಿದ್ದ ಹಣ ತೆಗೆದುಕೊಂಡು ಬೈಕ್‌ನಲ್ಲಿ ಹೊರಟಿದ್ದೆ. ಮೈಸೂರು ರಸ್ತೆಯ ಸಿರ್ಸಿ ವೃತ್ತ ಬಳಿ ನನ್ನನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಸಿಸಿಬಿ ಪೊಲೀಸರೆಂದು ಹೇಳಿ ಹಣ ಕಿತ್ತುಕೊಂಡಿದ್ದರು. ತಮ್ಮ ಬಳಿಯ ಬ್ಲೇಡ್‌ನಿಂದ ಕೈ ಬೆರಳಿಗೆ ಗಾಯ ಮಾಡಿ ಪರಾರಿಯಾಗಿದ್ದಾರೆ’ ಎಂಬುದಾಗಿ ಮೂಲರಾಮ್ ದೂರಿನಲ್ಲಿ ತಿಳಿಸಿದ್ದರು.’

‘ಬಂಧನ ಬಳಿಕ ನಿಜ ಸಂಗತಿ ಬಾಯ್ಬಿಟ್ಟಿರುವ ಮೂಲರಾಮ್, ‘ಬ್ಯಾಗ್‌ನಲ್ಲಿದ್ದ ₹ 10 ಲಕ್ಷವನ್ನು ಗೋದಾಮಿನಲ್ಲಿ ಇರಿಸಿದ್ದೆ. ನಂತರ, ಬ್ಯಾಗ್‌ನಲ್ಲಿ ಹಳೇ ಬಟ್ಟೆ ತುಂಬಿಕೊಂಡು ಸಿರ್ಸಿ ವೃತ್ತಕ್ಕೆ ಹೋಗಿದ್ದೆ. ಖಾಲಿ ಜಾಗದಲ್ಲಿ ಬ್ಯಾಗ್ ಬಿಸಾಕಿ, ನನ್ನ ಬಳಿಯ ಬ್ಲೇಡ್‌ನಿಂದ ಕೈ ಬೆರಳಿಗೆ ಇರಿದುಕೊಂಡಿದ್ದೆ. ನಂತರವೇ ಠಾಣೆಗೆ ಬಂದು ಸುಳ್ಳು ದೂರು ನೀಡಿದ್ದೆ’ ಎಂದು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಬೈಕ್ ಅಡ್ಡಗಟ್ಟಿ ಸುಲಿಗೆ: ₹ 62 ಲಕ್ಷ ಜಪ್ತಿ
ಚಿನ್ನಾಭರಣ ಮಳಿಗೆಯೊಂದರ ಕೆಲಸಗಾರರನ್ನು ಅಡ್ಡಗಟ್ಟಿ ಹಣ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

‘ಕಲಾಸಿಪಾಳ್ಯದ ಮಹಮ್ಮದ್ ಜಿಲಾನ್ (27), ಶಿವಾಜಿನಗರದ ಅಬ್ದುಲ್ ವಹಾಬ್ ಅಲಿಯಾಸ್ ಕಮರ್ (35) ಹಾಗೂ ಪೃಥ್ವಿಕ್ (20) ಬಂಧಿತರು. ಇವರಿಂದ ₹ 62 ಲಕ್ಷ ಜಪ್ತಿ ಮಾಡಲಾಗಿದೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಳಿಯೂ ಮತ್ತಷ್ಟು ಹಣವಿರುವ ಮಾಹಿತಿ ಇದೆ’ ಎಂದು ಪೊಲೀಸರು ಹೇಳಿದರು.

‘ಚಿನ್ನಾಭರಣ ವ್ಯಾ‍ಪಾರಿ ಬಳಿ ಕೆಲಸ ಮಾಡುತ್ತಿದ್ದ ವರುಣ್ ಸಿಂಗ್ ಪನ್ವಾರ್ ಹಾಗೂ ಕೃಷ್ಣಪ್ಪ, ಹಲವು ಮಳಿಗೆಗಳಿಂದ ಸಂಗ್ರಹಿಸಿದ್ದ ಹಣವನ್ನು ತೆಗೆದುಕೊಂಡು ಬೈಕ್‌ನಲ್ಲಿ ಹೊರಟಿದ್ದರು. ಅವರನ್ನು ಅಡ್ಡಗಟ್ಟಿದ್ದ ಆರೋಪಿಗಳು, ಹಣ ಸುಲಿಗೆ ಮಾಡಿ ಪರಾರಿಯಾಗಿದ್ದರು.‌‌ ಈ ಸಂಬಂಧ ವರುಣ್ ಹಾಗೂ ಕೃಷ್ಣಪ್ಪ ದೂರು ನೀಡಿದ್ದರು.’

‘ದೂರು ನೀಡುವ ವೇಳೆ ಕೇವಲ ₹ 10 ಲಕ್ಷ ಸುಲಿಗೆ ಆಗಿರುವುದಾಗಿ ತಪ್ಪು ಮಾಹಿತಿ ನೀಡಿದ್ದರು. ಆರೋಪಿಗಳನ್ನು ಬಂಧಿಸಿದಾಗ, ₹ 62 ಲಕ್ಷ ಪತ್ತೆಯಾಗಿದೆ. ಈ ಬಗ್ಗೆ ಪುನಃ ಹೇಳಿಕೆ ನೀಡಿರುವ ದೂರುದಾರರು, ‘ದಾಖಲೆ ಸಮೇತ ಲೆಕ್ಕ ನೀಡಲು ಹಣದ ಬಗ್ಗೆ ತಪ್ಪು ಮಾಹಿತಿ ನೀಡಲಾಗಿತ್ತು’ ಎಂದಿದ್ದಾರೆ. ಹಣದ ಲೆಕ್ಕದ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು