ಮಂಗಳವಾರ, ಜನವರಿ 28, 2020
19 °C

ಪ್ರೇಯಸಿ ಆತ್ಮಹತ್ಯೆ: ಕುಮ್ಮಕ್ಕು ಆರೋಪದಿಂದ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದೇಶಕ್ಕೆ ಹೋಗುವ ನಿರ್ಧಾರ ವಿರೋಧಿಸಿ ಪ್ರೇಯಸಿ ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಸಿಲುಕಿದ್ದ ಯುವಕನಿಗೆ ಹೈಕೋರ್ಟ್ ನೆಮ್ಮದಿ ಕರುಣಿಸಿದೆ.

ಪ್ರೀತಿ ಮಾಡುತ್ತಿದ್ದ ಕಾರಣಕ್ಕೆ ಪ್ರೇಯಸಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಲ್ಲ. ಆತ್ಮಹತ್ಯೆಗೆ ಪ್ರಚೋದನೆ ನೀಡುವುದೆಂದರೆ ಅಲ್ಲಿ ಕುಮ್ಮಕ್ಕು, ಪಿತೂರಿ ಹಾಗೂ ದುರುದ್ದೇಶಪೂರ್ವಕವಾಗಿ ಸಲಹೆ ನೀಡಿರಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.

ಯುವಕನ ವಿರುದ್ಧದ ಪ್ರೇಯಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ಕೈಬಿಟ್ಟ ಅಧೀನ ನ್ಯಾಯಾಲಯದ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಈ ಆದೇಶ ಮಾಡಿದೆ. ಅಲ್ಲದೆ, ಅಧೀನ ನ್ಯಾಯಾಲಯದ ಆದೇಶ ಪುರಸ್ಕರಿಸಿ, ಯುವಕನನ್ನು ಖುಲಾಸೆಗೊಳಿಸಿದೆ.

ಹಿನ್ನೆಲೆ: ಉಡುಪಿ ಜಿಲ್ಲೆಯ ರಕ್ಷಿತಾ ಮತ್ತು ತುಷಾರ್ ಕೋಟ್ಯಾನ್‌ 2010ರಿಂದ ಪರಸ್ಪರ ಪ್ರೀತಿಸುತ್ತಿದ್ದರು. ತಾನು ವಿದೇಶಕ್ಕೆ ಹೋಗಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದೇನೆ ಎಂದು ಕೋಟ್ಯಾನ್‌ ತಿಳಿಸಿದ್ದರಿಂದ ಮನನೊಂದ ರಕ್ಷಿತಾ 2012ರ ನ.30ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದರು. ತನಿಖೆ ನಡೆಸಿದ್ದ ಉಡುಪಿ ಟೌನ್ ಪೊಲೀಸರು, 2013ರಲ್ಲಿ ಕೋಟ್ಯಾನ್‌ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿದ್ದರು.

ಈ ಮಧ್ಯೆ, ಕೋಟ್ಯಾನ್‌ ಅರ್ಜಿ ಸಲ್ಲಿಸಿ, ಪ್ರಕರಣದ ಆರೋಪಗಳಿಂದ ತನ್ನನ್ನು ಮುಕ್ತಗೊಳಿಸುವಂತೆ ಕೋರಿದ್ದರು. ಆ ಮನವಿ ಪುರಸ್ಕರಿಸಿ ಅಧೀನ ನ್ಯಾಯಾಲಯವು 2015ರ  ಮೇ 30 ರಂದು ಆದೇಶಿಸಿತ್ತು. ಇದರ ವಿರುದ್ಧ ಉಡುಪಿ ಟೌನ್ ಪೊಲೀಸರು ಹೈಕೊರ್ಟ್‌ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್, ಆರೋಪಿಯು ವಿದೇಶಕ್ಕೆ ಹೋಗಲು ನಿರ್ಧರಿಸಿದ್ದರಿಂದ ರಕ್ಷಿತಾ ಮಾನಸಿಕ ಖಿನ್ನತೆಗೆ ಒಳಾಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಳ ಜೊತೆಗೆ ಆರೋಪಿ ಪ್ರೀತಿ ಮಾಡುತ್ತಿದ್ದರು ಎಂಬ ಕಾರಣಕ್ಕೆ ರಕ್ಷಿತಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದರು ಎಂದು ಹೇಳಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.

ಆತ್ಮಹತ್ಯೆಗೆ ಪ್ರಚೋದನೆ ನೀಡುವುದೆಂದರೆ ಐಪಿಸಿ ಸೆಕ್ಷನ್ 107 ಹೇಳುವಂತೆ ಕೃತ್ಯ ಎಸಗಲು ಕುಮ್ಮಕ್ಕು ನೀಡಿರಬೇಕು. ಕೃತ್ಯ ನಡೆಸಲು ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚು ಜನ ಪಿತೂರಿ ನಡೆಸಿರಬೇಕು. ಇಲ್ಲವೇ ದುರದ್ದೇಶಪೂರ್ವಕಾಗಿಯೇ ಸಲಹೆ ಸೂಚನೆ ನೀಡಿರಬೇಕು. ಈ ಯಾವ ಕೆಲಸವನ್ನೂ ಆರೋಪಿಯು ಮಾಡಿರುವ ಬಗ್ಗೆ ಸಾಕ್ಷ್ಯಾಧಾರಗಳನ್ನು ದೋಷಾರೋಪ ಪಟ್ಟಿಯಲ್ಲಿ ತನಿಖಾಧಿಕಾರಿಗಳು ಒದಗಿಸಿಲ್ಲ ಹಾಗೂ ಪ್ರಾಸಿಕ್ಯೂಷನ್ ಸಾಬೀತುಪಡಿಸಿಲ್ಲ. ಆದ್ದರಿಂದ ಪ್ರಕರಣದಲ್ಲಿ ಕೋಟ್ಯಾನ್‌ ಅವರನ್ನು ಆರೋಪಮುಕ್ತಗೊಳಿಸಿದ ವಿಚಾರಣಾ ನ್ಯಾಯಾಲಯ ಕ್ರಮದಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ ಎಂದು ತಿಳಿಸಿದ ಹೈಕೋರ್ಟ್, ಸರ್ಕಾರದ ಅರ್ಜಿ ವಜಾಗೊಳಿಸಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು