ಗುರುವಾರ , ಸೆಪ್ಟೆಂಬರ್ 23, 2021
24 °C

ರೌಡಿ ಮಜರ್‌ ಕೊಲೆ: ಏಳು ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ) ಠಾಣೆ ವ್ಯಾಪ್ತಿಯಲ್ಲಿ ರೌಡಿ ಮಜರ್‌ ಖಾನ್ ಅಲಿಯಾಸ್ ಭಟ್ಟಿ ಮಜರ್ ಕೊಲೆ ಪ್ರಕರಣದಲ್ಲಿ ಒಂದೇ ಕುಟುಂಬದ ಮೂವರು ಮಹಿಳೆಯರು ಸೇರಿದಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಶಾಬಾಜ್, ಅಲೀಂ, ಫೈರೋಜ್, ಮುಸ್ತಾಕ್‌, ರೇಷ್ಮಾ, ಸಮೀನಾ ಮತ್ತು ಹಸೀನಾ ಬಂಧಿತರು’ ಎಂದು ಪೊಲೀಸರು ತಿಳಿಸಿದರು.

‘ಶಿವರಾಜ ರಸ್ತೆಯಲ್ಲಿ ಮಜರ್ ಖಾನ್‌ನನ್ನು ಶನಿವಾರ ಕೊಲೆ ಮಾಡಲಾಗಿತ್ತು. ಆರೋಪಿಗಳೆಲ್ಲರೂ ಕೊಲೆಯಾದ ಮಜರ್‌ಗೆ ಪರಿಚಿತರು. ಮಜರ್‌ನ ಎರಡನೇ ಹೆಂಡತಿ ಯಾಸ್ಮೀನ್, ಸಾಕೀಬ್‌ ಎಂಬುವನ ಜೊತೆ ಪರಾರಿಯಾಗಿದ್ದಳು. ಸಾಕೀಬ್‌ಗೆ ಆರೋಪಿ ಶಾಬಾಜ್ ಸ್ನೇಹಿತನಾಗಿದ್ದು, ಪತ್ನಿ ದೂರವಾಗಲು ಶಾಬಾಜ್ ಮತ್ತು ಅವನ ಕುಟುಂಬಸ್ಥರು ಸಹಾಯ ಮಾಡಿದ್ದಾರೆ ಎಂದು ಮಜರ್ ಭಾವಿಸಿದ್ದ’ ಎಂದು ಮಾಹಿತಿ ನೀಡಿದರು.

‘ಇದೇ ವಿಚಾರಕ್ಕೆ ಮಜರ್ ಅವರ ಮನೆಯ ಬಳಿ ಆಗಾಗ ತೆರಳಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಶಾಬಾಜ್‌ನ ತಾಯಿ ರೇಷ್ಮಾ ಶನಿವಾರ ಅಂಗಡಿಗೆ ಹೋಗಿ ಬರುತ್ತಿದ್ದಾಗ ಸಾರ್ವಜನಿಕವಾಗಿ ನಿಂದಿಸಿದ್ದ. ಈ ವಿಚಾರವನ್ನು ರೇಷ್ಮಾ ತನ್ನ ಮನೆಯವರಿಗೆ ತಿಳಿಸಿದ್ದಳು. ಮನೆವರೆಗೂ ಬಂದಿದ್ದ ಮಜರ್ ಅವಾಚ್ಯ ಶಬ್ದಗಳಿಂದ ಬೈದಿದ್ದ. ಈ ವೇಳೆ ಗಲಾಟೆ ಆರಂಭಗೊಂಡು, ಕುಟುಂಬಸ್ಥರು ಸೇರಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿ, ರಸ್ತೆಯಲ್ಲಿ ಶವ ಬಿಸಾಡಿದ್ದರು’ ಎಂದು  ವಿವರಿಸಿದರು.

‘ಆರೋಪಿಗಳು ಹೆಬ್ಬಾಳ ಬಳಿಯ ಬಸ್ ನಿಲ್ದಾಣದಿಂದ ಬೇರೆ ಸ್ಥಳಕ್ಕೆ ತೆರಳುತ್ತಿದ್ದರು. ಈ ಮಾಹಿತಿ ಆಧರಿಸಿ ಏಳು ಮಂದಿಯನ್ನೂ ಬಂಧಿಸಲಾಯಿತು. ತಲೆಮರೆಸಿಕೊಂಡಿರುವ ಇಬ್ಬರಿಗಾಗಿ ಶೋಧ ನಡೆಯುತ್ತಿದೆ’ ಎಂದೂ ಹೇಳಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು