ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಮೇಲೆ ಹಲ್ಲೆ: ಆರೋಪಿಗೆ ಗುಂಡೇಟು

ದರೋಡೆ ಪ್ರಕರಣದ ತನಿಖೆ: ಮಹಜರು ವೇಳೆ ಪರಾರಿಯಾಗಲು ಯತ್ನ
Last Updated 26 ನವೆಂಬರ್ 2020, 20:32 IST
ಅಕ್ಷರ ಗಾತ್ರ

ಬೆಂಗಳೂರು: ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ದರೋಡೆಕೋರನ ಮೇಲೆ ಬಾಗಲೂರು ಪೊಲೀಸರು ಗುರುವಾರ ಗುಂಡು ಹಾರಿಸಿದ್ದಾರೆ.

ಚೆನ್ನೈನ ದಿನೇಶ್ (24) ಗುಂಡೇಟು ತಿಂದ ಆರೋಪಿ. ರಾತ್ರಿ ವೇಳೆ ಸಂಚರಿಸುತ್ತಿದ್ದವರನ್ನು ಅಡ್ಡಗಟ್ಟಿ, ದರೋಡೆ ಮಾಡುತ್ತಿದ್ದ ತಂಡದಲ್ಲಿ ದಿನೇಶ್ ಇದ್ದ. ಇಲ್ಲಿನ ದ್ವಾರಕಾನಗರದಲ್ಲಿ ಮಂಗಳವಾರ ರಾತ್ರಿ ಮ್ಯಾಥ್ಯೂ ಎಂಬವರನ್ನು ಚಾಕುವಿನಿಂದ ಇರಿದು, ಮೊಬೈಲ್, ಕ್ಯಾಮೆರಾ ಹಾಗೂ ನಗದು ಕಸಿದಿದ್ದರು. ಈ ಕುರಿತು ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಸಂಬಂಧ ಪೊಲೀಸರು ಚೆನ್ನೈನಿಂದ ನಾಲ್ವರು ಆರೋಪಿಗಳನ್ನು ಬಂಧಿಸಿ ಕರೆತಂದಿದ್ದರು. ಘಟನಾ ಸ್ಥಳದಲ್ಲಿ ಆರೋಪಿಯನ್ನು ಮಹಜರು ನಡೆಸುತ್ತಿದ್ದಾಗ ಬಾಗಲೂರು ಠಾಣೆಯ ಪಿಎಸ್‍ಐ ವಿಂಧ್ಯಾ ರಾಥೋಡ್ ಹಾಗೂ ಕಾನ್‍ಸ್ಟೆಬಲ್ ಸುಮಂತ್ ಮೇಲೆ ಚಾಕುವಿನಿಂದ ದಿನೇಶ್ ಹಲ್ಲೆಗೆ ಮುಂದಾಗಿ, ಪರಾರಿಯಾಗಲು ಯತ್ನಿಸಿದ್ದಾನೆ.

ಸ್ಥಳದಲ್ಲೇ ಇದ್ದ ಬಾಗಲೂರು ಇನ್‍ಸ್ಪೆಕ್ಟರ್ ಪ್ರಶಾಂತ್ ವರಣಿ ಗಾಳಿಯಲ್ಲಿ ಗುಂಡು ಹಾರಿಸಿ ದಿನೇಶ್‍ಗೆ ಎಚ್ಚರಿಕೆಯೂ ನೀಡಿದರು. ಶರಣಾಗಲು ಒಪ್ಪದ ದಿನೇಶ್, ಪ್ರಶಾಂತ್ ಅವರ ಮೇಲೂ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.

‘ಘಟನೆಯಲ್ಲಿ ಮಹಿಳಾ ಪಿಎಸ್‍ಐ ಹಾಗೂ ಕಾನ್‍ಸ್ಟೆಬಲ್‍ಗೆ ಗಾಯಗಳಾಗಿದ್ದು, ಯಲಹಂಕದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಕೊಲೆ ಪ್ರಕರಣವೊಂದರ ಆರೋಪಿಯಾಗಿರುವ ಮುನಿರಾಜು ಎಂಬಾತನ ಮನೆಯಲ್ಲಿ ದಿನೇಶ್ ವಾಸವಿದ್ದ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಳೆಯ ದ್ವೇಷದಿಂದ ಯುವಕನ ಕೊಲೆ: ನಾಲ್ವರ ಬಂಧನ
ಬೆಂಗಳೂರು: ಹಳೆಯ ದ್ವೇಷದಿಂದ ಯುವಕನನ್ನು ಕೊಲೆ ಮಾಡಿ, ಶವವನ್ನು ನೀಲಗಿರಿ ತೋಪಿನಲ್ಲಿ ಎಸೆದು ಪರಾರಿಯಾಗಿದ್ದ ಪ್ರಕರಣದ ನಾಲ್ವರು ಆರೋಪಿಗಳನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

ಭಾರತಿನಗರದ ಹರೀಶ್ (24) ಕೊಲೆಯಾದ ಯುವಕ. ಕೃತ್ಯ ಎಸಗಿದ ಫ್ರೇಜರ್ ಟೌನ್ ನಿವಾಸಿ ದೀಪು (28), ಸುರೇಂದ್ರ (25), ರವಿ (27) ಹಾಗೂ ಕಾರ್ತಿಕ್ (28) ಬಂಧಿತರು.

ಕೆ.ನಾರಾಯಣಪುರ ಮುಖ್ಯರಸ್ತೆಯ ನೀಲಗಿರಿ ತೋಪಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ಶವವೊಂದು ಬುಧವಾರ ಪತ್ತೆಯಾಗಿತ್ತು. ಕಾರಿಗೆ ಹೊದಿಸುವ ಕವರ್ ಹಾಗೂ ಹಾಸಿಗೆಯಲ್ಲಿ ಶವ ಕಟ್ಟಿದ್ದರು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಅದು ಹರೀಶ್‍ನ ಶವ ಎಂದು ಕುಟುಂಬದವರು ಗುರುತಿಸಿದ್ದರು.

ಹರೀಶ್ ಹಾಗೂ ಜೀವ ಎಂಬಾತನ ನಡುವೆ ಕೆಲ ಸಮಯದ ಹಿಂದೆ ಗಲಾಟೆ ನಡೆದಿತ್ತು. ಜೀವ ಮೇಲೆ ಹರೀಶ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ. ಈ ಸಂಬಂಧ ಭಾರತಿನಗರ ಪೊಲೀಸರು ಹರೀಶ್‍ನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು.

ಹಲ್ಲೆ ನಡೆಸಿದ ಕಾರಣಕ್ಕಾಗಿ ಜೀವ ಸಹೋದರರು ಹರೀಶ್ ಮೇಲೆ ದ್ವೇಷ ಇಟ್ಟುಕೊಂಡಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಹರೀಶ್‌ನ ಹತ್ಯೆಗೆ ಸಂಚು ರೂಪಿಸಿದ್ದರು. ಮಂಗಳವಾರ ರಾತ್ರಿ ಹರೀಶ್‍ನನ್ನು ಕಾರಿನಲ್ಲಿ ಕರೆದೊಯ್ದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ ಬಳಿಕ ಶವವನ್ನು ನೀಲಗಿರಿ ತೋಪಿನಲ್ಲಿ ಎಸೆದು ಪರಾರಿಯಾಗಿದ್ದರು. 'ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಹಾಗೂ ಹರೀಶ್‍ನ ಮೊಬೈಲ್ ಕರೆಗಳ ವಿವರ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡರು' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT