ಶನಿವಾರ, ಆಗಸ್ಟ್ 13, 2022
27 °C

ಆರೋಪಿ ಆತ್ಮಹತ್ಯೆ: ಎಸ್‌ಐ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಮಹಜರು ವೇಳೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪದಡಿ ಹನುಮಂತ ನಗರ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ್ ಅವರನ್ನು ಅಮಾನತು ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.

ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು,‘ಆರೋಪಿ ಪೊಲೀಸರ ವಶದಿಂದ ತಪ್ಪಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಧಿಕಾರಿಗಳ ನಿರ್ಲಕ್ಷ್ಯವೂ ಇದಕ್ಕೆ ಕಾರಣ. ಹಾಗಾಗಿ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ್ ಅವರನ್ನು ಅಮಾನತುಗೊಳಿಸಲಾಗಿದೆ’ ಎಂದರು.

‘ಘಟನೆ ನಡೆದ ವೇಳೆ ನಾಲ್ವರು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು. ಆದರೂ ಇಂತಹ ಪ್ರಕರಣ ನಡೆದಿದೆ. ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ತನಿಖೆ ನಡೆಯುತ್ತಿದೆ. ಇದರಿಂದ ಬರುವ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು. ಸದ್ಯಕ್ಕೆ ಇಲಾಖೆಯ ಮಟ್ಟದಲ್ಲಿ ತನಿಖೆಯಾಗುತ್ತಿದೆ’ ಎಂದು ಹೇಳಿದರು.

ಏನಿದು ಪ್ರಕರಣ?: ಬಿಡಿಎ ನಿವೇಶನ ಕೊಡಿಸುವುದಾಗಿ ವಂಚನೆ ಮಾಡಿದ್ದ ಪ್ರಕರಣದಲ್ಲಿ ಸಿದ್ಧಲಿಂಗಸ್ವಾಮಿ ಎಂಬುವರನ್ನು ಹನುಮಂತ ನಗರ ಠಾಣೆಯ ಪೊಲೀಸರು ಇತ್ತೀಚೆಗೆ ಬಂಧಿಸಿ, ಕಸ್ಟಡಿಗೆ ಪಡೆದಿದ್ದರು. ತನಿಖೆ ವೇಳೆ ತನ್ನ ಮನೆಯಲ್ಲಿ ಕೆಲವು ಪ್ರಕರಣಕ್ಕೆ ಸಂಬಂಧಿಸಿದ ಕೆಲವು ವಸ್ತುಗಳು ಇರುವುದಾಗಿ ಆರೋಪಿ ಹೇಳಿದ್ದ.

ಇದಕ್ಕಾಗಿ ಮಹಜರು ನಡೆಸಲು ಸಿದ್ದಲಿಂಗಸ್ವಾಮಿಯನ್ನು ವಿದ್ಯಾರಣ್ಯಪುರದಲ್ಲಿದ್ದ ಮನೆಗೆ ಶುಕ್ರವಾರ (ಫೆ.26) ಕರೆ ತಂದಿದ್ದರು. ಈ ವೇಳೆ ಎರಡನೇ ಮಹಡಿಯಿಂದ ಆರೋಪಿ ಜಿಗಿದು, ಆತ್ಮಹತ್ಯೆಗೆ ಯತ್ನಿಸಿದ್ದರು. ರಕ್ತಸ್ರಾವ ಸ್ಥಿತಿಯಲ್ಲೇ ಆಸ್ಪತ್ರೆಗೆ ಕರೆದೊಯ್ಯವಾಗ ಮಾರ್ಗಮಧ್ಯೆ ಮೃತಪಟ್ಟಿದ್ದರು. 

ಆತ್ಮಹತ್ಯೆ ಸಂಬಂಧ ವಿದ್ಯಾರಣ್ಯಪುರ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ. ಆರೋಪಿ ಆತ್ಮಹತ್ಯೆಯ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು