ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಆತ್ಮಹತ್ಯೆ: ಎಫ್‌ಐಆರ್ ದಾಖಲು

Published 18 ಜುಲೈ 2023, 23:30 IST
Last Updated 18 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಗಿರಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ವಿದ್ಯಾರ್ಥಿ ಆದಿತ್ಯ ಪ್ರಭು ಸಿ. (19) ಆತ್ಮಹತ್ಯೆ ಪ್ರಕರಣ ಸಂಬಂಧ ಪರೀಕ್ಷೆ ಮೇಲ್ವಿಚಾರಕರು ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಪಿಇಎಸ್‌ ಕಾಲೇಜಿನ ಮಾನವಿಕ ವಿಜ್ಞಾನ ವಿಭಾಗದಲ್ಲಿ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ ಆದಿತ್ಯ, ಕಟ್ಟಡದ ಎಂಟನೇ ಮಹಡಿಯಿಂದ ಬಿದ್ದು ಸೋಮವಾರ (ಜುಲೈ 17) ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾವಿಗೆ ಪರೀಕ್ಷೆ ಮೇಲ್ವಿಚಾರಕರು, ಕಾಲೇಜು ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಕಾರಣವೆಂದು ತಂದೆ ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ದೂರಿನ ವಿವರ: ‘ಆದಿತ್ಯ ತನಗೆ ಅರಿವಿಲ್ಲದಂತೆ ಬ್ಯಾಗ್‌ನಲ್ಲಿ ಮೊಬೈಲ್ ಇರಿಸಿಕೊಂಡು ಪರೀಕ್ಷೆಗೆ ಹೋಗಿದ್ದ. ಮೊಬೈಲ್ ಸಹ ಫ್ಲೈಟ್‌ ಮೂಡ್‌ನಲ್ಲಿತ್ತು. ಬ್ಯಾಗ್ ತಪಾಸಣೆ ವೇಳೆ ಮೊಬೈಲ್ ನೋಡಿದ್ದ ಮೇಲ್ವಿಚಾರಕ, ಆದಿತ್ಯನನ್ನು ತರಾಟೆಗೆ ತೆಗೆದುಕೊಂಡಿದ್ದ. ಮೊಬೈಲ್ ಫ್ಲೈಟ್‌ ಮೂಡ್‌ನಲ್ಲಿತ್ತು ಎಂದು ಹೇಳಿದರೂ ಕೇಳಿರಲಿಲ್ಲ. ಹೆಚ್ಚು ಮಾತನಾಡಲು ಆದಿತ್ಯಗೆ ಅವಕಾಶ ನೀಡಿರಲಿಲ್ಲ’ ಎಂದು ದೂರಿನಲ್ಲಿ ತಂದೆ ತಿಳಿಸಿದ್ದಾರೆ.

‘ಆದಿತ್ಯನನ್ನು ಒತ್ತಾಯದಿಂದ ಕಚೇರಿಗೆ ಕರೆದೊಯ್ದು ಕಿರುಕುಳ ನೀಡಿದ್ದರು. ತಾನು ನಕಲು ಮಾಡುತ್ತಿರಲಿಲ್ಲವೆಂದು ಹೇಳಿದರೂ ಮೇಲ್ವಿಚಾರಕರು ಹಾಗೂ ಇತರರು ಕೇಳಿರಲಿಲ್ಲ. ವಿಷಯ ತಿಳಿದ ತಾಯಿ ಸಹ ಕಚೇರಿಗೆ ಹೋಗಿ ವಿಚಾರಿಸಿದ್ದರು. ಮಗ ನಕಲು ಮಾಡಿದ್ದಾನೆಂಬ ಆರೋಪಕ್ಕೆ ಸಂಬಂಧಪಟ್ಟಂತೆ ಪುರಾವೆ ತೋರಿಸುವಂತೆ ಕೋರಿದ್ದರು. ಆದರೆ, ಆರೋಪಿಗಳು ಆದಿತ್ಯ ಜೊತೆಯಲ್ಲಿ ತಾಯಿಯನ್ನೂ ಅವಮಾನಿಸಿದ್ದರು. ಬಳಿಕ, ತಾಯಿ ಕಚೇರಿಯಲ್ಲಿಯೇ ಕುಳಿತುಕೊಂಡಿದ್ದರು.’

‘ಕಚೇರಿಯಿಂದ ಹೊರಗೆ ಬಂದಿದ್ದ ಆದಿತ್ಯ, ಮಹಡಿಯಿಂದ ಬಿದ್ದಿದ್ದ. ವಿಷಯ ತಿಳಿದ ತಾಯಿ ಸಹ ಸ್ಥಳಕ್ಕೆ ಓಡಿಹೋಗಿದ್ದರು. ಆಂಬುಲೆನ್ಸ್ ಸಹ ಸ್ಥಳಕ್ಕೆ ಬಂದಿತ್ತು. ಅಷ್ಟರಲ್ಲೇ ಆದಿತ್ಯ ಮೃತಪಟ್ಟಿದ್ದ. ಮೇಲ್ವಿಚಾರಕರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಕಿರುಕುಳದಿಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ತಂದೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT