ಮಂಗಳವಾರ, ಜೂನ್ 28, 2022
26 °C

ಮಳಿಗೆಯಿಂದ ಕಾರು ಕಳವು: ಇಬ್ಬರು ವಿದೇಶಿಯರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರು ಮಳಿಗೆಯೊಂದರಿಂದ ದುಬಾರಿ ಕಾರುಗಳನ್ನು ಕದ್ದು ಪರಾರಿಯಾಗಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ಸಂಪಿಗೇಹಳ್ಳಿ ಬಳಿಯ ತಿರುಮೇನಹಳ್ಳಿಯಲ್ಲಿ ವಾಸವಿದ್ದ ಲಿಬಿಯಾದ ಸಫಿ ಎಡ್ಡೆನ್ ಗುಮಾ ತಾಹರ್ ಬೆನ್ ಹಮೈದ್ (27) ಹಾಗೂ ನೈಜೀರಿಯಾದ ಜಾನ್‌ ನೆರೊ (25) ಬಂಧಿತರು.

ಫೆ.24ರ ಮುಂಜಾನೆ ಆರೋಪಿಗಳು ಯಲಹಂಕದ ಕೋಗಿಲು ವೃತ್ತದ ಸಮೀಪವಿರುವ ಕಿಯಾ ಕಾರಿನ ಮಳಿಗೆಗೆ ನುಗ್ಗಿ, ಕಾವಲುಗಾರರಿಗೆ ಚಾಕು ತೋರಿಸಿ ಬೆದರಿಸಿದ್ದರು. ಎರಡು ಎಸ್‌ಯುವಿ ಕಾರುಗಳ ಬೀಗ ಕಸಿದು, ಕಾರಿನೊಂದಿಗೆ ಪರಾರಿಯಾಗಿದ್ದರು. ಈ ಎಲ್ಲ ಘಟನೆ ಮಳಿಗೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

‘ಆರೋಪಿಗಳಿಬ್ಬರೂ ವಿದ್ಯಾರ್ಥಿ ವೀಸಾ ಪಡೆದು ಭಾರತಕ್ಕೆ ಬಂದಿದ್ದರು. ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣ ಆರಂಭಿಸಿ, ಅರ್ಧದಲ್ಲೇ ನಿಲ್ಲಿಸಿದ್ದರು. ಮಾದಕ ವಸ್ತುಗಳ ವ್ಯಸನಿಗಳಾಗಿದ್ದ ಇವರು, ಕದ್ದ ಕಾರುಗಳನ್ನು ಬೆಂಗಳೂರಿನಲ್ಲಿ ನೆಲೆಸಿರುವ ಆಫ್ರಿಕಾ ಪ್ರಜೆಗಳಿಗೆ ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಕದ್ದ ಪ್ರತಿ ಕಾರನ್ನು ₹6 ಲಕ್ಷದವರೆಗೆ ಮಾರಾಟ ಮಾಡಿದ್ದರು. ಮಳಿಗೆಯಿಂದ ಕದ್ದಿದ್ದ ಎರಡು ಕಾರು ಹಾಗೂ ಮತ್ತೊಂದು ಕಾರು ಸೇರಿ ಒಟ್ಟು ಮೂರು ಕಾರುಗಳು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ಬಂಧಿತರಿಂದ ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು