ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 99 ಲಕ್ಷ ಕದ್ದ; ತಂದೆ ದೂರಿನಿಂದ ಸಿಕ್ಕಿಬಿದ್ದ!

ಎಟಿಎಂ ಯಂತ್ರಗಳಿಂದ ಹಣ ದೋಚಿದ್ದ ಕಸ್ಟೋಡಿಯನ್‌ ಸೆರೆ l ಕೃತ್ಯಕ್ಕೆ ಗೆಳೆಯನ ನೆರವು
Last Updated 16 ಮೇ 2019, 5:49 IST
ಅಕ್ಷರ ಗಾತ್ರ

ಬೆಂಗಳೂರು: ಎಟಿಎಂ ಯಂತ್ರಗಳಿಂದ ₹ 99.13 ಲಕ್ಷ ದೋಚಿ ಪರಾರಿಯಾಗಿದ್ದ ‘ಸೆಕ್ಯೂರ್ ವ್ಯಾಲ್ಯೂ’ ಏಜೆನ್ಸಿಯ ಕಸ್ಟೋಡಿಯನ್, ತನ್ನ ತಂದೆ ಕೊಟ್ಟಿದ್ದ ‘ನಾಪತ್ತೆ’ ದೂರಿನಿಂದಲೇ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾನೆ!

ಆಡುಗೋಡಿಯ ಬಿ.ಚಂದ್ರಪ್ಪನಗರ ನಿವಾಸಿ ಕಿಶೋರ್ ಕುಮಾರ್ (28) ಬಂಧಿತ ಕಸ್ಟೋಡಿಯನ್. ಕೃತ್ಯಕ್ಕೆ ನೆರವು ನೀಡಿದ ಆರೋಪದಡಿ ಆತನ ಸ್ನೇಹಿತ ಬೇಗೂರಿನ ರಾಕೇಶ್‌ (37) ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.

‘ಸೆಕ್ಯೂರ್ ವ್ಯಾಲ್ಯೂ’ ಏಜೆನ್ಸಿಯು ನಗರದ ಕೆಲ ಎಟಿಎಂ ಘಟಕಗಳಿಗೆ ಹಣ ತುಂಬುವ ಸಂಬಂಧ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕಿಶೋರ್ ಆರು ವರ್ಷಗಳಿಂದ ಆ ಏಜೆನ್ಸಿಯಲ್ಲಿ ಕಸ್ಟೋಡಿಯನ್ ಹಾಗೂ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ.

ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ₹ 20 ಲಕ್ಷ ಸಾಲ ಮಾಡಿಕೊಂಡಿದ್ದ ಆತ, ಅದನ್ನು ತೀರಿಸುವುದಕ್ಕೆ ಎಟಿಎಂ ಯಂತ್ರಗಳಿಂದ ಹಣ ದೋಚಲು ಸಂಚು ರೂಪಿಸಿದ್ದ. ಕಾರು ಚಾಲಕನಾಗಿದ್ದ ಸ್ನೇಹಿತ ರಾಕೇಶ್ ಬಳಿ ಈ ಕುರಿತು ಚರ್ಚಿಸಿದಾಗ, ಕೃತ್ಯಕ್ಕೆ ಕೈ ಜೋಡಿ
ಸುವುದಾಗಿ ಆತನೂ ಭರವಸೆ ಕೊಟ್ಟಿದ್ದ.

ಹಣ ತುಂಬಿ ವೈರ್ ಕತ್ತರಿಸಿದ: ಅಧಿಕಾರಿಗಳ ಸೂಚನೆಯಂತೆ ಮೇ 1ರ ಬೆಳಿಗ್ಗೆ ಏಜೆನ್ಸಿಯಿಂದ ₹ 1 ಕೋಟಿ ನಗದು ತೆಗೆದುಕೊಂಡು ಸಿಬ್ಬಂದಿ ಜತೆ ಹೊರಟ ಕಿಶೋರ್, ಮೊದಲು ಲ್ಯಾಂಗ್‌ಫೋರ್ಡ್ ರಸ್ತೆಯ ಐಸಿಐಸಿಐ ಬ್ಯಾಂಕ್ ಎಟಿಎಂ ಘಟಕಕ್ಕೆ ₹ 50 ಲಕ್ಷ ತುಂಬಿದ್ದ. ಆ ನಂತರ ಪೂರ್ವನಿಯೋಜಿತ ಸಂಚಿನಂತೆ ಅದನ್ನು ಲಾಕ್ ಮಾಡದೆಯೇ ಹೊರ ಬಂದಿದ್ದ.

ನಂತರ ರೆಸಿಡೆನ್ಸಿ ರಸ್ತೆಯ ಆರ್‌ಬಿಎಲ್ (ರತ್ನಾಕರ ಬ್ಯಾಂಕ್) ಎಟಿಎಂ ಘಟಕದ ಯಂತ್ರಕ್ಕೆ ₹ 50 ಲಕ್ಷ ತುಂಬಿ, ತಾನೇ ಯಂತ್ರದ ವೈರ್‌ ಕತ್ತರಿಸಿ ಬಂದಿದ್ದ. ಇದರಿಂದ ಎಟಿಎಂ ಇಡೀ ದಿನ ಸ್ಥಗಿತಗೊಂಡಿತ್ತು. ಈ ಬಗ್ಗೆ ದೂರು ಬಂದ ನಂತರ ಏಜೆನ್ಸಿಯವರು ರಿಪೇರಿಗೆ ಹೋಗುವಂತೆ ಕಿಶೋರ್‌ಗೇ ಹೇಳಿದ್ದರು. ಇದೇ ಸಮಯಕ್ಕೆ ಕಾಯುತ್ತಿದ್ದ ಆತ, ಕೂಡಲೇ ಗೆಳೆಯನಿಗೆ ಕರೆ ಮಾಡಿ ರೆಸಿಡೆನ್ಸಿ ರಸ್ತೆಗೆ ಬರುವಂತೆ ಸೂಚಿಸಿದ್ದ. ಅಂತೆಯೇ ಸ್ವಲ್ಪ ಸಮಯದಲ್ಲೇ ರಾಕೇಶ್ ಅಲ್ಲಿಗೆ ಬಂದಿದ್ದ.

ರಿಪೇರಿಗೆ ಬಂದವನಂತೆ ಟೂಲ್ಸ್ ಬ್ಯಾಗ್ ತೆಗೆದುಕೊಂಡು ಘಟಕದ ಒಳ ಹೋದ ಕಿಶೋರ್, ಕ್ಯಾಷ್ ಬಾಕ್ಸ್‌ನಲ್ಲಿದ್ದ ₹ 51.30 ಲಕ್ಷವನ್ನು ಬ್ಯಾಗ್‌ಗೆ ತುಂಬಿಕೊಂಡಿದ್ದ. ನಂತರ ಗೆಳೆಯನ ಕಾರು ಹತ್ತಿ ಲ್ಯಾಂಗ್‌ಫೋರ್ಡ್ ರಸ್ತೆಗೆ ಹೋಗಿ, ಅಲ್ಲಿನ ಯಂತ್ರದಿಂದಲೂ ₹ 47.83 ಲಕ್ಷ ತೆಗೆದುಕೊಂಡಿದ್ದ. ನಂತರ ಇಬ್ಬರೂ ಬೇಗೂರಿನ ಕಡೆಗೆ ತೆರಳಿದ್ದರು.

ಒಂದೇ ದಿನಕ್ಕೆ ಹಣ ಖಾಲಿ: ದಿನದ ಹಿಂದಷ್ಟೇ ₹ 50 ಲಕ್ಷ ತುಂಬಿದ್ದರೂ, ಎಟಿಎಂಗಳಲ್ಲಿ ಹಣ ಖಾಲಿಯಾಗಿರುವ ಬಗ್ಗೆ ಬ್ಯಾಂಕ್‌ಗಳಿಂದ ಏಜೆನ್ಸಿಗೆ ದೂರುಗಳು ಬಂದಿದ್ದವು. ಮರುದಿನದಿಂದ ಕಿಶೋರ್ ಕೂಡ ಕೆಲಸಕ್ಕೆ ಗೈರಾಗಿದ್ದ. ಅನುಮಾನಗೊಂಡ ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆತನೇ ಹಣ ಹೊತ್ತೊಯ್ದಿರುವುದು ಖಚಿತವಾಗಿತ್ತು. ಕೂಡಲೇ ಅವರು ಅಶೋಕನಗರ ಠಾಣೆಗೆ ದೂರು ಕೊಟ್ಟಿದ್ದರು.

ಕಿಶೋರ್‌ನ ಮೊಬೈಲ್ ಕರೆ ವಿವರ ಆಧರಿಸಿ ‍ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಅಷ್ಟರಲ್ಲಿ ಕಿಶೋರ್‌ನ ತಂದೆಯೂ ಆಡುಗೋಡಿಯ ಠಾಣೆಯ ಮೆಟ್ಟಿಲೇರಿದ್ದರು. ಮಗನ ಕೃತ್ಯದ ಬಗ್ಗೆ ಅರಿಯದ ಅವರು, ‘ನಾಲ್ಕು ದಿನಗಳಿಂದ ಮಗ ಮನೆಗೆ ಬಂದಿಲ್ಲ. ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ವಿಚಾರಿಸಿದರೂ ಪತ್ತೆಯಾಗಿಲ್ಲ. ದಯವಿಟ್ಟು ಆತನನ್ನು ಹುಡುಕಿಕೊಡಿ’ ಎಂದು ಅಂಗಲಾಚಿದ್ದರು.

ಹೀಗಾಗಿ, ಆಡುಗೋಡಿ ಪೊಲೀಸರೂ ಮೊಬೈಲ್ ಸಂಖ್ಯೆ ಪಡೆದು ತನಿಖೆ ಪ್ರಾರಂಭಿಸಿದ್ದರು. ಕಿಶೋರ್ ಬಗ್ಗೆ ತಿಳಿಯಲು ಏಜೆನ್ಸಿಗೆ ಕರೆ ಮಾಡಿದಾಗ, ‘ಆತ ಹಣ ತೆಗೆದುಕೊಂಡು ಹೋಗಿದ್ದಾನೆ’ ಎಂದು ಹೇಳಿದ್ದರು. ಹೀಗಾಗಿ, ಆಡುಗೋಡಿ ಪೊಲೀಸರೂ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡರು.

ಕಿಶೋರ್‌ನ ಮೊಬೈಲ್‌ನಿಂದ ರಾಕೇಶ್‌ಗೇ ಕೊನೆ ಕರೆ ಹೋಗಿತ್ತು. ಅಲ್ಲದೇ, ಇಬ್ಬರ ಮೊಬೈಲ್‌ಗಳೂ ಬೇಗೂರಿನ ವ್ಯಾಪ್ತಿಯಲ್ಲೇ ಸ್ವಿಚ್ಡ್‌ ಆಫ್ ಆಗಿದ್ದವು. ಈ ಸುಳಿವು ಪೊಲೀಸರನ್ನು ಸೀದಾ ರಾಕೇಶ್‌ನ ಮನೆ ಬಾಗಿಲಿಗೆ ಕರೆದೊಯ್ದಿತ್ತು. ಇಬ್ಬರನ್ನೂ ಆ ಮನೆಯಲ್ಲೇ ವಶಕ್ಕೆ ಪಡೆದುಕೊಂಡರು. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ‘ಸಾಲ ತೀರಿಸಲು ಹಣ ದೋಚಿದ್ದೆವು’ ಎಂದು ಒಪ್ಪಿಕೊಂಡರು.

ಗೆಳೆಯರ ಮನೆಯಲ್ಲಿ ಹಣ

‘ಬೇಗೂರಿನ ವಿಶ್ವಪ್ರಿಯಾ ಲೇಔಟ್‌ನಲ್ಲಿರುವ ರಾಕೇಶ್‌ನ ಮನೆಯಲ್ಲಿ ₹ 30 ಲಕ್ಷ, ಬೊಮ್ಮನಹಳ್ಳಿಯ ವಿರಾಟ್‌ನಗರದಲ್ಲಿರುವ ಕಿಶೋರ್‌ನ ಸ್ನೇಹಿತನ ಮನೆಯಲ್ಲಿ ₹ 17 ಲಕ್ಷ, ರೂಪೇನ ಅಗ್ರಹಾರದ ಎನ್‌ಜಿಆರ್‌ ಲೇಔಟ್‌ನಲ್ಲಿನ ಇನ್ನೊಬ್ಬ ಗೆಳೆಯನ ರೂಮ್‌ನಲ್ಲಿ ₹ 48 ಲಕ್ಷವನ್ನು ಜಪ್ತಿ ಮಾಡಿದ್ದೇವೆ. ಇವರು ಹಣ ಇಟ್ಟು ಹೋಗಿರುವ ವಿಚಾರ ಆ ಸ್ನೇಹಿತರಿಗೇ ಗೊತ್ತಿರಲಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT