ಗುರುವಾರ , ಸೆಪ್ಟೆಂಬರ್ 19, 2019
24 °C

ಚಿಂದಿ ಮೂಟೆಗಾಗಿ ಜಗಳ; ಕೊಲೆಯಲ್ಲಿ ಅಂತ್ಯ

Published:
Updated:

ಬೆಂಗಳೂರು: ಕಾಟನ್‌ಪೇಟೆ ಠಾಣೆ ವ್ಯಾಪ್ತಿಯಲ್ಲಿ ನಾಗರಾಜ್ (35) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಆ ಸಂಬಂಧ ರಾಜ ಅಲಿಯಾಸ್ ಅಣ್ಣಬಾಂಡ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಕೊಲೆಯಾದ ನಾಗರಾಜ್, ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಆರೋಪಿ ಸಹ ಚಿಂದಿ ಆಯುತ್ತಿದ್ದ. ನಿತ್ಯವೂ ಅವರಿಬ್ಬರು ಗುಜರಿ ಮಾರಾಟ ಅಂಗಡಿ ಎದುರು ಮಲಗುತ್ತಿದ್ದರು. ಅದೇ ಸ್ಥಳದಲ್ಲೇ ಕೊಲೆ ನಡೆದಿದೆ’ ಎಂದು ಪೊಲೀಸರು ಹೇಳಿದರು.

‘ಇದೇ 12ರಂದು ಚಿಂದಿ ತುಂಬಿದ್ದ ಮೂಟೆ ಸಮೇತ ಗುಜರಿ ಅಂಗಡಿಗೆ ಹೋಗಿದ್ದ ನಾಗರಾಜ್, ಅಲ್ಲಿಯೇ ರಾತ್ರಿ ಮಲಗಿದ್ದರು. ಕುಡಿದ ಅಮಲಿನಲ್ಲಿ ಜಗಳ ತೆಗೆದಿದ್ದ ಆರೋಪಿ, ಚಿಂದಿ ಮೂಟೆ ತನ್ನದೆಂದು ವಾದಿಸಿದ್ದ. ಅದನ್ನು ತಾನೇ ಮಾರಾಟ ಮಾಡುವುದಾಗಿ ಹೇಳಿದ್ದ’

’ಮೂಟೆ ವಿಚಾರವಾಗಿಯೇ ಮಾತಿಗೆ ಮಾತು ಬೆಳೆದು ‍ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆರೋಪಿ, ಚಾಕುವಿನಿಂದ ನಾಗರಾಜ್ ಅವರ ಹೊಟ್ಟೆ ಹಾಗೂ ಎದೆಗೆ ಚುಚ್ಚಿ ಪರಾರಿಯಾಗಿದ್ದ. ತೀವ್ರ ಗಾಯಗೊಂಡಿದ್ದ ನಾಗರಾಜ್‌ ಅವರನ್ನು ಸ್ಥಳೀಯರೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು. 

Post Comments (+)