ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಬಸ್‌ಪೇಟೆ | ಹೂತಿದ್ದ ಮೃತದೇಹ ಹೊರ ತೆಗೆದ ಪೊಲೀಸರು

ಜುಲೈ 25ರಂದು ಮೃತಪಟ್ಟಿದ್ದ ಗ್ರಾ.ಪಂ ನೌಕರ; ಮರಣೋತ್ತರ ಪರೀಕ್ಷೆ ಇಲ್ಲದೆ ನಡೆದಿದ್ದ ಅಂತ್ಯಕ್ರಿಯೆ
Last Updated 1 ಆಗಸ್ಟ್ 2020, 20:56 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ಸೋಂಪುರ ಹೋಬಳಿಯ ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಜಿ.ಜಾಜೂರು ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸದಾನಂದ (41) ಎಂಬುವರ ಸಾವಿನಲ್ಲಿ ಅನುಮಾನ ವ್ಯಕ್ತವಾಗಿದೆ. ವಿಷಯವನ್ನು ಮುಚ್ಚಿಟ್ಟು ವಾರದ ಹಿಂದೆ ಹೂತಿದ್ದ ಮೃತದೇಹವನ್ನು ದಾಬಸಪೇಟೆ ಪೊಲೀಸರು ಶನಿವಾರ ಗುಂಡಿಯಿಂದ ಹೊರಗೆ ತೆಗೆಸಿ ಮರಣೋತ್ತರ ಪರೀಕ್ಷೆ ಮಾಡಿಸಿದರು.

‘ಸದಾನಂದ ಅವರು ಗ್ರಾಮ ಪಂಚಾಯಿತಿಯಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಇದೇ 25ರಂದು ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಠಾಣೆಗೆ ಮಾಹಿತಿ ನೀಡದ ಸಂಬಂಧಿಕರು, ಸಾವಿನ ವಿಷಯವನ್ನು ಮುಚ್ಚಿಟ್ಟು ತರಾತುರಿಯಲ್ಲಿ ತಡರಾತ್ರಿಯೇ ಅಂತ್ಯ ಸಂಸ್ಕಾರ ನಡೆಸಿದ್ದರು’ ಎಂದು ಪೊಲೀಸರು ಹೇಳಿದರು.

‘ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಅನುಮಾನಗಳು ಇವೆ. ಇದರ ಆಧಾರದಲ್ಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹೀಗಾಗಿ, ವಾರದ ಹಿಂದೆ ಹೂತಿದ್ದ ಮೃತದೇಹವನ್ನು ತಹಶೀಲ್ದಾರ್ ಅವರ ಸಮ್ಮುಖದಲ್ಲೇ ಹೊರಗೆ ತೆಗೆಸಿ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ಪುನಃ ಮೃತದೇಹವನ್ನು ಗುಂಡಿಯಲ್ಲಿ ಹೂಳಲಾಗಿದೆ. ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ’ ಎಂದೂ ತಿಳಿಸಿದರು.

ಸ್ಥಳೀಯರು ನೀಡಿದ್ದ ಮಾಹಿತಿ: ‘ಸದಾನಂದ ಅವರಿಗೆ ಪತ್ನಿ ಹಾಗೂ ನಾಲ್ವರು ಮಕ್ಕಳಿದ್ದಾರೆ. ಮದ್ಯವ್ಯಸನಿ ಆಗಿದ್ದ ಎನ್ನಲಾದ ಸದಾನಂದ, ನಿತ್ಯವೂ ಪತ್ನಿ ಜೊತೆ ಜಗಳ ಮಾಡುತ್ತಿದ್ದರು. ಜುಲೈ 26ರಂದು ನಡೆಯಬೇಕಿದ್ದ ದೊಡ್ಡ ಮಗಳ ಸೀಮಂತ ಕಾರ್ಯಕ್ರಮಕ್ಕೆ ಜುಲೈ 25ರಂದೇ ದಿನಸಿ ತಂದುಕೊಟ್ಟಿದ್ದ ಅವರು, ಮನೆಯಿಂದ ಹೊರಗೆ ಹೋಗಿದ್ದರು. ಸಂಜೆ ಮನೆಗೆ ಬಂದಿದ್ದ ಅವರು, ಕೊಠಡಿಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಸಾವಿನ ಬಗ್ಗೆ ಸ್ಥಳೀಯರಿಗೂ ಮಾಹಿತಿ ನೀಡದ ಸಂಬಂಧಿಕರು, ತಡರಾತ್ರಿಯೇ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದರು. ಇದರಿಂದ ಅನುಮಾನಗೊಂಡ ಸ್ಥಳೀಯರೇ ಠಾಣೆಗೆ ಮಾಹಿತಿ ನೀಡಿದ್ದರು’ ಎಂದೂ ತಿಳಿಸಿದರು.

‘ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದುವೇ ಕೊಲೆಗೂ ಕಾರಣವಾಗಿರುವ ಅನುಮಾನವೂ ಇದೆ. ನಿಖರ ತನಿಖೆಯಿಂದಲೇ ಸಾವಿಗೆ ಕಾರಣ ತಿಳಿಯಲಿದೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT