ಗುರುವಾರ , ಮೇ 26, 2022
28 °C

ದಲಿತ ಚಳವಳಿ ಕಾರ್ಯಾಗಾರ ಫೆ.20–21ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ (ದಸಂಸ ಒಕ್ಕೂಟ) ಇದೇ 20 ಮತ್ತು 21ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ‘ದಲಿತ ಚಳವಳಿಯ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ’ ಕಾರ್ಯಾಗಾರ ಹಮ್ಮಿಕೊಂಡಿದೆ.

‘ಜನಸಾಮಾನ್ಯರು ಮತ್ತು ರೈತರ ಸಾಂವಿಧಾನಿಕ ಹಕ್ಕು ಕಿತ್ತುಕೊಳ್ಳುತ್ತಿರುವ ನೀತಿಗಳ ವಿರುದ್ಧ ಶೋಷಿತ ಸಮುದಾಯವನ್ನು ಜಾಗೃತಗೊಳಿಸಲು ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ’ ಎಂದು ವೇದಿಕೆಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಲೇಖಕ ದುರ್ಗಂ ಸುಬ್ಬಾರಾವ್ ರಚಿತ ‘ಅಂಬೇಡ್ಕರ್ ಸಿದ್ಧಾಂತ’ ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು. ‘ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಅಪಾಯಗಳು’ ವಿಷಯ ಕುರಿತು ಚಿಂತಕ ಶಿವಸುಂದರ್, ಎನ್.ಮುನಿಸ್ವಾಮಿ, ‘ಖಾಸಗೀಕರಣ ವರ್ಸಸ್ ಮೀಸಲಾತಿ’ ಕುರಿತು ಚಿಂತಕ ಶ್ರೀಪಾದ್ ಭಟ್, ‘ಮೀಸಲಾತಿ ವರ್ಗೀಕರಣ’ ಬಗ್ಗೆ ದಲಿತ ಮುಖಂಡ ದೊರೈರಾಜು, ‘ರಾಷ್ಟ್ರೀಯ ಹೊಸ ಶಿಕ್ಷಣ ನೀತಿ’ ಕುರಿತು ಶಿಕ್ಷಣ ತಜ್ಞೆ ಕೆ. ನಂದಿನಿ ಮಾತನಾಡಲಿದ್ದಾರೆ ಎಂದರು.

ಹಳ್ಳಿಕಾರ ಮಠ ಭೂಮಿಪೂಜೆ 22ರಂದು
ಬೆಂಗಳೂರು:
ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದ ಕಲ್ಲೂರು ಮುಖ್ಯರಸ್ತೆಯಲ್ಲಿ ಹಳ್ಳಿಕಾರ ಮಠ ನಿರ್ಮಾಣವಾಗಲಿದ್ದು, ಫೆ.22ರಂದು ಭೂಮಿಪೂಜೆ ನೆರವೇರಿಸಲಾಗುತ್ತದೆ ಎಂದು ಹಳ್ಳಿಕಾರ ಮಠ ಟ್ರಸ್ಟ್‌ನ ಅಧ್ಯಕ್ಷ ನಾಗಯ್ಯ ತಿಳಿಸಿದರು.

‘ಪುರಾತನ ಕಾಲದಿಂದಲೂ ಪಶು ಸಂಗೋಪನೆ ಆಧಾರಿತ ಜೀವನ ಸಾಗಿಸುತ್ತಿರುವ ಹಳ್ಳಿಕಾರ ಜನಾಂಗ ಮಾರ್ಗದರ್ಶನವಿಲ್ಲದೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಜನಾಂಗದ ಅಭಿವೃದ್ಧಿಗಾಗಿ ಒಂದು ಎಕರೆ ಸ್ಥಳದಲ್ಲಿ ಈ ಮಠ ಸ್ಥಾಪಿಸುತ್ತಿದ್ದೇವೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಇಸ್ಕಾನ್ ಸಂಸ್ಥೆಯ ಆಸ್ಟ್ರೇಲಿಯಾ ಘಟಕದ ಮುಖ್ಯಸ್ಥರಾದ ಬಾಲಗುರು ಅವರನ್ನು ಮಠದ ಪೀಠಾಧಿಪತಿಯಾಗಿ ಆಯ್ಕೆ ಮಾಡಲಾಗಿದೆ. ಮಠ ನಿರ್ಮಾಣವಾದ ನಂತರ ಜನಾಂಗದ ಗ್ರಾಮೀಣ ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಪದವಿಯವರೆಗೆ ಶಿಕ್ಷಣ ನೀಡಲಿದೆ’ ಎಂದರು.

ವಸತಿ ಸಚಿವ ವಿ.ಸೋಮಣ್ಣ, ಬೆಂಗಳೂರು ಬೇಲಿಮಠದ ಶಿವರುದ್ರಸ್ವಾಮೀಜಿ ಮತ್ತು ವಿಶ್ವ ಒಕ್ಕಲಿಗರ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಸಂಸದ ಬಿ.ಎಸ್. ಬಸವರಾಜು, ದಯಾನಂದಸಾಗರ ವಿಶ್ವವಿದ್ಯಾಲಯದ ಕುಲಪತಿ ಡಾ.ಹೇಮಚಂದ್ರ ಸಾಗರ್ ಭಾಗವಹಿಸುವರು ಎಂದರು.

ಟ್ರಸ್ಟ್ ಗೌರವಾಧ್ಯಕ್ಷರಾದ ಡಾ.ಪಟೇಲ್ ಪಾಂಡು ಮತ್ತು ರಂಗಶ್ರೀ ರಂಗಸ್ವಾಮಿ, ಉಪಾಧ್ಯಕ್ಷ ಸೋಮಶೇಖರ್, ಸಂಚಾಲಕ ಶಿವಣ್ಣ, ಎನ್.ಎಸ್.ದೊಡ್ಡೇಗೌಡರು ಸುದ್ದಿಗೋಷ್ಠಿಯಲ್ಲಿದ್ದರು.

ರೇಣುಕಾ ಯಲ್ಲಮ್ಮದೇವಿ ದೇಗುಲ ಜೀರ್ಣೋದ್ಧಾರ
ಬೆಂಗಳೂರು: ‘
ಶ್ರೀ ಸಾವಿತ್ರಮ್ಮ ತಿಮ್ಮೇಗೌಡ ಟ್ರಸ್ಟ್‌ನಿಂದ ಮಂಡ್ಯ ಜಿಲ್ಲೆ ಕಾಟೆದೊಡ್ಡಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗುವುದು. ನಿರ್ಮಾಣ ಕಾರ್ಯದ ಆರಂಭಕ್ಕಾಗಿ ಇದೇ 19ರಂದು ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ’ ಎಂದು ಎಂದು ಟ್ರಸ್ಟಿ ಎಂ.ಡಿ ಸುನೀತಾ ತಿಮ್ಮೇಗೌಡ ಹೇಳಿದರು.

‘ನನ್ನ ತಾಯಿ ಕೆ.ಸಾವಿತ್ರಮ್ಮ ಸುತ್ತಮುತ್ತಲ ಗ್ರಾಮದ ಜನರ ಅನುಕೂಲಕ್ಕೆ ಕಾಟೆದೊಡ್ಡಿ ಗ್ರಾಮದಲ್ಲಿ 100 ವರ್ಷದ ಹಿಂದಿನ ಯಲ್ಲಮ್ಮ ದೇವಸ್ಥಾನ ಮರು ನಿರ್ಮಾಣಕ್ಕೆ ಕೈ ಹಾಕಿದ್ದರು. ಅವರು ನಿಧನರಾಗಿದ್ದರಿಂದ ಈ ಕಾರ್ಯ ನನೆಗುದಿಗೆ ಬಿದ್ದಿತ್ತು. ಈಗ ಮತ್ತೆ ಚಾಲನೆ ನೀಡಲಾಗುತ್ತಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು