ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ನೀಲಿ, ನೀಲಿ: ಸಮಾನ ಮನಸ್ಕರು ಒಗ್ಗೂಡಲು ದಲಿತ ಸಂಘಟನೆಗಳ ನಿರ್ಧಾರ

Last Updated 6 ಡಿಸೆಂಬರ್ 2022, 11:25 IST
ಅಕ್ಷರ ಗಾತ್ರ

ಬೆಂಗಳೂರು: ಕೋಮುವಾದಿ ಶಕ್ತಿಗಳು ಹಾಗೂ ರಾಜಕೀಯ ಪಕ್ಷಗಳ ಜತೆಗಿರುವವರನ್ನು ಹೊರತುಪಡಿಸಿ ಎಲ್ಲ ಸಮಾನ ಮನಸ್ಕ ದಲಿತ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಲು ನಿರ್ಧರಿಸಿವೆ. ರಾಜ್ಯಮಟ್ಟದಿಂದ ಗ್ರಾಮಗಳ ಹಂತದವರೆಗೂ ಈ ರೀತಿಯ ಏಕತೆ ಪ್ರದರ್ಶಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ನಗರದ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ‘ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತರ ಸಾಂಸ್ಕೃತಿಕ ಪ್ರತಿರೋಧ ದಲಿತ ಸಂಘಟನೆಗಳ ಬೃಹತ್‌ ಐಕ್ಯತಾ ಸಮಾವೇಶ’ದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು ಸೇರಿದಂತೆ ಹತ್ತು ದಲಿತ ಸಂಘಟನೆಗಳ ನಾಯಕರು ಸೇರಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಸಂಘರ್ಷ ಸಮಿತಿನಾಯಕ ಇಂದೂಧರ ಹೊನ್ನಾಪುರ, ‘ಒಗ್ಗೂಡಿ ಹೋರಾಡುವುದು ಈ ಹೊತ್ತಿನ ತುರ್ತು. ಕೋಮುವಾದಿಗಳ ಜತೆ ಇರುವವರನ್ನು ಹೊರತುಪಡಿಸಿ ಎಲ್ಲರಿಗೂ ಸ್ವಾಗತ. ಒಂದಾಗಿ ಹೋರಾಟದಲ್ಲಿ ಮುನ್ನಡೆಯಲು ಹತ್ತು ಸಮಾನ ಮನಸ್ಕ ಸಂಘಟನೆಗಳ ಸದಸ್ಯರು ನಿರ್ಧರಿಸಿದ್ದೇವೆ’ ಎಂದು ಪ್ರಕಟಿಸಿದರು.

ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಮೊಮ್ಮಗಳು ರಮಾಬಾಯಿ ಅಂಬೇಡ್ಕರ್‌, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ಯಿ ಎಚ್‌.ಎನ್‌. ನಾಗಮೋಹನ ದಾಸ್‌ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಕರ್ನಾಟಕ ರಾಜ್ಯ ರೈತ ಸಂಘ, ಮಹಿಳಾ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳೂ ಈ ಸಮಾವೇಶವನ್ನು ಬೆಂಬಲಿಸಿದ್ದವು.

ರಾಜ್ಯವ ವಿವಿಧ ಭಾಗಗಳಿಂದ ಸಮಾವೇಶಕ್ಕೆ ಬಂದಿದ್ದ ಹಲವು ಸಾವಿರ ಮಂದಿ ನೀಲಿ ಶಾಲು ಎತ್ತಿ ಬೀಸುತ್ತಾ ಈ ತೀರ್ಮಾನವನ್ನು ಬೆಂಬಲಿಸಿದರು. ಮೈದಾನದ ಉದ್ದಗಲಕ್ಕೆ ‘ಜೈ ಭೀಮ್‌’ ಘೋಷಣೆಗಳು ಮೊಳಗಿದವು.

ಎಲ್ಲೆಲ್ಲೂ ನೀಲಿ, ನೀಲಿ: ಅಂಬೇಡ್ಕರ್‌ ಅವರ ಪರಿನಿರ್ವಾಣ ದಿನವೇ ನಡೆದ ಈ ಸಮಾವೇಶಕ್ಕೆ ರಾಜ್ಯದ ವಿವಿಧೆಡೆಯಿಂದ ಹತ್ತಾರು ಸಾವಿರ ಜನರು ಬಂದಿದ್ದರು. ನೀಲಿ ಶಾಲು, ಟೋಪಿ ಧರಿಸಿ, ನೀಲಿ ಬಾವುಟಗಳನ್ನು ಹಿಡಿದಿದ್ದರು. ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಕಣ್ಣು ಹಾಸಿದಲ್ಲೆಲ್ಲಾ ನೀಲಿ ಬಣ್ಣವೇ ಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT