ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದರ್ಶನ್‌ ಆತಿಥ್ಯ ಪ್ರಕರಣದ ತನಿಖೆ | ಜೈಲೊಳಗೆ ಮೊಬೈಲ್ ಅಂಗಡಿ: ಕೈದಿ ವಶಕ್ಕೆ

Published : 20 ಸೆಪ್ಟೆಂಬರ್ 2024, 15:48 IST
Last Updated : 20 ಸೆಪ್ಟೆಂಬರ್ 2024, 15:48 IST
ಫಾಲೋ ಮಾಡಿ
Comments

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ ಅವರಿಗೆ ವಿಶೇಷ ಆತಿಥ್ಯ ಕಲ್ಪಿಸಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಆಗ್ನೇಯ ವಿಭಾಗದ ಪೊಲೀಸರು, ಮತ್ತೊಬ್ಬ ವಿಚಾರಣಾಧೀನ ಕೈದಿಯನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಕೋಲಾರ ಜಿಲ್ಲೆಯ ಕೆಜಿಎಫ್‌ನ ವಿಜಯ್‌ನನ್ನು ಹುಳಿಮಾವು ಇನ್‌ಸ್ಪೆಕ್ಟರ್‌ ನೇತೃತ್ವದ ತಂಡವು ಕಸ್ಟಡಿಗೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದೆ. ಇನ್ನು ಪೊಲೀಸ್‌ ಕಸ್ಟಡಿಯಲ್ಲಿರುವ ವಿಲ್ಸನ್‌ ಗಾರ್ಡನ್‌ ನಾಗ ಅಲಿಯಾಸ್‌ ನಾಗರಾಜ್‌ ಹಾಗೂ ವೇಲು ಅವರ ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

‘ಜೈಲಿನೊಳಗೆ ಇತರೆ ಕೈದಿಗಳಿಗೆ ವಿಜಯ್‌ ಮೊಬೈಲ್‌ ಫೋನ್‌ ವ್ಯವಸ್ಥೆ ಮಾಡುತ್ತಿದ್ದ. ಇದಕ್ಕೆ ಪೂರಕ ಸಾಕ್ಷ್ಯಾಧಾರಗಳು ಸಿಕ್ಕಿವೆ. ಹೀಗಾಗಿ, ಆತನನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಜೈಲಿನ ಒಳಗೆ ವಿಜಯ್‌ ಮೊಬೈಲ್‌ ಫೋನ್‌ಗಳ ಅಂಗಡಿಯನ್ನೇ ತೆರೆದಿದ್ದ. ಜೈಲು ಸಿಬ್ಬಂದಿಯ ನೆರವು ಪಡೆದು ಸ್ಮಾರ್ಟ್‌ಫೋನ್‌ಗಳನ್ನು ಹೊರಗಿನಿಂದ ಖರೀದಿಸಿ, ತರಿಸುತ್ತಿದ್ದ. ಅದನ್ನು ಒಳಗಿದ್ದ ಕೈದಿಗಳಿಗೆ ಮಾರಾಟ ಮಾಡುತ್ತಿದ್ದ. ಇದೇ ಕಾರಣದಿಂದ ಕೈದಿಗಳಿಗೆ ಮೊಬೈಲ್‌ಗಳು ಸುಲಭವಾಗಿ ಸಿಗುತ್ತಿದ್ದವು’ ಎಂದು ತನಿಖಾ ಮೂಲಗಳು ತಿಳಿಸಿವೆ.

‘ಸೆ.15ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ದಾಳಿ ನಡೆಸಿದಾಗ 26 ಮೊಬೈಲ್‌ ಫೋನ್‌ಗಳು ಪತ್ತೆಯಾಗಿದ್ದವು. ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ವಿಜಯ್‌ ಮೊಬೈಲ್‌ ಫೋನ್‌ ಪೂರೈಸುತ್ತಿದ್ದ ಎಂಬುದು ಗೊತ್ತಾಗಿದೆ. ವಿಲ್ಸನ್‌ ಗಾರ್ಡನ್‌ ನಾಗ ಹಾಗೂ ವೇಲು ಬಳಿಯೂ ಮೊಬೈಲ್‌ ಫೋನ್‌ಗಳು ಸಿಕ್ಕಿವೆ’ ಎಂದು ಮೂಲಗಳು ಹೇಳಿವೆ.

‘ಇದುವರೆಗೂ ಮೂವರನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿದ್ದು, ಇವರು ನೀಡಿದ ಹೇಳಿಕೆ ಆಧರಿಸಿ ಇನ್ನಷ್ಟು ರೌಡಿಶೀಟರ್‌ ಕೈದಿಗಳನ್ನು ಕಸ್ಟಡಿಗೆ ಪಡೆದುಕೊಳ್ಳಲಾಗುವುದು’ ಎಂದು ಮೂಲಗಳು ತಿಳಿಸಿವೆ.

‘ಜೈಲಿಗೆ ಯಾರು ಮೊಬೈಲ್‌ ಫೋನ್‌ ತಂದುಕೊಡುತ್ತಿದ್ದರು. ಎಲೆಕ್ಟ್ರಿಕ್‌ ಸ್ಟೌಗಳನ್ನು ಯಾವ ಉದ್ದೇಶಕ್ಕೆ ಬ್ಯಾರಕ್‌ನಲ್ಲಿ ಇಟ್ಟುಕೊಳ್ಳಲಾಗಿತ್ತು ಎಂಬ ಪ್ರಶ್ನೆಗಳನ್ನು ನಾಗ ಹಾಗೂ ವೇಲುಗೆ ಕೇಳಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT