ಬೆಂಗಳೂರು: ಚಿತ್ರದುರ್ಗದಿಂದ ರೇಣುಕಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತರುವ ವೇಳೆಯಲ್ಲೇ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ವಾಚ್, ಉಂಗುರ ಹಾಗೂ ಕರಡಿಗೆಯನ್ನು ಆರೋಪಿಗಳು ಸುಲಿಗೆ ಮಾಡಿದ್ದರು ಎಂಬದು ತನಿಖೆ ವೇಳೆ ಗೊತ್ತಾಗಿದೆ.
ತುಮಕೂರಿನ ರಂಗಾಪುರದ ಬಳಿ ಬಾರ್‌ನಲ್ಲಿ ಆರೋಪಿಗಳಾದ ರಾಘವೇಂದ್ರ, ಜಗದೀಶ್, ಅನುಕುಮಾರ್ ಅವರು ಪಾರ್ಟಿ ಮಾಡಿ, ಹಣವನ್ನು ರೇಣುಕಸ್ವಾಮಿ ಅವರಿಂದಲೇ ಕೊಡಿಸಿದ್ದರು. ಬಾರ್‌ನಲ್ಲಿ ಮದ್ಯ ಖರೀದಿಸಿದ್ದು, ಟೋಲ್‌ನಲ್ಲಿ ಹಣ ಪಾವತಿಸಿರುವ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಎಲ್ಲ ಅಂಶಗಳನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಜೂನ್ 8ರ ಮಧ್ಯಾಹ್ನ 1.30ಕ್ಕೆ ರೇಣುಕಸ್ವಾಮಿ ಅವರನ್ನು ಪಟ್ಟಣಗೆರೆ ಶೆಡ್‌ಗೆ ಕರೆತರಲಾಗಿತ್ತು. ದರ್ಶನ್ ಬರುವ ಮುನ್ನವೇ ಆರೋಪಿಗಳು ಮರದ ರೆಂಬೆಯಿಂದ ಅವರ ಮೇಲೆ ಹಲ್ಲೆ ನಡೆಸಿದ್ದರು.
ನಂತರ ಬಂದ ದರ್ಶನ್ ಸಹ ರೇಣುಕಸ್ವಾಮಿ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಚಿಕನ್ ಬಿರಿಯಾನಿ ತಿನ್ನಿಸಿದ್ದರು. ‘ನಾನು ಜಂಗಮ, ಮಾಂಸಾಹಾರ ತಿನ್ನುವುದಿಲ್ಲ’ ಎಂದು ನಿರಾಕರಿಸಿ, ಬಾಯಿಂದ ಅನ್ನದ ಅಗುಳು ಉಗುಳಿದ್ದರು. ಇದರಿಂದ ಕುಪಿತಗೊಂಡ ದರ್ಶನ್, ‘ಅನ್ನಕ್ಕೆ ಬೆಲೆ ಇಲ್ಲವೇ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೂಟು ಧರಿಸಿದ್ದ ಕಾಲಿನಿಂದ ಒದ್ದಿದ್ದರು.
ಸಂಜೆ 4.45ಕ್ಕೆ ಶೆಡ್‌ಗೆ ಬಂದ ದರ್ಶನ್ ಪ್ರೇಯಸಿ ಪವಿತ್ರಾಗೌಡ ಸಹ ರೇಣುಕಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದರು. ಕ್ಷಮೆ ಕೋರುವಂತೆ ರೇಣುಕಸ್ವಾಮಿಗೆ ಸೂಚಿಸಲಾಗಿತ್ತು. ಆಗ ಕ್ಷಮೆ ಕೇಳಿಸಿ, ಪವಿತ್ರಾ ಕಾಲಿಗೆ ಬೀಳಿಸಲಾಗಿತ್ತು ಎಂಬುದನ್ನು ಆರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ.
ದರ್ಶನ್ ಹಾಗೂ ಸಹಚರರು ಪಟ್ಟಣಗೆರೆ ಶೆಡ್‌ಗೆ ಬಂದು ಹೋಗಿರುವ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ರೇಣುಕಸ್ವಾಮಿ ರಕ್ತ ಹಾಗೂ ಫೋಟೊಗಳು ಮಾತ್ರವಲ್ಲದೇ ಹತ್ಯೆ ಕೃತ್ಯ ನಡೆದ ಪಟ್ಟಣಗೆರೆ ಶೆಡ್‌ನ ಮಣ್ಣು ಸಹ ಮಹತ್ವದ ವೈಜ್ಞಾನಿಕ ಪುರಾವೆಯಾಗಿದೆ. ಶೆಡ್‌ನ ಮಣ್ಣು ದರ್ಶನ್ ಮತ್ತು ಅವರ ಮೂವರು ಸಹಚರರು ಧರಿಸಿದ್ದ ಶೂಗಳಲ್ಲಿ ಅಂಟಿದ್ದ ಮಣ್ಣಿಗೆ ಹೋಲಿಕೆಯಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ಖಚಿತಪಡಿಸಿರುವುದನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ತಾವು ಧರಿಸಿದ್ದ ಶೂಗಳನ್ನು ಹತ್ಯೆ ಬಳಿಕ ಬಿಚ್ಚಿದ್ದ ದರ್ಶನ್, ಹೊಸಕೆರೆಹಳ್ಳಿ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ತಮ್ಮ ಪತ್ನಿ ವಿಜಯಲಕ್ಷ್ಮೀ ಅವರು ನೆಲಸಿರುವ ಫ್ಲ್ಯಾಟ್‌ಗೆ ಕಳುಹಿಸಿದ್ದರು. ಬಳಿಕ ಅವರ ಪತ್ನಿ ಮನೆಯಿಂದಲೇ ಆ ಶೂಗಳನ್ನು ಪೊಲೀಸರು ಜಪ್ತಿ ಮಾಡಿದ್ದರು.
ವಿಚಾರಣೆ ವೇಳೆ, ‘ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ’ ಎನ್ನುತ್ತಿದ್ದ ದರ್ಶನ್, ಕೆಲ ದಿನಗಳ ಬಳಿಕ ‘ಏನೋ ತಪ್ಪಾಗಿ ಹೋಗಿದೆ, ಹುಡುಗರು ಏನೋ ತಪ್ಪು ಮಾಡಿದ್ದಾರೆ’ ಎಂದು ಹೇಳಿದ್ದರು. ದರ್ಶನ್ ಹೇಳಿಕೆಯನ್ನು (20 ಪುಟ) ಆರೋಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.
ರೇಣುಕಸ್ವಾಮಿ ಅಪಹರಣಕ್ಕೂ ಮುನ್ನ ಆರೋಪಿಗಳು ಆಟೊದಲ್ಲಿ ಕುಳಿತುಕೊಂಡು ಅವರನ್ನು ಹಿಂಬಾಲಿಸಿಕೊಂಡು ಮೊಬೈಲ್‌ನಲ್ಲಿ ಸೆರೆಹಿಡಿದಿರುವ ಫೋಟೊವನ್ನು ಮರುಸಂಗ್ರಹಿಸಲಾಗಿದೆ. ಅಪಹರಣದ ದಿನ ರೇಣುಕಸ್ವಾಮಿ ಚಿತ್ರದುರ್ಗದ ಪಂಕ್ಚರ್ ಶಾಪ್‌ನಲ್ಲಿ ತನ್ನ ಸ್ಕೂಟರ್ ಚಕ್ರಕ್ಕೆ ಗಾಳಿ ತುಂಬಿಸುತ್ತಿದ್ದರು. ಆಗ ಆರೋಪಿಗಳು ಫೋಟೊ ತೆಗೆದಿದ್ದರು.
ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ
ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಸೋಮವಾರ (ಸೆ.9) ಅಂತ್ಯವಾಗಲಿದೆ. ಹಾಗಾಗಿ ನಟ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳನ್ನು ಕಾರಾಗೃಹದಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ನಗರದ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುತ್ತದೆ. ಜಾಮೀನು ಅರ್ಜಿ ಸಲ್ಲಿಕೆ ಕುರಿತು ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಹೋದರ ದಿನಕರ್ ತೂಗುದೀಪ ಅವರು ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆರೋಪ ಪಟ್ಟಿಯ ಪ್ರತಿಯನ್ನು ಪಡೆದ ಬಳಿಕ ಪರಿಶೀಲನೆ ನಡೆಸಿ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದು ದರ್ಶನ್ ಪರ ವಕೀಲರು ಮಾಹಿತಿ ನೀಡಿದ್ದಾರೆ. ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಇತರ ಆರೋಪಿಗಳಾದ ಅನುಕುಮಾರ್ ವಿನಯ್ ಹಾಗೂ ಕೇಶವಮೂರ್ತಿ ಅವರು ಜಾಮೀನು ಕೋರಿ ಸಲ್ಲಿದಿದ್ದ ಅರ್ಜಿಗಳನ್ನು ನ್ಯಾಯಾಲಯವು ವಜಾಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.