ಬುಧವಾರ, ಆಗಸ್ಟ್ 21, 2019
22 °C

ಮಗಳನ್ನು ಕಟ್ಟಡದಿಂದ ಕೆಳಗೆಸೆದು ತಾಯಿಯೂ ಜಿಗಿದು ಆತ್ಮಹತ್ಯೆ

Published:
Updated:
Prajavani

ಬೆಂಗಳೂರು: ಏಳು ವರ್ಷದ ಮಗಳನ್ನು ಅಪಾರ್ಟ್‍ಮೆಂಟ್‍ನ 20ನೇ ಮಹಡಿಯಿಂದ ಕೆಳಗೆ ಎಸೆದು, ಬಳಿಕ ತಾಯಿಯೂ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಟ್ಟೇನಹಳ್ಳಿಯ ಆರ್‌ಬಿಐ ಲೇಔಟ್‍ನಲ್ಲಿ ಸೋಮವಾರ ಸಂಜೆ ನಡೆದಿದೆ.

ಜ್ಯೋತಿ ಅಗರವಾಲ್ (35) ಆತ್ಮಹತ್ಯೆ ಮಾಡಿಕೊಂಡವರು. ಅದಕ್ಕೂ ಮೊದಲು, ಜ್ಯೋತಿ ತನ್ನ ಮಗಳು ಸುಹಾನಾಳನ್ನು (7) ಕಟ್ಟಡದಿಂದ ಕೆಳಗೆ ಎಸೆದಿದ್ದಾರೆ. ತನ್ನ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಪತಿ ದಿನಾ ಜಗಳ ಮಾಡುತ್ತಿರುವುದರಿಂದ ಬೇಸತ್ತು ಜ್ಯೋತಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ವಿಷಯವನ್ನು ಆಕೆ ವಿಡಿಯೊ ಕೂಡಾ ಮಾಡಿದ್ದಾರೆ. ಘಟನೆ ಸಂಬಂಧ ಜ್ಯೋತಿ ಅವರ ಪತಿ ಪಂಕಜ್‌ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.

ರಾಜಸ್ಥಾನದವರಾದ ಜ್ಯೋತಿ ಮತ್ತು ಪಂಕಜ್ 12 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಪಂಕಜ್ ಜಯನಗರದ ಅಶೋಕ ಪಿಲ್ಲರ್ ಬಳಿ ಪಂಕಜ್‌ ಹಾರ್ಡ್‍ವೇರ್ ಅಂಗಡಿ ಇಟ್ಟುಕೊಂಡಿದ್ದಾರೆ. ಜ್ಯೋತಿ ನೃತ್ಯ ಶಾಲೆಗೆ ಹೋಗುತ್ತಿದ್ದರು. ಆರ್‌ಬಿಐ ಲೇಔಟ್‍ನಲ್ಲಿರುವ ಎಲ್‍ಐಸಿ ಅಪಾರ್ಟ್‍ಮೆಂಟ್‍ನಲ್ಲಿ ದಂಪತಿ ವಾಸವಾಗಿದ್ದರು.

ಪತಿ– ಪತ್ನಿ ಮಧ್ಯೆ ವಯಸ್ಸಿನ ಅಂತರ ಇತ್ತು ಎಂದು ಹೇಳಲಾಗಿದೆ. ಈ ನಡುವೆ, ಪತ್ನಿ ಜ್ಯೋತಿಯ ನಡತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪಂಕಜ್‌ ನಿತ್ಯ ಜಗಳ ಮಾಡುತ್ತಿದ್ದರು. ನೃತ್ಯ ಶಾಲೆಗೆ ಹೋಗದಂತೆಯೂ ಸೂಚಿಸಿದ್ದ. ಆದರೆ, ಅದಕ್ಕೆ ಒಪ್ಪದ ಜ್ಯೋತಿ, ‘ನಾನು ಯಾರೊಂದಿಗೂ ಅಕ್ರಮ ಸಂಬಂಧ ಹೊಂದಿಲ್ಲ. ನನ್ನ ಹವ್ಯಾಸಗಳಿಗೆ ಅಡ್ಡಿಪಡಿಸಬೇಡಿ’ ಎಂದು ಕೇಳಿಕೊಂಡಿದ್ದರು.

ಭಾನುವಾರ ಕೂಡಾ ದಂಪತಿ ನಡುವೆ ಇದೇ ವಿಷಯದಲ್ಲಿ ಜಗಳ ನಡೆದಿದೆ. ಇದರಿಂದ ಬೇಸತ್ತ ಪತಿ ಪಂಕಜ್, ಮನೆ ಬಿಟ್ಟು ಹೋಗಿ ಜಯನಗರದ ವಸತಿಗೃಹದಲ್ಲಿ ವಾಸವಾಗಿದ್ದರು ಎಂದು ಗೊತ್ತಾಗಿದೆ.

‘ಪತಿ ನನ್ನ ಮೇಲೆ ಅನುಮಾನ ಪಡುತ್ತಿದ್ದರು. ಹಲವು ಬಾರಿ ಬುದ್ಧಿಮಾತು ಹೇಳಿದರೂ ಅವರು ಸುಧಾರಿಸಿಕೊಳ್ಳಲಿಲ್ಲ. ಹೀಗಾಗಿ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ಮೃತಪಟ್ಟ ಬಳಿಕ ನನ್ನ ಮಗಳು ಅನಾಥಳಾಗುತ್ತಾಳೆ ಎಂದು ಭಾವಿಸಿ ನನ್ನೊಂದಿಗೆ ಆಕೆಯನ್ನೂ ಕರೆದೊಯ್ಯುತ್ತಿದ್ದೇನೆ’ ಎಂದು ಪಂಕಜ್ ವಿರುದ್ಧ ಜ್ಯೋತಿ ಆರೋಪ ಮಾಡಿದ್ದಾರೆ. ಪಂಕಜ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.

Post Comments (+)