ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಕಳ್ಳನ ಸಾವಿನ ಪ್ರಕರಣಕ್ಕೆ ತಿರುವು

ಮೃತಪಟ್ಟಿದ್ದು ಅಪಘಾತದಿಂದ
Last Updated 21 ಜೂನ್ 2018, 18:47 IST
ಅಕ್ಷರ ಗಾತ್ರ

ಬೆಂಗಳೂರು: ಎಂ.ಜಿ.ರಸ್ತೆಯ ಮಿತ್ತಲ್‌ಟವರ್ ಬಳಿ ಜೂನ್ 18ರ ನಸುಕಿನಲ್ಲಿ ನಡೆದಿದ್ದ ಮೊಬೈಲ್ ಕಳ್ಳನ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಆತ ರಸ್ತೆ ಅಪಘಾತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ.

ಬನ್ನೇರುಘಟ್ಟ ರಸ್ತೆ ಗುರಪ್ಪನಪಾಳ್ಯದ ಸೈಯದ್ ಇಮ್ರಾನ್ ಮೃತಪಟ್ಟವನು. ‘ಮಗನನ್ನು ಆತನ ಸ್ನೇಹಿತರಾದ ನಜಾಜ್ ಪಾಷಾ, ಬೇಗ್ ಹಾಗೂ ಫೈರೋಜ್ ಅವರೇ ಹತ್ಯೆಗೈದಿದ್ದಾರೆ’ ಎಂದು ಆರೋಪಿಸಿ ಮೃತನ ತಂದೆ ಸೈಯದ್ ಕಲಾಂ ಹಲಸೂರು ಠಾಣೆಗೆ ದೂರು ಕೊಟ್ಟಿದ್ದರು.

ಪೊಲೀಸರು ಕೊಲೆ (ಐಪಿಸಿ 302) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸಾವಿನ ರಹಸ್ಯ ಗೊತ್ತಾಗಿದೆ.

ಮೊಬೈಲ್ ಕಳ್ಳರು: ಸೈಯದ್ ಹಾಗೂ ನಯಾಜ್ ಮೊಬೈಲ್ ಕಳ್ಳರು. ಜೂನ್ 18ರ ನಸುಕಿನಲ್ಲಿ (2 ಗಂಟೆ ಸುಮಾರಿಗೆ) ಇಬ್ಬರೂ ಬೈಕ್‌ನಲ್ಲಿ ಮಡಿವಾಳಕ್ಕೆ ಹೋಗಿದ್ದರು. ಸೇಂಟ್ ಜಾನ್ಸ್‌ ಆಸ್ಪತ್ರೆ ಬಳಿ ನಿಂತಿದ್ದ ವಿಜಯ್‌ಕುಮಾರ್ ಎಂಬುವರ ಹತ್ತಿರ ಹೋಗಿ, ‘ತುರ್ತಾಗಿ ಕರೆ ಮಾಡಬೇಕು. ಮೊಬೈಲ್ ಕೊಡಿ’ ಎಂದು ಮನವಿ ಮಾಡಿದ್ದರು. ಅದನ್ನು ನಂಬಿ ಅವರು ಮೊಬೈಲ್ ಕೊಡುತ್ತಿದ್ದಂತೆಯೇ ಆರೋಪಿಗಳು ಮಿಂಚಿನ ವೇಗದಲ್ಲಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅಲ್ಲಿಂದ ಎಂ.ಜಿ.ರಸ್ತೆಗೆ ಬಂದ ಇಬ್ಬರೂ, ಟೆಂಪೊ ಟ್ರಾವೆಲರ್ (ಟಿ.ಟಿ) ಚಾಲಕ ದಾರಿ ಬಿಡಲಿಲ್ಲವೆಂದು ಆತನೊಂದಿಗೆ ಗಲಾಟೆ ಮಾಡಿದ್ದಾರೆ. ಈ ಹಂತದಲ್ಲಿ ನಯಾಜ್ ಮೂತ್ರ ವಿಸರ್ಜನೆಗೆ ತೆರಳಿದರೆ, ಸೈಯದ್ ಟಿ.ಟಿಯ ಬಾಗಿಲು ಹಿಡಿದು ನೇತಾಡುತ್ತ ಚಾಲಕನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ.

ಇದರಿಂದ ಗಾಬರಿಗೊಂಡ ಚಾಲಕ, ಅಲ್ಲಿಂದ ತಪ್ಪಿಸಿಕೊಳ್ಳಲು ಬೈಕ್‌ಗೆ ಟಿ.ಟಿ ಗುದ್ದಿಸಿಕೊಂಡೇ ಮುಂದೆ ಸಾಗಿದ್ದಾನೆ. ಸುಮಾರು 300 ಮೀಟರ್ ದೂರ ಬಂದಾಗ, ಸೈಯದ್ ನಿಯಂತ್ರಣ ತಪ್ಪಿಕೆಳಗೆ ಬಿದ್ದಿದ್ದಾನೆ. ಇದೇ ವೇಳೆ ಹಿಂದಿನಿಂದ ಬಂದ ಕಾರೊಂದು, ಆತನ ಮೈಮೇಲೆ ಹರಿದು ಹೋಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಒಂದೆರಡು ನಿಮಿಷದಲ್ಲಿ ಬೈಕ್‌ನ ಬಳಿ ಬಂದ ನಯಾಜ್, ಸ್ನೇಹಿತನನ್ನು ಹುಡುಕಿಕೊಂಡು ಅದೇ ರಸ್ತೆಯಲ್ಲಿ ಮುಂದೆ ಬಂದಿದ್ದಾನೆ. ಆಗ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಸೈಯದ್ ಕಣ್ಣಿಗೆ ಬಿದ್ದಿದ್ದಾನೆ. ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದನಾದರೂ, ಚಿಕಿತ್ಸೆಗೆ ಸ್ಪಂದಿಸದೆ ಸ್ವಲ್ಪ ಸಮಯದಲ್ಲೇ ಅತ ಕೊನೆಯುಸಿರೆಳೆದಿದ್ದಾನೆ.

ನಂಬದ ತಂದೆ: 3.30ರ ಸುಮಾರಿಗೆ ನಯಾಜ್, ಸ್ನೇಹಿತನ ತಂದೆಗೆ ಕರೆ ಮಾಡಿ ಅ‍ಪಘಾತದ ವಿಷಯ ತಿಳಿಸಿದ್ದ. ಕೂಡಲೇ ಅವರು ಆಸ್ಪತ್ರೆಗೆ ಬಂದಿದ್ದರು. ನಂತರ ಹಲಸೂರು ಠಾಣೆಗೆ ತೆರಳಿ, ‘ಮಗ ಅಪಘಾತದಿಂದ ಮೃತಪಟ್ಟಿಲ್ಲ. ಯಾವುದೋ ದ್ವೇಷದಿಂದ ಆತನ ಸ್ನೇಹಿತರೇ ಹೊಡೆದು ಸಾಯಿಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿ’ ಎಂದು ದೂರು ಕೊಟ್ಟಿದ್ದರು.

‘ನಯಾಜ್‌ನನ್ನು ವಿಚಾರಣೆ ನಡೆಸಿದಾಗ ಆತ ಅಪಘಾತದ ಆಯಾಮಯವನ್ನೇ ಹೇಳಿದ. ನಂತರ ಘಟನಾ ಸ್ಥಳದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದೆವು. ಟಿ.ಟಿ ಚಾಲಕನೊಂದಿಗೆ ಇವರು ಗಲಾಟೆ ಮಾಡಿದ ಹಾಗೂ ಯಾವುದೋ ಕಾರು ಸೈಯದ್ ಮೇಲೆ ಹರಿದು ಹೋದ ದೃಶ್ಯಗಳು ಅದರಲ್ಲಿ ಸೆರೆಯಾಗಿದ್ದವು’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT