ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಸರಘಟ್ಟ ಹಿನ್ನೀರಿನಲ್ಲಿ ಮೀನುಗಳ ಸಾವು

Published 20 ಮೇ 2024, 20:35 IST
Last Updated 20 ಮೇ 2024, 20:35 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಘಟ್ಟ ಕೆರೆಯ ಪಶ್ಚಿಮಭಾಗದ ಹಿನ್ನೀರಿನಲ್ಲಿ ಸಾವಿರಾರು ಮೀನುಗಳು ಸತ್ತಿದ್ದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ಪರೀಕ್ಷೆಗಾಗಿ ಮಾದರಿಗಳನ್ನು ಸೋಮವಾರ ಸಂಗ್ರಹಿಸಿದರು.

ಸಣ್ಣ ಮೀನುಗಳು ನೂರಾರು ಸಂಖ್ಯೆಯಲ್ಲಿ ಸತ್ತಿವೆ. ಕಳೆದ ಎರಡು ದಿನಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ ಮಳೆನೀರಿನ ಜೊತೆಗೆ ಒಳಚರಂಡಿ ನೀರೂ ಕೆರೆಗೆ ಹರಿಯುತ್ತಿದೆ. ಪಶುಸಂಗೋಪನೆ ಇಲಾಖೆಯ ಕಚೇರಿಯ ಹಿಂದಿರುವ ಬಿದಿರು ಅರಣ್ಯದಲ್ಲಿ ಮೀನುಗಳು ಅಧಿಕ ಸಂಖ್ಯೆಯಲ್ಲಿ ಸತ್ತಿವೆ.

‘ಗ್ರೀನ್‌ ಸರ್ಕಲ್‌‘ನ ಬಿರ್ದರ್‌ ವಿ. ಸೆಲ್ವರಾಜನ್‌ ಅವರು ಭಾನುವಾರ ಮೀನು ಸತ್ತಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾಹಿತಿ ನೀಡಿದ್ದರು. 

‘ಮೀನುಗಳು ಸತ್ತಿರುವುದು ಮಾಲಿನ್ಯದಿಂದ ಎಂಬುದು ಸಾಬೀತಾದರೆ, ಹೆಸರಘಟ್ಟ ಕೆರೆಯಲ್ಲಿರುವ ನೀರಿನ ಬಗ್ಗೆ ಆತಂಕ ಎದುರಾಗುತ್ತದೆ. ಹಲವು ಪ್ರಭೇದಗಳ ಪಕ್ಷಿಗಳಿಗೆ ತಾಣ ಇದಾಗಿದ್ದು, ಮಾಲಿನ್ಯದ ಸಮಸ್ಯೆ ಇದ್ದರೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ’ ಎಂದು ಸೆಲ್ವರಾಜನ್‌ ಹೇಳಿದರು.

‘ಹೆಸರಘಟ್ಟ ಕೆರೆಯ ಸುತ್ತ ಸಾಕಷ್ಟು ಸಂಸ್ಥೆಗಳಿವೆ. ಪಶು ಸಂಗೋಪನಾ ಇಲಾಖೆಯ ಸೆಮನ್‌ ಕಲೆಕ್ಷನ್‌ ಸೆಂಟರ್‌, ಕುಕ್ಕುಟ, ಹಂದಿ ಫಾರ್ಮ್‌ಗಳಿವೆ. ಮೀನುಗಳು ಕೆರೆಯ ನೀರಿಗೆ ಸೇರುವ ಮುನ್ನವೇ ಸತ್ತಿದ್ದವೇ ಅಥವಾ ಇಲ್ಲವೇ ಎಂಬುದು ಪರೀಕ್ಷೆಯ ನಂತರವಷ್ಟೆ ತಿಳಿಯುತ್ತದೆ. ಎಲ್ಲ ರೀತಿಯ ಮಾದರಿಗಳನ್ನು  ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮತ್ಕೂರು ರಸ್ತೆ ಸಮೀಪದ ಹಳ್ಳದಿಂದ ಮಳೆನೀರು ಹೆಸರಘಟ್ಟ ಕೆರೆಗೆ ಹರಿಯಲಿದ್ದು, ಅಲ್ಲಿಯ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿದೆ’ ಎಂದು ದಾಸರಹಳ್ಳಿ ಪರಿಸರ ಅಧಿಕಾರಿ ಸುರೇಶ್‌ ತಿಳಿಸಿದರು. 

ಹೆಸರಘಟ್ಟದ ಕೆರೆಯಲ್ಲಿ ಮೀನುಗಳು ಸತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರವಾದ ವರದಿ ನೀಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಎಚ್‌.ಸಿ. ಬಾಲಚಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹೆಸರಘಟ್ಟ ಕೆರೆಯ ಹಿನ್ನೀರಿನಲ್ಲಿ ಸತ್ತಿದ್ದ ಮೀನುಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ಸೋಮವಾರ ಪರಿಶೀಲಿಸಿದರು
ಚಿತ್ರ: ಬಿ.ಎಚ್‌. ಶಿವಕುಮಾರ್‌
ಹೆಸರಘಟ್ಟ ಕೆರೆಯ ಹಿನ್ನೀರಿನಲ್ಲಿ ಸತ್ತಿದ್ದ ಮೀನುಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ಸೋಮವಾರ ಪರಿಶೀಲಿಸಿದರು ಚಿತ್ರ: ಬಿ.ಎಚ್‌. ಶಿವಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT