ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಪಾ ನಿಧಿಗಾಗಿ ಕೇಂದ್ರಕ್ಕೆ ನಿಯೋಗ: ವಿವಿಧ ರಾಜ್ಯಗಳ ಅರಣ್ಯ ಸಚಿವರ ಸಭೆ ನಿರ್ಣಯ

Published 13 ಆಗಸ್ಟ್ 2024, 0:05 IST
Last Updated 13 ಆಗಸ್ಟ್ 2024, 0:05 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ನೀಡಬೇಕಿರುವ ₹ 1000 ಕೋಟಿ ಕಾಂಪಾ (ಅರಣ್ಯೀಕರಣ ಪರಿಹಾರ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ) ನಿಧಿಯನ್ನು ಬಿಡುಗಡೆ ಮಾಡಲು, ಮಾನವ ಮತ್ತು ವನ್ಯಜೀವಿ ಸಂಘರ್ಷ ನಿರ್ವಹಣೆಗೆ ನೆರವು ನೀಡಲು ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ನಿಯೋಗ ಹೋಗಲು ವಿವಿಧ ರಾಜ್ಯಗಳು ನಿರ್ಧಾರ ಕೈಗೊಂಡವು.

ಸೋಮವಾರ ಆಯೋಜಿಸಿದ್ದಮಾನವ ಮತ್ತು ಆನೆ ಸಂಘರ್ಷ ನಿರ್ವಹಣೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ನೇತೃತ್ವದಲ್ಲಿ ನಡೆದ ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಜಾರ್ಖಂಡ್‌ ರಾಜ್ಯಗಳ ಅರಣ್ಯ ಸಚಿವರ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಯಿತು.

ಆನೆಗಳು ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಉತ್ತಮ ಸಾಧನವಾಗಿದ್ದು, ಇದರ ನಿರ್ಮಾಣಕ್ಕೆ ಹೆಚ್ಚಿನ ಹಣಕಾಸಿನ ಅಗತ್ಯವಿದೆ. ಆದರೆ, ನಮಗೆ ಬರಬೇಕಿರುವ ಕಾಂಪಾ ಹಣವನ್ನೇ ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದು ಈಶ್ವರ ಖಂಡ್ರೆ ಬೇಸರ ವ್ಯಕ್ತಪಡಿಸಿದರು.

ಆನೆಗಳ ಸಂಖ್ಯೆ ಹೆಚ್ಚುತ್ತಿದೆ. ಆಫ್ರಿಕಾದಲ್ಲಿರುವ ಆನೆ ಗರ್ಭನಿರೋಧಕಗಳನ್ನು ನೀಡಬಹುದು. ಗುಂಪಿನಲ್ಲಿರುವ ಯಾವ ಆನೆಗೆ ಚುಚ್ಚುಮದ್ದು ಮೂಲಕ ಈ ನಿರೋಧಕಗಳನ್ನು ನೀಡಲಾಯಿತು ಎಂದು ಪತ್ತೆ ಹಚ್ಚುವುದು ಕಷ್ಟವಾದರೂ ವೈಜ್ಞಾನಿಕ ತಂಡವು ಕಾರ್ಯನಿರ್ವಹಿಸಬಹುದು. ಆದರೆ, ಈ ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯ ಎಂದು ವಿವಿಧ ರಾಜ್ಯಗಳ ಸಚಿವರು ತಿಳಿಸಿದರು.

ಕಾಂಪಾ ನಿಧಿ ಬಿಡುಗಡೆ ಸೇರಿದಂತೆ ರಾಜ್ಯಗಳ ವಿವಿಧ ಬೇಡಿಕೆಗಳನ್ನು ಕರ್ನಾಟಕ ತಯಾರು ಮಾಡಬೇಕು. ಕೇರಳದ ಸಚಿವರ ನೇತೃತ್ವದಲ್ಲಿ ನಿಯೋಗ ತೆರಳುವುದು ಎಂದು ನಿರ್ಣಯಿಸಲಾಯಿತು.

ಕೇರಳದ ಅರಣ್ಯ ಸಚಿವ ಎ.ಕೆ. ಸಸೀಂದ್ರನ್, ತೆಲಂಗಾಣ ಅರಣ್ಯ ಸಚಿವೆ ಕೊಂಡ ಸುರೇಖಾ, ಜಾರ್ಖಂಡ್ ಅರಣ್ಯ ಸಚಿವ ಬೈದ್ಯನಾಥ್ ರಾಮ್, ತಮಿಳುನಾಡಿನ ಅರಣ್ಯ ಸಚಿವ ಮೆತಿವೆಂಥನ್, ವಿವಿಧ ರಾಜ್ಯಗಳ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ನಡೆದ ಚರ್ಚೆಗಳು

ಜೇನುಹುಳು ಶಬ್ದಕ್ಕೆ ಆನೆಗಳು ಹೆದರುತ್ತವೆಯಾದರೂ ಕೃತಕವಾಗಿ ಆ ಶಬ್ದಗಳನ್ನು ಸೃಷ್ಟಿಸಿದರೆ ಆನೆಗಳಿಗೆ ಕೆಲವೇ ದಿನಗಳಲ್ಲಿ ಜೇನುಹುಳ ಅಲ್ಲ ಎಂಬುದು ಗೊತ್ತಾಗುತ್ತದೆ. ನಾಡಿಗೆ ಬರುವ ಕರಡಿಗಳ ಸಂಖ್ಯೆ ಹೆಚ್ಚಾಗುವ ಅಪಾಯವೂ ಇದೆ.

ಎಲ್ಲ ರಾಜ್ಯಗಳಲ್ಲಿ ಲಂಟಾನ ಕಳೆಗಿಡದ ಹಾವಳಿ ಹೆಚ್ಚಾಗಿದೆ. ಶೇ 50ರಷ್ಟು ಪ್ರದೇಶವನ್ನು ಲಂಟನಾ ಆವರಿಸುತ್ತಿದೆ. ಇದರ ಜೊತೆಗೆ ಕೇರಳದ ಕಾಡುಗಳಲ್ಲಿ ಸನ್ನಾ, ತಮಿಳುನಾಡು ಅರಣ್ಯಗಳಲ್ಲಿ ಬಳ್ಳಾರಿ ಜಾಲಿ ಸಮಸ್ಯೆ ಉಂಟು ಮಾಡಿದೆ. ಸಮಸ್ಯೆ ನಿವಾರಿಸದೇ ಇದ್ದರೆ ಪ್ರಾಣಿಗಳಿಗೆ ತಿನ್ನಲು ಹುಲ್ಲು ಸಿಗುವುದಿಲ್ಲ. ನಡೆದಾಡುವುದೂ ಕಷ್ಟ. ಲಂಟಾನ ಸಹಿತ ಕಳೆಗಳನ್ನು ನಿರ್ನಾಮ ಮಾಡಬೇಕು. ಲಂಟಾನಗಳಿಂದ ಆಲಂಕಾರಿಕ ವಸ್ತುಗಳನ್ನು ತಯಾರಿಸಲು ಪ್ರೋತ್ಸಾಹ ನೀಡಬೇಕು. ಅದಕ್ಕೆ ಮಾರುಕಟ್ಟೆ ಒದಗಿಸಬೇಕು.

ವನ್ಯಜೀವಿಗಳಿಂದ ಜೀವಹಾನಿಯಾದವರ ಕುಟುಂಬಗಳಿಗೆ ಎಲ್ಲ ರಾಜ್ಯಗಳಲ್ಲಿ ಒಂದೇ ರೀತಿಯ ಪರಿಹಾರ ನೀಡಬೇಕು.  ಆನೆಗಳನ್ನು ಓಡಿಸಲು ಏನೋ ಮಾಡಲು ಹೋಗಿ ಅವುಗಳಿಗೆ ಸಿಟ್ಟು ಬರಿಸುವುದರಿಂದಲೇ ಅನಾಹುತಗಳಾಗುತ್ತಿವೆ. ಆನೆಗಳು ಬಂದಾಗ ಏನು ಮಾಡಬಾರದು ಎಂಬುದನ್ನು ಮೊದಲು ಕಾಡಂಚಿನ ಗ್ರಾಮಗಳ ನಿವಾಸಿಗಳಿಗೆ ತಿಳಿಸಬೇಕು. 

ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಸಮಿತಿ, ವಿವಿಧ ಇಲಾಖೆಗಳನ್ನು ಒಳಗೊಂಡ ವಾಟ್ಸ್‌ಆ್ಯಪ್‌ ಗುಂಪುಗಳನ್ನು ರಚಿಸಬೇಕು. ವನ್ಯಜೀವಿಗಳು ಗ್ರಾಮಗಳತ್ತ ಬಂದಾಗ ಎಚ್ಚರಿಸಲು, ಜನರು ಆಗ ಮಾಡಬೇಕಾದ ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಲು ವಾಟ್ಸ್‌ಆ್ಯಪ್‌ ಬಳಸಿಕೊಳ್ಳಬೇಕು ಎಂದು ಚರ್ಚಿಸಲಾಯಿತು.

ಜೀವ ಹಾನಿ ಶೂನ್ಯಕ್ಕೆ ತರಬೇಕು: ಸಿದ್ದರಾಮಯ್ಯ

ಜನರು ಆನೆಗಳೊಂದಿಗೆ ಸಹಬಾಳ್ವೆ ನಡೆಸುತ್ತಾ ಬಂದಿದ್ದಾರೆ. ಆದರೆ, ಇತ್ತೀಚೆಗೆ ಪರಸ್ಪರ ವಾಸಿಸುತ್ತಿದ್ದ ಗಡಿಗಳು ಬದಲಾಗುತ್ತಿರುವುದು, ಅಭಿವೃದ್ಧಿ ಚಟುವಟಿಕೆ ಹೆಚ್ಚಿರುವುದು, ಹವಾಮಾನ ಬದಲಾವಣೆಗಳು ಆನೆಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತಿದೆ. ಇದರಿಂದ ಸಂಘರ್ಷ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಾನವ ಆನೆ ಸಂಘರ್ಷದ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

10 ವರ್ಷಗಳಲ್ಲಿ, ಮಾನವ-ಆನೆ ಸಂಘರ್ಷದ 2,500ಕ್ಕೂ ಹೆಚ್ಚು ಘಟನೆಗಳು ವರದಿಯಾಗಿವೆ. 350ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿನ ಪ್ರಮಾಣವನ್ನು ಶೂನ್ಯಕ್ಕೆ ತರಲು ‘ಸಾಮರಸ್ಯ’ ಯೋಜನೆ ರೂಪಿಸಲಾಗುತ್ತಿದೆ ಎಂದರು.

ವಿಷಯ ಪರಿಣಿತರು ಮಾನವ – ಆನೆ ಸಂಘರ್ಷವನ್ನು ತಪ್ಪಿಸಲು ಕಾರ್ಯತಂತ್ರವನ್ನು ರೂಪಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಕಾಡಂಚಿನ ರೈತರಿಗೆ ಕಿರುಕುಳ ನೀಡುವ ಕೆಲಸಗಳನ್ನು ಮಾಡಬಾರದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಲಹೆ ನೀಡಿದರು.

ರೈತರೊಂದಿಗೆ ಸಂವಾದ

ಅರಣ್ಯದಂಚಿನ ಗ್ರಾಮಗಳಲ್ಲಿ ರೈತರು ಮಾಡುವ ಬೆಳೆಗಳ ಮೇಲೆ ಆನೆಗಳು ದಾಳಿ ಮಾಡುತ್ತವೆ. ಅದನ್ನು ತಪ್ಪಿಸಲು ಅರಣ್ಯದೊಳಗೆ ಕಬ್ಬು, ಹಲಸು, ಬಿದಿರು ಮುಂತಾದವುಗಳನ್ನು ಬೆಳೆಸಿ ಆನೆಗಳಿಗೆ ಆಹಾರ ಸಿಗುವಂತೆ ಮಾಡಬೇಕು ಎಂದು ರೈತರ ಸಭೆಯಲ್ಲಿ ಕೃಷಿಕರು ಸಲಹೆ ನೀಡಿದರು.

ಆನೆಗಳಿಗೆ ಸ್ವಾದಿಷ್ಟ ಆಹಾರವನ್ನು ಕಾಡಿನಲ್ಲಿ ಬೆಳೆಸಿ ನೀಡುವುದು ಸೂಕ್ತವಲ್ಲ ಎಂಬ ತಜ್ಞರ ಅಭಿಪ್ರಾಯವಿದೆ. ಈ ಬಗ್ಗೆ ಪರಾಮರ್ಶಿಸಲಾಗುವುದು ಎಂದು ಸಚಿವ ಈಶ್ವರ ಬಿ. ಖಂಡ್ರೆ ಪ್ರತಿಕ್ರಿಯಿಸಿದರು.

ರೈತರ ಬೇಡಿಕೆಯಂತೆ ಅರಣ್ಯದಂಚಿನ ಗ್ರಾಮಗಳ ಜನರಿಗೆ ವಿಮಾ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಲಾಗುವುದು. ಅಕ್ರಮವಾಗಿ ಬೇಲಿಗೆ ವಿದ್ಯುತ್ ಹರಿಸಬಾರದು ಎಂದು ಸಚಿವರು ತಿಳಿಸಿದರು.

ಅಂಕಿ ಅಂಶ
ರಾಜ್ಯದಲ್ಲಿ 6,395 ಆನೆ, 563 ಹುಲಿಗಳಿವೆ ಆನೆ–ಮಾನ ಸಂಘರ್ಷ ತಪ್ಪಿಸಲು ₹150 ಕೋಟಿ ವೆಚ್ಚ ಮಾಡಲಾಗುತ್ತಿದೆ 300 ಕಿ.ಮೀ. ರೈಲ್ವೆ ಬ್ಯಾರಿಕೇಡ್‌ ಅಳವಡಿಸಲಾಗುತ್ತಿದೆ 800 ಕಿ.ಮೀ. ಸೌರ ಬೇಲಿ, ಸೌರ ಟೆಂಟಕಲ್ ಬೇಲಿ, ಕಂದಕ ನಿರ್ಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT