ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಪಟಾಕಿ ಸದ್ದು; ಮಿತಿ ಮೀರಿದ ಮಾಲಿನ್ಯ

ಬೆಳಿಗ್ಗೆ ಆರಕ್ಕೇ ಹೆಚ್ಚಿದ ಅಬ್ಬರ * ಪಾಲನೆಯಾಗದ ನಿರ್ಬಂಧದ ನಿಯಮ * ನಗರವಾಸಿಗಳ ನಿದ್ದೆಗೂ ಕುತ್ತು
Last Updated 8 ನವೆಂಬರ್ 2018, 20:29 IST
ಅಕ್ಷರ ಗಾತ್ರ

ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನದ ನಡುವೆಯೂ ಬುಧವಾರ ರಾತ್ರಿ 12 ಗಂಟೆಯಿಂದ ಬೆಳಿಗ್ಗೆ ಆರು ಗಂಟೆವರೆಗೂ ಪಟಾಕಿ ಸದ್ದು ಮಾಡಿದ್ದು, ನಗರವಾಸಿಗಳ ನಿದ್ದೆಗೆಡಿಸಿದೆ.

ಬುಧವಾರ ರಾತ್ರಿ 8ಕ್ಕೆ ಆರಂಭವಾದ ಪಟಾಕಿಯ ಸದ್ದು ಕೆಲವು ಪ್ರದೇಶಗಳಲ್ಲಿ ಬೆಳಗಿನವರೆಗೂ ನಿಂತಿಲ್ಲ. ಜಯನಗರ ವ್ಯಾಪ್ತಿಯಲ್ಲಿ ಬೆಳಿಗ್ಗೆ ಆರು ಗಂಟೆ ಸಮಯದಲ್ಲಿ ಹೆಚ್ಚು ಮಾಲಿನ್ಯ ದಾಖಲಾಗಿದೆ. ಪಿಎಂ 2.5 (ಗಾಳಿಯಲ್ಲಿ ತೇಲಾಡುವ ದೂಳಿನ ಕಣ) 330 ಮೈಕ್ರೊ ಗ್ರಾಂನಷ್ಟು ದಾಖಲಾಗಿದೆ. ಗುರುವಾರ ಮಧ್ಯಾಹ್ನದಿಂದ ರಾತ್ರಿಯವರೆಗೂ ಹೆಚ್ಚಿನ ಭಾಗಗಳಲ್ಲಿ ಪಟಾಕಿ ಹೊಡೆಯಲಾಗಿದೆ.

ಶಬ್ದ ಹಾಗೂ ವಾಯು ಮಾಲಿನ್ಯದ ಜತೆಗೆ ಭಾರಿ ಪ್ರಮಾಣದ ಪಟಾಕಿ ತ್ಯಾಜ್ಯವೂ ನಗರದ ರಸ್ತೆಗಳಲ್ಲಿ ಬಿದ್ದಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಕುರಿತು ಹಲವು ಪ್ರದೇಶಗಳಲ್ಲಿ ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ.

ಮಲ್ಲೇಶ್ವರದ ಕೆಲವು ಭಾಗಗಳಲ್ಲಿ ನಿರ್ಬಂಧಿತ ಸಮಯದಲ್ಲಿ ಪಟಾಕಿ ಹೊಡೆಯುವವರಿಗೂ ಅದನ್ನು ವಿರೋಧಿಸುವವರಿಗೂ ವಾಗ್ವಾದ ನಡೆದ ಘಟನೆಗಳು ಸಂಭವಿಸಿವೆ.

ಕವಿಕಾ ಕೇಂದ್ರದಲ್ಲಿ ದಾಖಲಾದ ಮಾಹಿತಿ ಪ್ರಕಾರ, ಇಲ್ಲಿಯ ಪ್ರದೇಶದ ಜನರು ಬುಧವಾರ ರಾತ್ರಿ 8ರಿಂದ 12ರವರೆಗೂ ಪಟಾಕಿ ಹೊಡೆದಿದ್ದಾರೆ. ಅತ್ಯಂತ ಹೆಚ್ಚಿನ ಮಾಲಿನ್ಯ (410 ಮೈಕ್ರೊ ಗ್ರಾಂ) ದಾಖಲಾಗಿದೆ. ಪಿಎಂ 10 ಕೂಡ 301 ಮೈಕ್ರೊ ಗ್ರಾಂನಷ್ಟಿದೆ.

ನಿಮ್ಹಾನ್ಸ್‌ ಕೇಂದ್ರದ ಭಾಗಗಳಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆಗೆ ಹೆಚ್ಚು ಮಂದಿ ಪಟಾಕಿ ಹೊಡೆದಿದ್ದಾರೆ. ಈ ವೇಳೆ 308 ಮೈಕ್ರೊ ಗ್ರಾಂನಷ್ಟು ಮಾಲಿನ್ಯ ಹೆಚ್ಚಿದೆ.

ರಾತ್ರಿ 8ರಿಂದ 10ಗಂಟೆವರೆಗೆ ಮಾತ್ರ ಪಟಾಕಿ ಹೊಡೆಯಬೇಕು ಎಂಬ ನಿಯಮವನ್ನು ಬಹುತೇಕ ನಾಗರಿಕರು ಪಾಲಿಸಿಲ್ಲ.

‘ನಮ್ಮ ಮಕ್ಕಳಿಗೆ ಪಟಾಕಿ ಹೊಡೆಯದಂತೆ ನಾವು ಎಚ್ಚರಿಕೆ ನೀಡಿದ್ದೇವೆ. ಆದರೆ ಇಲ್ಲಿನ ನಿವಾಸಿಗಳಿಗೆ ನಿಯಮ ಪಾಲಿಸುವಲ್ಲಿ ಆಸಕ್ತಿ ಇಲ್ಲ. ಮಕ್ಕಳಿಗೂ ಪೋಷಕರು ಬುದ್ಧಿ ಹೇಳುತ್ತಿಲ್ಲ. ರಾತ್ರಿ 12 ಗಂಟೆಗೂ ಪಟಾಕಿ ಹೊಡೆಯುತ್ತಿದ್ದರು. ಮನೆಯಲ್ಲಿ ವಯಸ್ಸಾದವರು ಇದ್ದಾರೆ. ಮಲಗಲು ಸಾಧ್ಯವಾಗದೆ ರಾತ್ರಿಯಿಡೀ ಎಲ್ಲರೂ ಒದ್ದಾಡುವಂತೆ ಆಯಿತು’ ಎಂದು ಜಯನಗರ ನಾಲ್ಕನೇ ಬ್ಲಾಕ್‌ನ ನಿವಾಸಿ ಮಂಜುನಾಥ್ ಹೇಳಿದರು.

‘ಹೋದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿ ಸದ್ದು ಸ್ವಲ್ಪ ಕಡಿಮೆಯಾಗಿದೆ. ಆದರೆ ಮಕ್ಕಳು ಯಾರ ಮಾತನ್ನೂ ಕೇಳುತ್ತಿಲ್ಲ. ದಿನವಿಡೀ ಪಟಾಕಿ ಸದ್ದು ಮಾಡುತ್ತಲೇ ಇರುತ್ತದೆ. ದಾರಿಯಲ್ಲಿ ಓಡಾಡುವುದಕ್ಕೇ ಭಯ ಆಗುತ್ತದೆ. ನಾವು ಹೇಳಿದರೆ ಕೇಳುವುದಿಲ್ಲ. ಪೊಲೀಸರೇ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಶ್ರೀನಗರದ ಅಕ್ಷತಾ ಹೇಳಿದರು.

ಶಬ್ದ ಮಾಲಿನ್ಯ ಕೂಡ ಹೆಚ್ಚು: ಗುರುವಾರ ರಾತ್ರಿ 9 ಗಂಟೆ ನಂತರ ಶಬ್ದ ಮಾಲಿನ್ಯ ಹೆಚ್ಚಿತ್ತು. ಮಡಿವಾಳದಲ್ಲಿ 64.5 ಡಿಸಿಬಲ್‌ನಷ್ಟು ಶಬ್ದದ ತೀವ್ರತೆ ಕಂಡುಬಂತು.

ನಿಮ್ಹಾನ್ಸ್‌ (68.1), ವೈಟ್‌ಫೀಲ್ಡ್‌ (65.8), ನಿಸರ್ಗ ಭವನ (40.0), ಚರ್ಚ್‌ ಸ್ಟ್ರೀಟ್‌ (65.8), ಪೀಣ್ಯ (62.6) ಪ್ರದೇಶಗಳಲ್ಲಿ ಮಾಲಿನ್ಯ ಹೆಚ್ಚಿತ್ತು.

ನಿಯಮ ಉಲ್ಲಂಘನೆ; ದೂರು ದಾಖಲು
ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನದನ್ವಯ ರೂಪಿಸಲಾಗಿದ್ದ ನಿಯಮಗಳನ್ನು ಉಲ್ಲಂಘಿಸಿ ಹಲವರು ಪಟಾಕಿ ಹೊಡೆದಿದ್ದಾರೆ. ಆ ಸಂಬಂಧ ಸಾರ್ವಜನಿಕರು, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡಿದ್ದಾರೆ. ದೂರುಗಳು ಬಂದ ಸ್ಥಳದಲ್ಲಿ ಸಂಚರಿಸಿದ್ದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಗೊತ್ತಾಗಿದೆ.

ಆ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್‌ಕುಮಾರ್ ಸಿಂಗ್, ‘ಹಬ್ಬದ ದಿನದಂದು ರಾತ್ರಿ 8 ಗಂಟೆಯಿಂದ 10 ಗಂಟೆಯೊಳಗೆ ಮಾತ್ರ ಪಟಾಕಿ ಹೊಡೆಯುವಂತೆ ನಿಯಮವಿತ್ತು. ಅದನ್ನು ಹಲವರು ಉಲ್ಲಂಘಿಸಿದ ಬಗ್ಗೆ ಸಾರ್ವಜನಿಕರು ಕರೆ ಮಾಡಿ ತಿಳಿಸಿದ್ದಾರೆ. ಅಲ್ಲೆಲ್ಲ ತಪಾಸಣೆ ಮಾಡಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಠಾಣೆಯ ಅಧಿ
ಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ನಿಯಮ ಉಲ್ಲಂಘನೆ ಸಂಬಂಧ ಯಾವ ಠಾಣೆಯಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬುದು ಶುಕ್ರವಾರ ಗೊತ್ತಾಗಲಿದೆ’ ಎಂದು ಹೇಳಿದರು.

ಪಟಾಕಿ ಸಿಡಿದು ಮನೆಗೆ ಹಾನಿ: ಇಬ್ಬರಿಗೆ ಗಂಭೀರ ಗಾಯ
ಬೆಂಗಳೂರು: ಸಾರ್ವಜನಿಕರೊಬ್ಬರು ಹಚ್ಚಿದ್ದ ಪಟಾಕಿ ಇಲ್ಲಿಯ ಮನೆಯ ಮೇಲೆ ಭಾರಿ ಪ್ರಮಾಣದ ಸದ್ದಿನೊಂದಿಗೆ ಸಿಡಿದ ಕಾರಣ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬುಧವಾರ ರಾತ್ರಿ ಘಟನೆ ನಡೆದಿದೆ. ವೆಂಕಟೇಶ್‌ ಎನ್ನುವವರ ಮನೆಯ ಮೇಲೆ ಹಾಕಿದ್ದ ಶೀಟ್‌ ಕೂಡ ಹಾಳಾಗಿದೆ. ಮನೆಯೊಳಗಿದ್ದ ಕೆಲವು ವಸ್ತುಗಳು ಸುಟ್ಟು ಹೋಗಿವೆ.

ವೆಂಕಟೇಶ್‌ ಅವರ ತಾಯಿ ಹಾಗೂ ಪುತ್ರ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಕರೆಂಟ್ ಇಲ್ಲದ ಕಾರಣ ನಾನು ಮನೆಯ ಹೊರಗೆ ಕೂತಿದ್ದೆ. ಈ ಸಮಯದಲ್ಲಿ ಜೋರಾದ ಶಬ್ದ ಕೇಳಿದಾಗ ಒಳಗೆ ಓಡಿ ಹೋದೆ. ಅಷ್ಟರಲ್ಲಿ ಅಮ್ಮ ಹಾಗೂ ಪುತ್ರ ಗಾಯಗೊಂಡಿದ್ದರು. ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿರುವ ಸಾಧ್ಯತೆ ಇದೆ. ಆದ್ದರಿಂದ ಮಾರತ್ತಹಳ್ಳಿ ಠಾಣೆಗೆ ದೂರು ನೀಡಿದ್ದೇನೆ’ ಎಂದು ವೆಂಕಟೇಶ್ ಹೇಳಿದರು.


ಪಟಾಕಿಗೆ ತಗ್ಗಿದ ಬೇಡಿಕೆ
ಹೆಸರಘಟ್ಟ:
ದೀಪಾವಳಿ ಸಂದರ್ಭದಲ್ಲಿ ಜನರು, ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ಕೊಂಡುಕೊಳ್ಳಲು ನಿರಾಸಕ್ತಿ ತೋರಿದ್ದಾರೆ. ಆದರೆ ಮಕ್ಕಳ ಪಟಾಕಿಗೆ ಬೇಡಿಕೆ ಹೆಚ್ಚಿದೆ.

‘ಕೃಷ್ಣನ ಚಕ್ರ, ಸುರ್‌ಸುರ್‌ ಬತ್ತಿ, ಹನುಮಂತನ ಬಾಲ, ನೆಲ ಚಕ್ರದಂತಹ ಪಟಾಕಿಗಳ ಮಾರಾಟ ಜೋರಿದೆ. ಆದರೆ ಆಟಂ ಬಾಂಬ್‌, ಸರ ಪಟಾಕಿಗಳಿಗೆ ಹೋದ ವರ್ಷ ಇದ್ದಷ್ಟು ಬೇಡಿಕೆ ಇಲ್ಲ’ ಎಂದು ಇಲ್ಲಿನ ಪಟಾಕಿ ಅಂಗಡಿ ಮಾಲೀಕ ಮಹೇಶ್ ಹೇಳಿದರು.

‘ಈ ಬಾರಿ ಪಟಾಕಿ ಮಾರಾಟದಲ್ಲಿ ಹೆಚ್ಚಳ ಆಗಿದೆ. ₹2 ಲಕ್ಷದಿಂದ ₹4ಲಕ್ಷ ಇದ್ದ ವಹಿವಾಟು ಈ ಬಾರಿ ₹6ಲಕ್ಷದವರೆಗೂ ಹೆಚ್ಚಿದೆ. ಪಟಾಕಿ ದರದಲ್ಲಿ ಸ್ವಲ್ಪ ಹೆಚ್ಚಳವಾಗಿರುವುದೂ ಕಾರಣ ಇರಬಹುದು’ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT