ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಡೆಲಿವರಿ ಬಾಯ್‌; ಸಿಗದ ಸುಳಿವು

ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ
Published 6 ಜುಲೈ 2024, 19:16 IST
Last Updated 6 ಜುಲೈ 2024, 19:16 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಡೆಲಿವರಿ ಬಾಯ್‌ ಒಬ್ಬರು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ.

ಬ್ಯಾಟರಾಯನಪುರದ ಹೇಮಂತ್ ಕುಮಾರ್(28) ನಾಪತ್ತೆಯಾಗಿದ್ದು, ಅವರ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.

ಪೋರ್ಟರ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಹೇಮಂತ್‌ಕುಮಾರ್ ಅವರು, ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮೈಸೂರು ರಸ್ತೆಯ ಜ್ಞಾನಭಾರತಿ ಕಡೆಯಿಂದ ಬ್ಯಾಟರಾಯನಪುರದ ಕಡೆಗೆ ತೆರಳುತ್ತಿದ್ದರು. ಜ್ಞಾನಭಾರತಿ ಮೆಟ್ರೊ ನಿಲ್ದಾಣದ ಬಳಿ ಬೈಕ್‌ನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಆಯತಪ್ಪಿ ರಸ್ತೆ ಪಕ್ಕದಲ್ಲಿರುವ ರಾಜಕಾಲುವೆಗೆ ಬಿದ್ದಿದ್ದರು. ರಾತ್ರಿ ಸುರಿದ ಭಾರಿ ಮಳೆಯಿಂದ ನೀರಿನ ಹರಿವು ಹೆಚ್ಚಾಗಿದ್ದರಿಂದ ಅವರು ಕೊಚ್ಚಿ ಹೋಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದರು.

‘ಶುಕ್ರವಾರ ರಾತ್ರಿಯೇ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ, ತಡರಾತ್ರಿವರೆಗೂ ಹೇಮಂತ್ ಪತ್ತೆಯಾಗಿಲ್ಲ. ಹೀಗಾಗಿ ಶನಿವಾರ ಕೂಡ ಸುಮಾರು 2–3 ಕಿ.ಮೀ ಶೋಧ ನಡೆಸಲಾಯಿತು. ಆತನ ಸುಳಿವು ಸಿಕ್ಕಿಲ್ಲ. ಭಾನುವಾರ ಕಾರ್ಯಾಚರಣೆ ನಡೆಸಲಾಗುವುದು. ಸದ್ಯ ನಾಪತ್ತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಕಂದಕವಿದ್ದು, ಅದನ್ನು ಮುಚ್ಚಿಲ್ಲ. ಅದರಿಂದಲೇ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT