ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವಿದ್ಯಾಲಯಗಳು, ಕೈಗಾರಿಕೆಗಳಲ್ಲೂ ‘ಸಂವಿಧಾನ ಪ್ರಸ್ತಾವನೆ’ ಫಲಕಕ್ಕೆ ಆಗ್ರಹ

Published 25 ಫೆಬ್ರುವರಿ 2024, 13:38 IST
Last Updated 25 ಫೆಬ್ರುವರಿ 2024, 13:38 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳು, ಎಲ್ಲ ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳು, ಐಟಿ-ಬಿಟಿ ಕಚೇರಿಗಳ ಪ್ರವೇಶದ್ವಾರದಲ್ಲಿ ‘ಸಂವಿಧಾನ ಪ್ರಸ್ತಾವನೆ’ ಫಲಕ ಅಳವಡಿಸುವ ಸಂಬಂಧ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ದಿನೇಶ್‌ ಗೂಳಿಗೌಡ ಪತ್ರ ಬರೆದಿದ್ದಾರೆ.

‘ಸಂವಿಧಾನದ ಕುರಿತು ಅರಿವು ಮೂಡಿಸುವ ದಿಸೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಅಭಿಯಾನ ಆರಂಭಿಸಿದೆ. ಸಂವಿಧಾನ ಜಾಗೃತಿ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತಿವೆ. ಶಾಲೆಗಳಲ್ಲಿ ಬೆಳಿಗ್ಗೆಯ ಸಮಯ ಸಂವಿಧಾನ ಪ್ರಸ್ತಾವನೆ ಓದಿಸಲಾಗುತ್ತಿದೆ. ಜತೆಗೆ, ಸಂವಿಧಾನ ಪ್ರಸ್ತಾವನೆ ಫಲಕಗಳನ್ನು ಅಳವಡಿಸಲು ಆದೇಶವನ್ನೂ ಹೊರಡಿಸಲಾಗಿದೆ. ಅದೇ ರೀತಿ ವಿಶ್ವವಿದ್ಯಾಲಯ, ಪದವಿ ಕಾಲೇಜುಗಳು ಹಾಗೂ ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳು ಹಾಗೂ ಐಟಿ-ಬಿಟಿ ಕಚೇರಿಗಳ ಪ್ರವೇಶದ್ವಾರದಲ್ಲಿಯೂ ಸಂವಿಧಾನ ಪ್ರಸ್ತಾವನೆಯ ಫಲಕ ಅಳವಡಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‌‘ಜಾತ್ಯತೀತ, ಸಮಾನತೆ, ಭ್ರಾತೃತ್ವ ತತ್ವಗಳು ನಮ್ಮ ಸಂವಿಧಾನದ ತಳಹದಿ. ಸಂವಿಧಾನ ಜಾರಿಯಾಗಿ 75 ವರ್ಷಗಳಾದರೂ ಸಮಾಜದಲ್ಲಿ ಇನ್ನೂ ಅಸಮಾನತೆ ದೂರವಾಗಿಲ್ಲ. ಜಾತಿ ಪದ್ಧತಿ ಹೋಗಿಲ್ಲ. ಅಸ್ಪೃಶ್ಯತೆ ನಿಂತಿಲ್ಲ. ಸಮ ಸಮಾಜ ನಿರ್ಮಾಣ ಆಗಿಲ್ಲ. ‘ವೈರುಧ್ಯ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ’ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಅವರು ಸಂವಿಧಾನ ಜಾರಿಗೆ ಬಂದ ಸಂದರ್ಭದಲ್ಲಿ ಹೇಳಿದ್ದರು. ವಿಪರ್ಯಾಸವೆಂದರೆ ಇಷ್ಟು ವರ್ಷವಾದರೂ ದೇಶದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಅಸಮಾನತೆ ನಿಂತಿಲ್ಲ. ಸಂವಿಧಾನದ ಬಗ್ಗೆ ಜನರಲ್ಲಿ ಅರಿವು, ಜಾಗೃತಿ ಮೂಡಿಸುವ ಮೂಲಕ ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇ ಬೇಕಿದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT