ಬೆಂಗಳೂರು: ಪಿಒಪಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶ ಕಲ್ಪಿಸುವಂತೆ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಆಗ್ರಹಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಈ. ಅಶ್ವತ್ಥನಾರಾಯಣ, ‘ಧಾರ್ಮಿಕ ಆಚರಣೆ, ನಂಬಿಕೆ ಮತ್ತು ತಮಗೆ ಇಷ್ಟವಾಗುವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ, ರಾಜ್ಯದಲ್ಲಿ ಮೂರು ವರ್ಷಗಳಿಂದ ಪರಿಸರ ರಕ್ಷಣೆಯ ಹೆಸರಿನಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸರ್ಕಾರ ನಿರಾಕರಿಸುವ ಮೂಲಕ ಭಕ್ತರ ಧಾರ್ಮಿಕ ಭಾವನೆಗಳಿಗೆ ಅಡ್ಡಿಪಡಿಸುತ್ತಿದೆ’ ಎಂದು ದೂರಿದರು.
‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಲ್ಲಿ ಪಿಒಪಿ ಮೂರ್ತಿ, ವಿಗ್ರಹದ ಎತ್ತರ, ಧಾರ್ಮಿಕ ಆಚರಣೆ ಬಗ್ಗೆ ಕೆಲವು ನಿರ್ಬಂಧಗಳನ್ನು ವಿಧಿಸಿ ಗಣಪತಿ ಮೂರ್ತಿಗಳ ಭಕ್ತರಿಗೆ ಸಿಗದಂತೆ ಮಾಡಿದೆ. ಇದರಿಂದ, ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅಡ್ಡಿಯಾಗಿದೆ. ಮುಂದಿನ ದಿನಗಳಲ್ಲಿ ಮಂಡಳಿಯ ಈ ನಿರ್ಧಾರವನ್ನು ಖಂಡಿಸಿ ರಾಜ್ಯದಾದ್ಯಂತ ಧಾರ್ಮಿಕ ಸಂಘಟನೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಪಿಒಪಿ ಮೂರ್ತಿಗಳಿಂದ ನೀರು ಮತ್ತು ಪರಿಸರಕ್ಕೆ ಹಾನಿಯಾಗದಂತೆ ನಿಗದಿಪಡಿಸಿರುವ ಕಲ್ಯಾಣಿಗಳಲ್ಲಿ ಮಾತ್ರ ವಿಸರ್ಜನೆ ಮಾಡುತ್ತೇವೆ. ಈ ಮೂರ್ತಿಗಳನ್ನು ಕೇವಲ ಅಲಂಕಾರಕ್ಕೆ ಮಾತ್ರ ಬಳಸಿ ಮುಂದಿನ ವರ್ಷವೂ ಇದೇ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಸಾರ್ವಜನಿಕ ಗಣೇಶ ಉತ್ಸವ ಸಮಿತಿಗಳ ಒಕ್ಕೂಟದಿಂದ ಜಾಗೃತಿ ಮೂಡಿಸಲಾಗುವುದು’ ಎಂದರು.
‘ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಧ್ವನಿವರ್ಧಕ (ಡಿ.ಜೆ) ಬಳಕೆಗೆ ಯಾವುದೇ ನಿರ್ಬಂಧ ವಿಧಿಸಬಾರದು. ಮೆರವಣಿಗೆ ಸಮಯ, ಮಾರ್ಗಕ್ಕೆ ಅಡೆತಡೆಯಾಗದಂತೆ ಸಂಚಾರ ವ್ಯವಸ್ಥೆಯನ್ನು ಬದಲಿಸಬೇಕು’ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.