ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನ್ಸರಾಜ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಮುಸ್ಲಿಂ ಮೀಸಲಾತಿ ಬಗ್ಗೆ ಸುಳ್ಳು ಹೇಳಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ
Published 25 ಏಪ್ರಿಲ್ 2024, 15:41 IST
Last Updated 25 ಏಪ್ರಿಲ್ 2024, 15:41 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಗೆ ಮತಗಳನ್ನು ತರುವುದಕ್ಕಾಗಿ ಮುಸ್ಲಿಂ ಸಮುದಾಯದ ಮೀಸಲಾತಿ ಬಗ್ಗೆ ಸುಳ್ಳು ಹೇಳಿಕೆ ನೀಡಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹನ್ಸರಾಜ್ ಗಂಗಾರಾಮ್ ಅಹೀರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ವಕೀಲ ಪ‍್ರೊ. ರವಿವರ್ಮ ಕುಮಾರ್‌ ಆಗ್ರಹಿಸಿದರು.

‘ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ’ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಾದರಿ ನೀತಿ ಸಂಹಿತೆ ಜಾರಿಯಾದ ಮೇಲೆ ಯಾವುದೇ ಆಯೋಗದ ಅಧ್ಯಕ್ಷರು ಪಕ್ಷಗಳ ಪರವಾಗಿ ಮತದಾರರ ಮೇಲೆ ಪ್ರಭಾವ ಅಥವಾ ಪರಿಣಾಮ ಬೀರುವ ಕೆಲಸವನ್ನು ಮಾಡಬಾರದು. ಕರ್ನಾಟಕದ ಮುಸ್ಲಿಂ ಮೀಸಲಾತಿ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದರೂ ಈ ಬಗ್ಗೆ ಬಿಜೆಪಿ ಬಾಲಬಡುಕರಾದ ಹನ್ಸರಾಜ್ ಗಂಗಾರಾಮ್ ಅಹೀರ ಮಾತನಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಅವರು ಹಾವನೂರು ಆಯೋಗದ ವರದಿಯನ್ನು ಅಂಗೀಕರಿಸುವ ಮೂಲಕ ಮುಸ್ಲಿಮರ ಪರವಾಗಿ ಮೀಸಲಾತಿಯನ್ನು ಒದಗಿಸಿದ್ದರು. ಅದನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು. ಮುಸ್ಲಿಮರಿಗೆ ಮೀಸಲಾತಿ ಕೊಡಬೇಕು ಎಂದು ಆಗ ಹೈಕೋರ್ಟ್ ತೀರ್ಪು ನೀಡಿತು. ಸುಪ್ರೀಂ ಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿದಿತ್ತು ಎಂದು ವಿವರಿಸಿದರು.

ಸುಮಾರು ಒಂದೂವರೆ ವರ್ಷಗಳ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರವು, ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ತೆಗೆದು ಹಾಕಿತು. ಸುಪ್ರೀಂಕೋರ್ಟ್‌ನಲ್ಲಿ ಈ ವಿಚಾರವನ್ನು ಪ್ರಶ್ನಿಸಿದಾಗ ಮೀಸಲಾತಿ ತೆಗೆದು ಹಾಕುವುದರ ವಿರುದ್ಧ ಸುಪ್ರೀಂಕೋರ್ಟ್‌ ಮಧ್ಯಂತರ ಆದೇಶವನ್ನು ನೀಡಿದೆ. ಇಂಥ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ ಮತ್ತು ಬಿಜೆಪಿಯ ನಾಯಕರು ಮತಗಳಿಗೋಸ್ಕರ ಮುಸ್ಲಿಂ ಮೀಸಲಾತಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದು ನ್ಯಾಯಾಂಗದ ಉಲ್ಲಂಘನೆಯಾಗಿದೆ. ಈ ನಾಯಕರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಸ್ಲಿಮರ ಪರವಾಗಿ ಮೀಸಲಾತಿಯನ್ನು ಧರ್ಮಾಧಾರಿತ ಮೀಸಲಾತಿ ಎಂದು ಹನ್ಸರಾಜ್ ಗಂಗಾರಾಮ್ ಅಹೀರ ಪ್ರತಿಪಾದಿಸಿದ್ದಾರೆ. ಈ ಸಮರ್ಥನೆಯನ್ನು ನ್ಯಾಯಾಂಗವು ಈಗಾಗಲೇ ತಿರಸ್ಕರಿಸಿದೆ. ಮುಸ್ಲಿಮರಿಗೆ ನೀಡಿದ್ದ ಮಿಸಲಾತಿಯನ್ನು ಹಿಂಪಡೆದಿದ್ದ ಬೊಮ್ಮಾಯಿ ಸರ್ಕಾರದ ನಿರ್ಣಯವನ್ನು ಸುಪ್ರೀಂಕೋರ್ಟ್‌ ತಡೆ ಹಿಡಿದಿದೆ. ಹೀಗಿರುವ ತನ್ನ ಕಾರ್ಯವ್ಯಾಪ್ತಿಗೆ ಬಾರದ ವಿಷಯದ ಬಗ್ಗೆ ಮಾತನಾಡಿರುವ ಹನ್ಸರಾಜ್ ಅವರನ್ನು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ, ಸಂಚಾಲಕರಾದ ಮಾವಳ್ಳಿ ಶಂಕರ್, ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಸದಸ್ಯ ಸುರೇಶ್ ಲಾತೂರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT