ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಸಿಬ್ಬಂದಿಯ ಪತಿ ಅಥವಾ ಪತ್ನಿಗೆ ಉಚಿತ ಬಸ್‌ಪಾಸ್ ನೀಡಬೇಕು ಎಂದು ಇಪಿಎಸ್-95, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.
ವಿವಿಧ ಪಿಂಚಣಿ ಬೇಡಿಕೆಗೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಘಟನೆಯು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದೆ. ನಿವೃತ್ತರ ಪತಿ ಅಥವಾ ಪತ್ನಿಗೆ ಬಸ್ ಪಾಸ್‌ಗಾಗಿ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಈ ಬೇಡಿಕೆಯೂ ಈಡೇರಿಲ್ಲ ಎಂದು ಸಂಘಟನೆಯ ಅಧ್ಯಕ್ಷ ಶಂಕರ್ ಕುಮಾರ್, ಕಾರ್ಯಾಧ್ಯಕ್ಷ ನಂಜುಂಡೇಗೌಡ ಸಚಿವರ ಗಮನಕ್ಕೆ ತಂದರು.
‘ಈ ಬೇಡಿಕೆ ಗಮನದಲ್ಲಿದ್ದು, ಪ್ರಸ್ತಾವನೆಯನ್ನು ಮಂಡಳಿ ಸಭೆಯಲ್ಲಿಟ್ಟು ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.
ಮಾಸಿಕ ಸಭೆ: ಇಪಿಎಸ್-95, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಮಾಸಿಕ ಸಭೆಯು ಸೆ.3ರಂದು ಲಾಲ್‌ಬಾಗ್ ಮೆಟ್ಟಿಲು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ನಿವೃತ್ತರ ಕನಿಷ್ಠ ಪಿಂಚಣಿ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವ ರಾಮೇಶ್ವರ ತೇಲಿ ಅವರು ಯಾವುದೇ ಅಧ್ಯಯನವಿಲ್ಲದೇ ಹೇಳಿಕೆ ನೀಡಿದ್ದಾರೆ. ನಿವೃತ್ತ ಪಿಂಚಣಿದಾರರ ಮುಖಂಡ ಅಶೋಕ್ ರಾವತ್ ಹಾಗೂ ಮುಖಂಡರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಇದು ಖಂಡನಾರ್ಹ. ಪಿಂಚಣಿದಾರರ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.