ಬೆಂಗಳೂರು: ವಿಧಾನಸಭೆ ಕಾರ್ಯದರ್ಶಿ ಹುದ್ದೆಯನ್ನು ಎಸ್. ಮೂರ್ತಿ ಅವರಿಗೆ ವಾಪಸ್ ನೀಡಬೇಕು ಎಂದು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಒತ್ತಾಯಿಸಿದೆ.
ಸುಳ್ಳು ಆರೋಪ ಹೊರಿಸಿ ಎಸ್. ಮೂರ್ತಿ ಅವರಿಂದ ವಿಧಾನಸಭೆ ಕಾರ್ಯದರ್ಶಿ ಹುದ್ದೆ ಕಸಿದುಕೊಳ್ಳಲಾಗಿದೆ. ಹೈಕೋರ್ಟ್‌ನ ಆದೇಶದ ಬಳಿಕವೂ ಅವರಿಗೆ ಕಾರ್ಯದರ್ಶಿ ಹುದ್ದೆ ನೀಡಿಲ್ಲ. ಕೂಡಲೇ ಅನ್ಯಾಯ ಸರಿಪಡಿಸಬೇಕು ಎಂದು ಒಕ್ಕೂಟವು ಸರ್ಕಾರವನ್ನು ಒತ್ತಾಯಿಸಿದೆ.
ಕರ್ತವ್ಯ ಲೋಪದ ಆರೋಪ ಹೊರಿಸಿ ಮೂರ್ತಿ ಅವರನ್ನು ಅಮಾನತು ಮಾಡಲಾಗಿತ್ತು. ಎಸ್. ಮೂರ್ತಿ ಅವರು ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅವರನ್ನು ಮರು ನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್ 2020ರ ಜುಲೈ 2ರಂದು ಆದೇಶ ನೀಡಿತ್ತು. ಆದರೆ, ಈ ಆದೇಶ ಜಾರಿ ಮಾಡುವ ಬದಲು ಆಗಿನ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾರ್ಯದರ್ಶಿ ಹುದ್ದೆಯಿಂದ 3 ದರ್ಜೆ ಕೆಳಹಂತದ ಅಧೀನ ಕಾರ್ಯದರ್ಶಿ ಹುದ್ದೆಗೆ ಹಿಂಬಡ್ತಿಗೊಳಿಸಿ, ದಂಡನೆಗಳನ್ನು ವಿಧಿಸಿ ನೇಮಕ ಮಾಡಿದ್ದರು. ಈ ಅನ್ಯಾಯ ಸರಿಮಾಡಬೇಕು ಎಂದು ಆಗ್ರಹಿಸಿದೆ.
ಈ ಬಗ್ಗೆ ಒಕ್ಕೂಟದ ಸಂಚಾಲಕರಾದ ಜ್ಞಾನಪ್ರಕಾಶ ಸ್ವಾಮೀಜಿ, ಬಿ. ಗೋಪಾಲ್ ಅವರು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಸಭಾಪತಿ ಬಿ.ಎಸ್. ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.