ಭಾನುವಾರ, ಆಗಸ್ಟ್ 25, 2019
26 °C
ಹೊಯ್ಸಳನಗರ ವಾರ್ಡ್‌ನಲ್ಲಿ ಅತಿ ಹೆಚ್ಚು lವಾರ್ಡ್‌ಗಳಿಗೆ ಹೆಚ್ಚುವರಿಯಾಗಿ 200 ಸ್ವಯಂ ಸೇವಕರ ನಿಯೋಜನೆ

ಡೆಂಗಿ: ನಾಲ್ಕು ದಿನಗಳಲ್ಲಿ 563 ಪ್ರಕರಣ

Published:
Updated:

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಲ್ಕು ದಿನಗಳಲ್ಲಿ 563 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಪ್ರಕರಣಗಳ ಸಂಖ್ಯೆ ಶೇ 12ರಷ್ಟು ಹೆಚ್ಚಾಗಿದೆ.

ಕಳೆದ ಭಾನುವಾರದವರೆಗೆ ನಗರದಲ್ಲಿ 4,443 ಪ್ರಕರಣಗಳು ಪತ್ತೆಯಾಗಿದ್ದವು. ಈಗ ‍ಪ್ರಕರಣಗಳ ಸಂಖ್ಯೆ 5,006ಕ್ಕೆ ಏರಿದೆ. ಹೊಯ್ಸಳನಗರ ವಾರ್ಡ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳು (213) ಪತ್ತೆಯಾಗಿವೆ. ನ್ಯೂ ತಿಪ್ಪಸಂದ್ರದಲ್ಲಿ 186 ಹಾಗೂ ಬೆನ್ನಿಗಾನಹಳ್ಳಿಯಲ್ಲಿ 163 ಮಂದಿ ಡೆಂಗಿ ಪೀಡಿತರಾಗಿದ್ದಾರೆ.

‘ಜನವರಿಯಿಂದ ಈವರೆಗೆ 5,006 ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿಯ 50 ವಾರ್ಡ್‌ಗಳಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗಿದ್ದು, ಈ ವಾರ್ಡ್‌ಗಳಿಗೆ ಹೆಚ್ಚುವರಿಯಾಗಿ 200 ಸ್ವಯಂ ಸೇವಕರನ್ನು ನಿಯೋಜನೆ ಮಾಡಿಕೊಳ್ಳಲಾಗುವುದು’ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

‘ಪೂರ್ವ, ಮಹದೇವಪುರ ಹಾಗೂ ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಈ ವಲಯಗಳ 50 ವಾರ್ಡ್‌ಗಳಲ್ಲಿ ಡೆಂಗಿ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಲಾರ್ವ ಉತ್ಪತ್ತಿ ತಾಣಗಳನ್ನು ನಾಶ ಪಡಿ ಸಲು ಸ್ವಯಂ ಸೇವಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇವರಿಗೆ ತಿಂಗಳಿಗೆ ₹15 ಸಾವಿರ ಗೌರವಧನ ನೀಡಲಾಗುವುದು. ಸದ್ಯಕ್ಕೆ ಒಂದು ತಿಂಗಳ ಅವಧಿಗೆ ನೇಮಿಸಿಕೊಳ್ಳಲಾಗುತ್ತಿದ್ದು, ಅಗತ್ಯ ಎನಿಸಿದರೆ ಮತ್ತೆ ಎರಡು ತಿಂಗಳು ಮುಂದುವರಿಸಲಾಗುವುದು’ ಎಂದರು.

‘ವಾರಕ್ಕೆ 2–3 ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಆಗುವ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ಮಾಹಿತಿ ಇದೆ. ಕುಡಿಯುವ ನೀರು ಸಂಗ್ರಹಿಸಿಕೊಂಡಿದ್ದರೆ ಮುಚ್ಚಳಗಳನ್ನು ಮುಚ್ಚಲು, ಮನೆ ಸುತ್ತಮುತ್ತ ನೀರು ಸಂಗ್ರಹ ಆಗದಂತೆ ನೋಡಿಕೊಳ್ಳುವ ಬಗ್ಗೆ ‌198 ವಾರ್ಡ್‌ಗಳಲ್ಲೂ ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾಯಕರ್ತೆಯರು ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ’ ಎಂದು ವಿವರಿಸಿದರು.

‘ಹೊಸದಾಗಿ ನಿರ್ಮಾಣ ಆಗು ತ್ತಿರುವ ಕಟ್ಟಡಗಳ ಬಳಿ ಮಳೆ ನೀರು ಸಂಗ್ರಹ ಆಗದಂತೆ ಮನೆ ಮಾಲೀಕರು ಹಾಗೂ ಗುತ್ತಿಗೆದಾರರಿಗೆ ಪಾಲಿಕೆ ಆರೋಗ್ಯಾಧಿಕಾರಿಗಳು ಜಾಗೃತಿ ಮೂಡಿ ಸಬೇಕು’ ಎಂದು ಮೇಯರ್ ತಿಳಿಸಿದರು.

‘ಪ್ರತಿ ವಾರ್ಡ್‌ನಲ್ಲಿ ಔಷಧ ಸಿಂಪಡಿ ಸಲು 3–4 ಜನರನ್ನು ನಿಯೋಜನೆ ಮಾಡಲಾಗಿದೆ. ಮಾಧ್ಯಮಗಳ ಮೂಲ ಕವೂ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ಪ್ಲಾಸ್ಟಿಕ್ ಬಳಕೆ: ₹2.8 ಕೋಟಿ ದಂಡ

‘ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಜುಲೈ 15ರಿಂದ ಈವರೆಗೆ ದಾಳಿ ನಡೆಸಿ 24 ಟನ್ ಪ್ಲಾಸ್ಟಿಕ್ ಜಪ್ತಿ ಮಾಡಲಾಗಿದ್ದು, ₹2.8 ಕೋಟಿ ದಂಡ ವಿಧಿಸಲಾಗಿದೆ’ ಎಂದು ಮೇಯರ್ ಹೇಳಿದರು.

‘ಪ್ಲಾಸ್ಟಿಕ್ ಕೈಚೀಲದ ಬದಲು ಪೇಪರ್, ಬಟ್ಟೆ, ಜ್ಯೂಟ್ ಬ್ಯಾಗ್ (ನಾರಿನಿಂದ ತಯಾರಿಸಿದ ಕೈ ಚೀಲ),  ಜೈವಿಕ ಪದಾರ್ಥಗಳಿಂದ ತಯಾರಿಸಿದ ಬ್ಯಾಗ್‌ಗಳನ್ನು ಉಪಯೋಗಿಸಬಹುದು. ಬೇರೆ ಉತ್ಪನ್ನಗಳ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲು ಸೆಪ್ಟೆಂಬರ್ ಮೊದಲ ವಾರದಲ್ಲಿ ಮೂರು ದಿನಗಳ ‘ಪ್ಲಾಸ್ಟಿಕ್ ಮೇಳ’ ಆಯೋಜಿಸಲಾಗುತ್ತಿದೆ’ ಎಂದರು.

ಮಾರುಕಟ್ಟೆಗಳ ಮೇಲೆ ದಾಳಿ: ‘ಮಾರುಕಟ್ಟೆಗಳಲ್ಲಿಯೇ ಹೆಚ್ಚು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಮುಂದಿನ ವಾರದಿಂದ ಪಾಲಿಕೆಯ ಎಲ್ಲಾ ಸದಸ್ಯರು, ಅಧಿಕಾರಿಗಳ ಸಹಯೋಗದಲ್ಲಿ ದಾಳಿ ನಡೆಸಿ ದಂಡ ವಿಧಿಸಲಾಗುವುದು’ ಎಂದು ಮೇಯರ್ ತಿಳಿಸಿದರು.

 

Post Comments (+)