ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ ಜಾಗೃತಿ ಉತ್ಸವ: ವಿದ್ಯಾರ್ಥಿಗಳಿಗೆ ಡೆಂಗಿ, ಶುಚಿತ್ವದ ಅರಿವು

Published 5 ಜುಲೈ 2024, 15:50 IST
Last Updated 5 ಜುಲೈ 2024, 15:50 IST
ಅಕ್ಷರ ಗಾತ್ರ

ಬೆಂಗಳೂರು: ‘ಮನೆಯೊಳಗೆ, ಹೊರಗೆ ಸ್ವಚ್ಛತೆ ಕಾಪಾಡಿಕೊಳ್ಳಿ, ಕೈಗಳನ್ನು ಸೋಪಿನಿಂದ ತೊಳೆದು ಶುಚಿಯಾಗಿಟ್ಟುಕೊಳ್ಳಿ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ, ನಿಮ್ಮ ಆರೋಗ್ಯ ಚೆನ್ನಾಗಿದ್ದರೆ, ನಗರದ ಆರೋಗ್ಯವೂ ಉತ್ತಮವಾಗಿರುತ್ತದೆ...’

ನಗರದ ಹಲವು ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಗಳು, ಚಿತ್ರ–ವಿಡಿಯೊಗಳ ಮೂಲಕ ಆರೋಗ್ಯದ ಬಗ್ಗೆ ಈ ರೀತಿ ಅರಿವು ಮೂಡಿಸಲಾಯಿತು.

ದಿ ಬೆಂಗಳೂರು ಸೈನ್ಸ್ ಆ್ಯಂಡ್ ಟೆಕ್ನಾಲಜಿ ಕ್ಲಸ್ಟರ್ ವತಿಯಿಂದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮೈ ಸಿಟಿ ಮೈ ಹೆಲ್ತ್’ ಆರೋಗ್ಯ ಜಾಗೃತಿ ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ಕ್ಷೇತ್ರದ ಆವಿಷ್ಕಾರಗಳ ಬಗ್ಗೆ ಮಾಹಿತಿ ನೀಡಿ, ಡೆಂಗಿ ಸೇರಿ ವಿವಿಧ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈಡಿಸ್‌ ಸೊಳ್ಳೆಗಳು ಹಗಲು ಹೊತ್ತು ಕಚ್ಚುತ್ತವೆ. ಈ ಸೊಳ್ಳೆಯಿಂದ ಡೆಂಗಿ, ಚಿಕೂನ್‌ ಗುನ್ಯಾ, ಝೀಕಾ, ಹಳದಿ ಜ್ವರ ಹರಡುತ್ತದೆ. ಅನಾಫಿಲಿಸ್‌ ಸೊಳ್ಳೆಗಳು ರಾತ್ರಿ ಸಮಯದಲ್ಲಿ ಕಚ್ಚುತ್ತವೆ. ಈ ಸೊಳ್ಳೆಯಿಂದ ಮಲೇರಿಯಾ ಹರಡುತ್ತದೆ. ಕ್ಯೂಲೆಕ್ಸ್‌ ಸೊಳ್ಳೆ ಮುಂಜಾನೆ ಹಾಗೂ ಮುಸ್ಸಂಜೆಯ ಸಮಯದಲ್ಲಿ ಕಚ್ಚುತ್ತವೆ. ಇವುಗಳಿಂದ ಫೈಲೇರಿಯಾ, ಜಪಾನೀಸ್‌ ಎನ್ಸೆಫಾಲಿಟಿಸ್‌, ವೆಸ್ಟ್‌ ನೈಲ್‌ ಜ್ವರ ಹರಡುತ್ತದೆ ಎಂದು ತಜ್ಞರು ವಿದ್ಯಾರ್ಥಿಗಳಿಗೆ ಸೊಳ್ಳೆಗಳನ್ನು ತೋರಿಸಿ ವಿವರಣೆ ನೀಡಿದರು.

ಸೊಳ್ಳೆ ಉತ್ಪತ್ತಿ ಹೇಗಾಗುತ್ತದೆ, ಯಾವ ಸ್ಥಳಗಳಲ್ಲಿ ಸಂತಾನೋತ್ಪಕ್ತಿ ಹೆಚ್ಚಾಗಿರುತ್ತದೆ, ಹೊರಾಂಗಣ ಹಾಗೂ ಒಳಾಂಗಣದಲ್ಲಿ ಯಾವ ರೀತಿಯ ರಾಸಾಯನಿಕಗಳನ್ನು ಸಿಂಪಡಿಸಬೇಕು, ಮುನ್ನೆಚ್ಚರಿಕೆ ವಿಧಾನ ಹೇಗೆ ಅನುಸರಿಸಬೇಕು ಎಂಬುದನ್ನು ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸಲಾಯಿತು.

ಡೆಂಗಿ ವಿರುದ್ಧ ಹೇಗೆ ಹೋರಾಡಬೇಕು, ಅದರ ಕ್ರಮಗಳೇನು ಎಂಬ ವಿವರಣೆಯುಳ್ಳ ‘ಬ್ಯಾಟಲ್‌ ಫಾರ್‌ ಮರಿಯಪ್ಪನಪಾಳ್ಯ’ ಎಂಬ ಚಿತ್ರ ವಿವರಣೆ ಮಕ್ಕಳ ಗಮನಸೆಳೆಯಿತು.

ಕೈಗಳನ್ನು ಹೇಗೆ ಸ್ವಚ್ಛಗೊಳಿಸಿಕೊಳ್ಳಬೇಕು. ನೀರಿನಿಂದ ಮಾತ್ರ ತೊಳೆದುಕೊಂಡರೆ ಸಾಕಾಗುವುದಿಲ್ಲ, ಕೊಳಕು ಉಳಿದುಕೊಳ್ಳುತ್ತದೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು. ನೀರಿಗೆ ಮೆಣಸಿನ ಪುಡಿಯನ್ನು ಹಾಕಿ ಅದಕ್ಕೆ ಸೋಪಿನ ದ್ರಾವಣ ಹಾಕಿದಾಗ ಪುಡಿ ದ್ರಾವಣದಿಂದ ದೂರಾಗುತ್ತದೆ. ಈ ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಲ್ಲಿ ಶುಚಿತ್ವದ ಅರಿವು ಮೂಡಿಸಲಾಯಿತು.

ರಸ್ತೆ, ಸಾರ್ವಜನಿಕ ಪ್ರದೇಶ ಅಥವಾ ಜನರು ವಾಸಿಸುವ ಪ‍್ರದೇಶಗಳಲ್ಲಿ ತ್ಯಾಜ್ಯವನ್ನು ಎಸೆಯಬಾರದು. ಕಸವನ್ನು ಎಲ್ಲೆಂದರಲ್ಲಿ ಎಸೆದಾಗ ಪ್ರಾಣಿಗಳು ಅವುಗಳನ್ನು ತಿನ್ನಲು ಬರುತ್ತವೆ, ದುರ್ವಾಸನೆ ಬರುತ್ತದೆ, ಆರೋಗ್ಯ ಹದಗೆಡುತ್ತದೆ. ಹೀಗಾಗಿ, ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಅರಿವು ಮೂಡಿಸಲಾಯಿತು. 

ವಿದ್ಯಾರ್ಥಿಗಳು ಆಸಕ್ತಿಯಿಂದ ಎಲ್ಲ ಮಾಹಿತಿಯನ್ನು ಪಡೆದುಕೊಂಡು, ನಂತರ ತಜ್ಞರು ನೀಡಿದ ಪ್ರಶ್ನೋತ್ತರ ಕಾಗದದಲ್ಲಿ ತಮ್ಮ ಅಭಿಪ್ರಾಯವನ್ನು ದಾಖಲಿಸಿದರು.

ರೇಬಿಸ್‌ ಜಾಗೃತಿ

ನಾಯಿಗಳ ದಾಳಿಯನ್ನು ನಿಯಂತ್ರಿಸುವುದು ಹಾಗೂ ರೇಬಿಸ್‌ ರೋಗ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತೂ ಈ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಯಿತು. ‘ನಾಯಿಗಳು ತಿನ್ನುವಾಗ ಮಲಗಿದಾಗ ಮರಿಗಳಿಗೆ ಹಾಲುಣಿಸುವಾಗ ಅನಗತ್ಯವಾಗಿ ಕೆಣಕಬೇಡಿ. ಪರಿಚಯವಿಲ್ಲದ ನಾಯಿಗಳ ಮುಂದೆ ಓಡಬೇಡಿ ನಾಯಿಗಳ ಕಡೆಗೆ ಏನನ್ನೂ ಎಸೆಯಬೇಡಿ’ ಎಂದು ಮಕ್ಕಳಿಗೆ ತಿಳಿ ಹೇಳಲಾಯಿತು. ‘ನಾಯಿ ಕಚ್ಚಿದ ಸಂದರ್ಭದಲ್ಲಿ ಆ ಭಾಗವನ್ನು ಸೋಪು ಹಾಗೂ ನೀರಿನಿಂದ 15 ನಿಮಿಷ ಸ್ವಚ್ಛಗೊಳಿಸಿ ಕೂಡಲೇ ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ. ಬಿಬಿಎಂಪಿಯ ರೇಬೀಸ್‌ ಹೆಲ್ಪ್‌ಲೈನ್‌ 63648 93322ಗೆ ಕರೆ ಮಾಡಿ. ಬೆಂಗಳೂರನ್ನು ರೇಬೀಸ್‌ ಮುಕ್ತ ನಗರವನ್ನಾಗಿಸಲು ಕೈಜೋಡಿಸಿ’ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿಕೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT