ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡೆಂಗಿ: ಜ್ವರ ಕ್ಲಿನಿಕ್ ತೆರೆಯಲು ಸಚಿವ ದಿನೇಶ್ ಗುಂಡೂರಾವ್ ಸೂಚನೆ

ರೋಗ ನಿಯಂತ್ರಣ– ಡಿಸಿಗಳ ಜೊತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ
Published 4 ಜುಲೈ 2024, 15:29 IST
Last Updated 4 ಜುಲೈ 2024, 15:29 IST
ಅಕ್ಷರ ಗಾತ್ರ

ಬೆಂಗಳೂರು: ‘ಡೆಂಗಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಸ್ಥಳಗಳಲ್ಲಿ ಜ್ವರ ಕ್ಲಿನಿಕ್ ತೆರೆಯಬೇಕು. ಅಂತಹ ಪ್ರದೇಶಗಳಲ್ಲಿ ಯಾರಿಗಾದರೂ ಜ್ವರ ಕಂಡುಬಂದರೆ ಕಡ್ಡಾಯವಾಗಿ ಡೆಂಗಿ ಪರೀಕ್ಷೆಗೆ ಒಳಪಡಿಸಬೇಕು’ ಎಂದು ಇಲಾಖೆಯ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.

ರಾಜ್ಯದಲ್ಲಿ ಡೆಂಗಿ ಪ್ರಕರಣಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ (ಸಿಇಒ) ಜೊತೆಗೆ ಗುರುವಾರ ವಿಡಿಯೊ ಸಂವಾದ ನಡೆಸಿದ ಅವರು, ಜಿಲ್ಲೆಗಳಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಬಳಿಕ, ಡೆಂಗಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಸ್ಥಳಗಳಲ್ಲಿ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

‘ವ್ಯಕ್ತಿ ಡೆಂಗಿ ಪೀಡಿತನಾಗಿರುವುದು ಆರಂಭದಲ್ಲಿಯೇ ದೃಢಪಟ್ಟರೆ ಅಗತ್ಯ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಚಿಕಿತ್ಸೆ ವಿಳಂಬವಾದಲ್ಲಿ ಸಾವುಗಳು ಸಂಭವಿಸುತ್ತವೆ. ಡೆಂಗಿಯಿಂದ ಸಾವು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ರೋಗ ತಡೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮುಂದಾಗಬೇಕು.‌ ಮನೆ ಮನೆಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ, ಅರಿವು ಮೂಡಿಸಬೇಕು. ವೈದ್ಯಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ವಿಜ್ಞಾನ ಶಿಕ್ಷಕರ ಮೂಲಕ ಮಕ್ಕಳಿಗೆ ಡೆಂಗಿ ಕುರಿತು ತಿಳಿಹೇಳಬೇಕು’ ಎಂದರು.

‘ಪ್ರಮುಖವಾಗಿ ಲಾರ್ವಾ ಉತ್ಪತ್ತಿ ಸ್ಥಳ ಕಂಡುಬಂದರೆ, ಅದನ್ನು ನಾಶಪಡಿಸುವ ಕೆಲಸವನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾವಾರು ಡೆಂಗಿ ಪ್ರಕರಣಗಳ ಮಾಹಿತಿ ಪ್ರಕಟಿಸಲು ತಿಳಿಸಿದ ಸಚಿವರು, ‘ಶಿಕ್ಷಣ ಇಲಾಖೆ ಸೇರಿ ಎಲ್ಲ ಇಲಾಖೆಯವರು ಪ್ರತಿ ಶುಕ್ರವಾರ ಕಾರ್ಯಕ್ಷೇತ್ರಕ್ಕಿಳಿದು ಕೆಲಸ ಮಾಡಬೇಕು.‌ ಡೆಂಗಿ ನಿವಾರಣೆಗೆ ಒಂದು‌ ಗಂಟೆಯಾದರೂ ಸಮಯ ಮೀಸಲಿಡಲು ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂದಾಗಬೇಕು.‌ ಖಾಸಗಿ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳಿಗೆ ಡೆಂಗಿ ಪರೀಕ್ಷೆಗೆ ನಿಗದಿ ಮಾಡಿರುವ ದರ ಕಡ್ಡಾಯವಾಗಿ ಪಾಲನೆಯಾಗುವಂತೆ ನಿಗಾ ವಹಿಸಬೇಕು’ ಎಂದೂ ಹೇಳಿದರು.

ಝೀಕಾ ಬಗ್ಗೆಯೂ ಎಚ್ಚರ

‘ಈಡಿಸ್ ಸೊಳ್ಳೆಗಳ ಮೂಲಕವೇ ಝೀಕಾ ವೈರಾಣು ಸೋಂಕು ಕೂಡಾ ಹಬ್ಬುತ್ತದೆ. ಪಕ್ಕದ ರಾಜ್ಯದಲ್ಲಿ ಝೀಕಾ ವೈರಾಣು ಕಂಡುಬಂದಿರುವುದರಿಂದ ರಾಜ್ಯದಲ್ಲೂ ಎಚ್ಚರ ವಹಿಸುವುದು ಅಗತ್ಯವಾಗಿದೆ. ಶಿವಮೊಗ್ಗದಲ್ಲಿ ಒಂದು ಶಂಕಿತ ಝೀಕಾ ಪ್ರಕರಣ ಪತ್ತೆಯಾಗಿದೆ.‌ ಝೀಕಾ ಅಷ್ಟೇನೂ ಅಪಾಯಕಾರಿ ಅಲ್ಲದಿದ್ದರೂ ಎಚ್ಚರಿಕೆಯಿಂದ ಇರಬೇಕು’ ಎಂದು ಅಧಿಕಾರಿಗಳಿಗೆ ದಿನೇಶ್ ಗುಂಡೂರಾವ್ ಸೂಚಿಸಿದರು.

286 ಡೆಂಗಿ ಪ್ರಕರಣ ದೃಢ
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಗುರುವಾರ ಹೊಸದಾಗಿ 286 ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಈ ಪ್ರಕರಣಗಳಲ್ಲಿ ಒಂದು ವರ್ಷದೊಳಗಿನ ನಾಲ್ಕು ಮಕ್ಕಳು ಸೇರಿದ್ದಾರೆ. 1ರಿಂದ 18 ವರ್ಷದೊಳಗಿನ 50 ಮಂದಿ ಹಾಗೂ 50 ವರ್ಷ ಮೇಲ್ಪಟ್ಟ 232 ಮಂದಿ ಡೆಂಗಿ ಪೀಡಿತರಾಗಿದ್ದಾರೆ. 24 ಗಂಟೆಗಳಲ್ಲಿ 1502 ಡೆಂಗಿ ಶಂಕಿತರಿಗೆ ಪರೀಕ್ಷೆ ಮಾಡಲಾಗಿದೆ. ರಾಜ್ಯದಲ್ಲಿ ಈವರೆಗೆ ವರದಿಯಾದ ಒಟ್ಟು ಡೆಂಗಿ ಪ್ರಕರಣಗಳ ಸಂಖ್ಯೆ 6676ಕ್ಕೆ ಏರಿಕೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT