ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶವರ್ಮಾ ಮಾದರಿಯಲ್ಲಿ ಬ್ಯಾಕ್ಟೀರಿಯಾ ಪತ್ತೆ

Published 1 ಜುಲೈ 2024, 0:21 IST
Last Updated 1 ಜುಲೈ 2024, 0:21 IST
ಅಕ್ಷರ ಗಾತ್ರ

ಬೆಂಗಳೂರು: ಆಹಾರ ಮತ್ತು ಗುಣಮಟ್ಟ ಇಲಾಖೆಯು ರಾಜ್ಯದ ವಿವಿಧೆಡೆ ಶವರ್ಮಾ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದ್ದು, ಕೆಲ ಮಾದರಿಗಳಲ್ಲಿ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. 

ಶವರ್ಮಾ ಆಹಾರ ಪದಾರ್ಥ ಸೇವನೆಯಿಂದ ಅನಾರೋಗ್ಯಕ್ಕೆ ಒಳಗಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ ವಿವಿಧ ವಲಯಗಳು, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ಶವರ್ಮಾದ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಒಟ್ಟು 17 ಮಾದರಿಗಳಲ್ಲಿ 9 ಮಾದರಿಗಳು ಸುರಕ್ಷಿತವೆಂದು ವರದಿಯಾದರೆ, 8 ಮಾದರಿಗಳಲ್ಲಿ ಬ್ಯಾಕ್ಟೀರಿಯಾ ಕಂಡುಬಂದಿದೆ. ಅಸುರಕ್ಷಿತ ಎಂದು ವರದಿಯಾಗಿರುವ ಆಹಾರ ಮಾದರಿಗಳ ತಯಾರಕರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ನಿಯಮಗಳು 2011ರ ಅನ್ವಯ ಕಾನೂನು ಕ್ರಮವಹಿಸಲಾಗುತ್ತಿದೆ ಎಂದು ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಆಹಾರ ತಯಾರಿಕೆ ಹಾಗೂ ವಿತರಣೆ ಸಂದರ್ಭದಲ್ಲಿನ ನೈರ್ಮಲ್ಯ ಕೊರತೆ, ದೀರ್ಘಕಾಲದ ಸಂಗ್ರಹಣೆಯಿಂದಾಗಿ ಬ್ಯಾಕ್ಟೀರಿಯಾ ಕಂಡುಬರುತ್ತದೆ. ಎಲ್ಲ ಶವರ್ಮ ಆಹಾರ ತಯಾರಕರಿಗೂ ತಯಾರಿಕೆ, ಸಂಗ್ರಹಣೆ ಮತ್ತು ವಿತರಣೆಯ ಸಂದರ್ಭದಲ್ಲಿ ಸಂಪೂರ್ಣ ನೈರ್ಮಲ್ಯ ಮತ್ತು ಗುಣಮಟ್ಟವನ್ನು ಆಹಾರ ಸುರಕ್ಷತೆ ಕಾಯ್ದೆ ಅನುಸಾರ ಕಾಪಾಡಿಕೊಳ್ಳಲು ಸೂಚಿಸಲಾಗಿದೆ. ಪ್ರತಿ ದಿನ ತಯಾರಿಸಿ, ತಾಜಾ ಸ್ಥಿತಿಯಲ್ಲಿ ಮಾರಾಟ ಮಾಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ. 

ಶವರ್ಮಾ ಆಹಾರ ತಯಾರಕರು ತಮ್ಮ ಉದ್ದಿಮೆಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ನೋಂದಣಿ, ಪರವಾನಗಿಯನ್ನು ಪಡೆದುಕೊಳ್ಳಬೇಕು. ಅಲ್ಲದೆ, ಪರವಾನಗಿಯನ್ನು ತಮ್ಮ ವ್ಯಾಪಾರ ಸ್ಥಳದಲ್ಲಿ ಸಾರ್ವಜನಿಕರ ಗಮನಕ್ಕೆ ಬರುವಂತೆ ಪ್ರದರ್ಶಿಸಬೇಕು. ಈ ಪರವಾನಗಿ ಹೊಂದಿರುವವರಿಂದಲೇ ಗ್ರಾಹಕರು ಶವರ್ಮಾ ಖರೀದಿಸಬೇಕು. ಆಹಾರ ತಯಾರಕರು ಲೋಪದೋಷಗಳನ್ನು ಸರಿಪಡಿಸಿಕೊಳ್ಳದ್ದರೆ ನಿಯಮಾನುಸಾರ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT