ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಹನ ಸುಗಮ ಸಂಚಾರಕ್ಕಾಗಿ ರೇಸ್‌ಕೋರ್ಸ್‌ ವೃತ್ತ ಅಭಿವೃದ್ಧಿ

ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿ ಸ್ಪಷ್ಟನೆ ನೀಡಿದ ಬಿಬಿಎಂಪಿ
Published 4 ಮಾರ್ಚ್ 2024, 19:29 IST
Last Updated 4 ಮಾರ್ಚ್ 2024, 19:29 IST
ಅಕ್ಷರ ಗಾತ್ರ

ಬೆಂಗಳೂರು: ಅಪಘಾತ ತಪ್ಪಿಸಲು ಮತ್ತು ಪಾದಚಾರಿಗಳ ಸುರಕ್ಷತೆಗಾಗಿ ನಗರದ ರೇಸ್‌ಕೋರ್ಸ್‌ ವೃತ್ತವನ್ನು (ಟ್ರಿಲೈಟ್‌) ಮರು ಅಭಿವೃದ್ಧಿ ಮಾಡಲಾಗುತ್ತಿದ್ದು, ಇದರಿಂದ ವಾಹನ ಸಂಚಾರ ಸುಗಮವಾಗಿದೆ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ಬಳ್ಳಾರಿ ರಸ್ತೆ ವಿಸ್ತರಣೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮರ್ಪಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಬಿಬಿಎಂಪಿ (ಯೋಜನೆಗಳು-ಕೇಂದ್ರ) ವಿಭಾಗದ ಮುಖ್ಯ ಎಂಜಿನಿಯರ್‌ ಎಂ.ಲೋಕೇಶ್‌ ಪ್ರಮಾಣಪತ್ರ ಸಲ್ಲಿಸಿ ಈ ಸ್ಪಷ್ಟನೆ ನೀಡಿದ್ದಾರೆ.

ಟ್ರಿಲೈಟ್‌ ಜಂಕ್ಷನ್‌ ಅಲ್ಲಿ ಶಿವಾನಂದ ಮೇಲ್ಸೇತುವೆ ಕಡೆಗೆ ಹೋಗುವ ರಸ್ತೆ ತೀವ್ರ ತಿರುವಿನಿಂದ ಕೂಡಿದ್ದು, ಅಪಘಾತಗಳು ಸಂಭವಿಸುವ ಹಾಗೂ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಜಂಕ್ಷನ್‌ ಕೇಂದ್ರ ಭಾಗದಲ್ಲಿರುವ ಪ್ರತಿಮೆಗಳನ್ನು ತೆರವುಗೊಳಿಸಬೇಕು ಹಾಗೂ ಅಲ್ಲಿನ ಐಲ್ಯಾಂಡ್‌ ಅನ್ನು ಸರಿಪಡಿಸಬೇಕು ಎಂದು 2023ರ ಜ.4ರಂದು ನಗರ ಸಂಚಾರ ಪೊಲೀಸ್‌ (ಪೂರ್ವ) ವಿಭಾಗದ ಉಪ ಪೊಲೀಸ್‌ ಆಯುಕ್ತರು ಬಿಬಿಎಂಪಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ಪರಿಗಣಿಸಿ ಕುದುರೆ ಪ್ರತಿಮೆಗಳನ್ನು ತೆರವುಗೊಳಿಸಲಾಗಿದೆ. ಜಂಕ್ಷನ್‌ ಅನ್ನು ಮರು ವಿನ್ಯಾಸಗೊಳಿಸಲಾಗಿದ್ದು, ಇಂಡಿಯನ್‌ ರೋಡ್‌ ಕಾಂಗ್ರೆಸ್‌ (ಐಆರ್‌ಸಿ) ಮಾರ್ಗಸೂಚಿಗಳ ಅನ್ವಯ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಜಂಕ್ಷನ್‌ ಮರು ಅಭಿವೃದ್ಧಿಯಿಂದ ರಸ್ತೆ ಅಗಲ ಕಡಿಮೆಯಾಗಿದೆ ಎಂಬುದು ಅರ್ಜಿದಾರರ ಊಹೆಯಾಗಿದೆ. ಸಂಚಾರ ನಿರ್ವಹಣೆಗೆ ಸಿಗ್ನಲ್‌ ಲೈಟ್‌ ಅಳವಡಿಸಲಾಗಿದೆ. ಜಂಕ್ಷನ್‌ ಮರು ವಿನ್ಯಾಸದ ಬಳಿಕ ಖಾಲಿ ಪ್ರದೇಶವನ್ನು ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ ನವೀನ ಪರಿಕಲ್ಪನೆಯಲ್ಲಿ ಅಭವೃದ್ಧಿ ಪಡಿಸಲಾಗುತ್ತಿದೆ. ಜಂಕ್ಷನ್‌ನಲ್ಲಿ ಸಾರ್ವಜನಿಕ ಜಾಗ ಕಲ್ಪಿಸಲಾಗಿದೆ. ಪಾದಚಾರಿಗಳು ಸುರಕ್ಷತೆಯಿಂದ ಜಂಕ್ಷನ್‌ ದಾಟಲು ಅನುವು ಮಾಡಿಕೊಡಲಾಗಿದೆ. ಮರು ಅಭಿವೃದ್ಧಿಯಿಂದ ವಾಹನಗಳ ಸಂಚಾರ ಸುಗಮವಾಗಿದೆ. ಪಾದಚಾರಿಗಳು ಸರಕ್ಷಿತವಾಗಿ ರಸ್ತೆ ದಾಟುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಈ ಪ್ರಮಾಣ ಪತ್ರ ದಾಖಲಿಸಿಕೊಂಡ ಹೈಕೋರ್ಟ್‌, ಪಕ್ಷಗಾರರು ಪ್ರಕರಣ ಕುರಿತ ಮಾಹಿತಿಯನ್ನು ಪರಸ್ಪರ ವಿಮಯ ಮಾಡಿಕೊಳ್ಳುವಂತೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಮಾರ್ಚ್‌ 7ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT