ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ವರ್ಷ ಮೇಲ್ಪಟ್ಟವರಿಗೆ 'ನಮ್ಮ ಕ್ಲಿನಿಕ್' ಮೂಲಕ ಮಧುಮೇಹ ತಪಾಸಣೆ: ಸುಧಾಕರ್‌

Last Updated 28 ನವೆಂಬರ್ 2022, 19:18 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ‘ನಮ್ಮ ಕ್ಲಿನಿಕ್‌’ ಮೂಲಕ 30 ವರ್ಷ ವಯಸ್ಸು ಮೇಲ್ಪಟ್ಟ ಪ್ರತಿ ವ್ಯಕ್ತಿಗೂ ಮಧುಮೇಹದ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಆರೋಗ್ಯ ಸಿಟಿ ಸಮಿಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಂಕ್ರಾಮಿಕವಲ್ಲದ ರೋಗಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರ ನಿರ್ವಹಣೆಗಾಗಿ ವಿವಿಧ ನಗರಗಳಲ್ಲಿ 438 ‘ನಮ್ಮ ಕ್ಲಿನಿಕ್‌’ಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದರು.

‘ಕೊಳೆಗೇರಿ, ಬಡ ಜನರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಇಂತಹ ಕ್ಲಿನಿಕ್‌ಗಳನ್ನು ಆರಂಭಿಸಿ ಜನರಿಗೆ ತಪಾಸಣೆಗೆ ವ್ಯವಸ್ಥೆ ಮಾಡಲಾಗುತ್ತದೆ. ಒಟ್ಟು ಮಧುಮೇಹಿಗಳಲ್ಲಿ ಶೇ 75 ರಷ್ಟು ಜನ ಚಿಕಿತ್ಸೆಯನ್ನೇ ಪಡೆಯುತ್ತಿಲ್ಲ. ಆದ್ದರಿಂದ 30 ವರ್ಷ ವಯಸ್ಸು ಮೇಲ್ಪಟ್ಟ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಮಧಮೇಹ ಪತ್ತೆ ಮಾಡಲು ಪ್ರಯತ್ನಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘6,500 ಕ್ಕೂ ಅಧಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ. ಇವುಗಳ ಮೂಲಕವೂ ಮಧುಮೇಹ ತಪಾಸಣೆ ಮಾಡಲಾಗುವುದು’ ಎಂದೂ ತಿಳಿಸಿದರು.

‘30 ವರ್ಷ ವಯಸ್ಸಿನ ಮಧುಮೇಹಿಯೊಬ್ಬರು ಗ್ಯಾಂಗ್ರೀನ್‌ನಿಂದ ಕಾಲಿಗೆ ಹಾನಿ ಮಾಡಿಕೊಂಡಿದ್ದರು. ಆದರೆ, ಅವರಿಗೆ ಮಧುಮೇಹ ಇದೆ ಎಂಬುದೇ ಗೊತ್ತಿರಲಿಲ್ಲ. ಇಂತಹ ನಿರ್ಲಕ್ಷ್ಯ, ಜಾಗೃತಿಯ ಕೊರತೆ ಎಲ್ಲೆಡೆ ಕಂಡು ಬರುತ್ತಿದೆ. ಪ್ರತಿ ವರ್ಷ ಆರೋಗ್ಯ ತಪಾಸಣೆಯನ್ನೂ ಕೂಡ ಮಾಡಿಕೊಳ್ಳುವುದಿಲ್ಲ. ಜನರು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಸಚಿವರು ಸಲಹೆ ನೀಡಿದರು.

‘ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಶೇ 50 ರಷ್ಟು ಜನರನ್ನು ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆಗೆ ಒಳಪಡಿಸಲಾಗಿದೆ. ಮುಂದಿನ 18 ತಿಂಗಳಲ್ಲಿ ರಾಜ್ಯದ ಶೇ 100 ರಷ್ಟು ಜನರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು ಎಂಬುದು ನನ್ನ ಗುರಿಯಾಗಿದೆ’ ಎಂದು ಸುಧಾಕರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT