ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ಷ್ಮ ಸಂವೇದನೆ ಕಳೆದುಕೊಂಡ ನಾಟಕಗಳು: ಕೆ.ವಿ. ನಾಗರಾಜಮೂರ್ತಿ

ರವೀಂದ್ರ ಕಲಾಕ್ಷೇತ್ರ–60’ ವಜ್ರ ಮಹೋತ್ಸವ ಸಂಭ್ರಮ ಸಂಪನ್ನ
Published 26 ಮಾರ್ಚ್ 2024, 22:52 IST
Last Updated 26 ಮಾರ್ಚ್ 2024, 22:52 IST
ಅಕ್ಷರ ಗಾತ್ರ

ಬೆಂಗಳೂರು: ‘ಇತ್ತೀಚೆಗೆ ನಾಟಕಗಳು ಸೂಕ್ಷ್ಮ ಸಂವೇದನೆ ಕಳೆದುಕೊಳ್ಳುತ್ತಿವೆ. ಹೊಸ ನಾಟಕಗಳೂ ಅಷ್ಟಾಗಿ ಬರುತ್ತಿಲ್ಲ’ ಎಂದು ಕರ್ನಾಟಕ ನಾಟಕ ಅಕಾಡೆಮಿಯ ನಿಯೋಜಿತ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಬೇಸರ ವ್ಯಕ್ತಪಡಿಸಿದರು. 

‘ನಾಟಕ ಬೆಂಗ್ಳೂರು‘ ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ‘ರವೀಂದ್ರ ಕಲಾಕ್ಷೇತ್ರ–60’ ವಜ್ರ ಮಹೋತ್ಸವ ಸಂಭ್ರಮದ ಸಮಾರೋಪ ಸಮಾರಂಭ ಹಾಗೂ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. 

‘ಪ್ರತಿ ವರ್ಷ 15 ರಿಂದ 20 ಹೊಸ ನಾಟಕಗಳು ಪ್ರದರ್ಶನ ಕಾಣಬೇಕೆಂಬ ಉದ್ದೇಶದಿಂದ ನಾಟಕ ಬೆಂಗ್ಳೂರು ಆಯೋಜಿಸಲಾಗುತ್ತಿದೆ. ಆದರೆ, ಹಳೆ ನಾಟಕಗಳೇ ಹೆಚ್ಚಾಗಿ ಪ್ರದರ್ಶನ ಕಾಣುತ್ತಿದ್ದವು. ಈ ಬಾರಿ ನಾಟಕ ರಚನಾ ಸ್ಪರ್ಧೆಯಿಂದ ಹೊಸ ನಾಟಕಗಳು ಬರಲು ಸಾಧ್ಯವಾಗಿದೆ’ ಎಂದು ಹೇಳಿದರು. 

‘ಬೆರಳಣಿಕೆಯಷ್ಟು ಮಂದಿ ಮಾತ್ರ ನಾಟಕ ಬರೆಯುತ್ತಿದ್ದಾರೆ. ಇದರಿಂದಾಗಿ ಜನರಿಗೆ ಬೇಕಾದಂತಹ ನಾಟಕಗಳು ಕಡಿಮೆ ಆಗಿವೆ. ಈಗ ತುರ್ತು ಪರಿಸ್ಥಿತಿಗಿಂತ ಕ್ರೂರ ಸ್ಥಿತಿಯಲ್ಲಿದ್ದೇವೆ. ಬಹುತ್ವ ಭಾರತ, ಬಹು ಸಂಸ್ಕೃತಿಯ ಭಾರತವು ಏಕತ್ವದ ಕಡೆ ಹೋಗುತ್ತಿದೆ’ ಎಂದು ತಿಳಿಸಿದರು. 

ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್, ‘ರವೀಂದ್ರ ಕಲಾಕ್ಷೇತ್ರವು ವ್ಯವಸ್ಥೆಯ ವಿರುದ್ಧದ ಹೋರಾಟಕ್ಕೆ ವೇದಿಕೆಯಾಗಿದೆ. ಶಿವರಾಮ ಕಾರಂತ, ಪಿ.ಲಂಕೇಶ್‌, ಗಿರೀಶ್‌ ಕಾರ್ನಾಡ್‌ ಅವರಂತಹ ದೊಡ್ಡ ನಾಟಕಕಾರನ್ನು ನನಗೆ ಪರಿಚಯಿಸಿದ್ದು ಇದೇ ರವೀಂದ್ರ ಕಲಾಕ್ಷೇತ್ರ. ಅನೇಕರ ಬದುಕನ್ನು ಕಟ್ಟಿಕೊಟ್ಟಿದ್ದು ಮಾತ್ರವಲ್ಲ, ಬದುಕು ಏನು ಎಂಬುದನ್ನು ರವೀಂದ್ರ ಕಲಾಕ್ಷೇತ್ರ ತಿಳಿಸಿಕೊಟ್ಟಿದೆ’ ಎಂದರು.

ರಂಗ ಅಭಿನಂದನೆಗೆ ಭಾಜನರಾಗಿದ್ದ ರಂಗ ನಿರ್ದೇಶಕ ಎಂ.ಎಸ್. ಸತ್ಯು ಅವರು ಅನಾರೋಗ್ಯದ ಕಾರಣ ಗೈರಾಗಿದ್ದರು. ಅವರ ಪರವಾಗಿ ಚಲನಚಿತ್ರ ನಟ ದತ್ತಣ್ಣ ರಂಗ ಅಭಿನಂದನೆ ಸ್ವೀಕರಿಸಿದರು.

ಸ್ಪರ್ಧೆಯಲ್ಲಿ ವಿಜೇತವಾದ 9 ನಾಟಕಗಳಿಗೆ ₹ 60 ಸಾವಿರ ನಗದು ಬಹುಮಾನ ವಿತರಿಸಲಾಯಿತು. ಈ ಬಹುಮಾನವನ್ನು ಕಲಾಗಂಗೋತ್ರಿ ರಂಗತಂಡ ಪ್ರಾಯೋಜಿಸಿದೆ. ಆಯ್ದ ನಾಟಕಗಳನ್ನು ಭಾಗವತರು ಸಾಂಸ್ಕೃತಿಕ ಸಂಘಟನೆ ಪುಸ್ತಕ ರೂಪದಲ್ಲಿ ಪ್ರಕಟಿಸಲಿದೆ. ಸಮಾರಂಭದ ಬಳಿಕ ದಾಕ್ಷಾಯಿಣಿ ಭಟ್ ನಿರ್ದೇಶನದ ‘ಫೋಲಿ ಕಿಟ್ಟಿ’ ನಾಟಕ ಪ್ರದರ್ಶನ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT