ಮಹಿಳೆ ಸಾವು
ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಯಾಂಟರ್ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಹೆಬ್ಬಾಳದ ದಾಸರಹಳ್ಳಿ ನಿವಾಸಿ ಸತ್ಯಪ್ರೇಮಾ(46) ಮೃತ ಮಹಿಳೆ. ಇವರ ಪತಿ ಬಿ.ಎಲ್.ಮೋಹನ್ ಗಾಯಗೊಂಡಿದ್ದಾರೆ.
ಪಾಲಿಕೆ ವೃತ್ತದ ಬಸ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ಕ್ಯಾಂಟರ್ ವಾಹನ ಚಾಲಕ ಸೈಯದ್ ಬಾಬು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಸತ್ಯಪ್ರೇಮಾ– ಮೋಹನ್ ದಂಪತಿ ತಮ್ಮ ಪುತ್ರಿಯ ಹುಟ್ಟುಹಬ್ಬದ ಪ್ರಯುಕ್ತ ಖರೀದಿಗಾಗಿ ಮನೆಯಿಂದ ಕೆ.ಆರ್. ಮಾರುಕಟ್ಟೆ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಪಾಲಿಕೆ ವೃತ್ತದ ಬಸ್ ನಿಲ್ದಾಣದ ಬಳಿ ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದಿದ್ದು, ಈ ವೇಳೆ ಸತ್ಯಪ್ರೇಮಾ ತಲೆಗೆ ಗಂಭೀರ ಪೆಟ್ಟಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದರು.