ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ ವ್ಯಾಪ್ತಿ |ರಸ್ತೆ ಗುಂಡಿ ಮುಚ್ಚಲು ತುಷಾರ್‌ ಗಿರಿನಾಥ್‌ ಸೂಚನೆ

ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್‌ನಿಂದ ಕಾಮಗಾರಿಗೆ ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶ
Published 17 ಮೇ 2024, 0:30 IST
Last Updated 17 ಮೇ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಮುಖ್ಯ, ಉಪ ಮುಖ್ಯರಸ್ತೆ ಹಾಗೂ ವಾರ್ಡ್‌ ರಸ್ತೆಗಳಲ್ಲಿರುವ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ.

ಮಳೆ ಮುಂಜಾಗ್ರತಾ ಕ್ರಮ, ರಸ್ತೆ ಗುಂಡಿ ಮುಚ್ಚುವುದು ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಗುರುವಾರ ನಡೆದ ವಿಡಿಯೊ ಸಂವಾದದಲ್ಲಿ ಅವರು ಆದೇಶ ನೀಡಿದರು.

ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡಾಂಬರು ಏಜೆನ್ಸಿಗಳಿಂದ ಹಾಟ್ ಮಿಕ್ಸ್ ಹಾಗೂ ಕೋಲ್ಡ್ ಮಿಕ್ಸ್ ಪಡೆದು ಹಗಲು- ರಾತ್ರಿ ರಸ್ತೆಗುಂಡಿಗಳನ್ನು ಮುಚ್ಚಬೇಕು. ದೋಷಮುಕ್ತ ಅವಧಿಯಲ್ಲಿರುವ (ಡಿಎಲ್‌ಪಿ) ರಸ್ತೆಗಳಲ್ಲಿ ಗುಂಡಿಗಳಾಗಿದ್ದರೆ ಸಂಬಂಧಪಟ್ಟ ಗುತ್ತಿಗೆದಾರರಿಂದಲೇ ಗುಂಡಿಗಳನ್ನು ಮುಚ್ಚಿಸಬೇಕು ಎಂದರು.

ಎಂಟು ವಲಯಗಳ ಆಯುಕ್ತರು ರಸ್ತೆ ಗುಂಡಿಗಳು ಬಿದ್ದಿರುವುದನ್ನು ಪರಿಶೀಲಿಸಿ, ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಎಷ್ಟು ಡಾಂಬರು ಅವಶ್ಯಕತೆಯಿದೆ ಎಂಬುದನ್ನು ಏಜೆನ್ಸಿಗಳಿಗೆ ತಿಳಿಸಿ ಅಗತ್ಯವಿರುವಷ್ಟು ಡಾಂಬರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮಳೆಗಾಲದಲ್ಲಿ ರಸ್ತೆಗಳನ್ನು ಅಗೆದರೆ ಸಾಕಷ್ಟು ಸಮಸ್ಯೆಯಾಗಲಿದ್ದು, ಆಯಾ ವಲಯ ವ್ಯಾಪ್ತಿಯಲ್ಲಿ ಯಾವುದೇ ಸಂಸ್ಥೆಗಳು ರಸ್ತೆ ಕತ್ತರಿಸದಂತೆ ಎಚ್ಚರಿಕೆ ವಹಿಸಬೇಕು. ಎಲ್ಲಿಯೂ ಅನಧಿಕೃತವಾಗಿ ರಸ್ತೆ ಕತ್ತರಿಸದಂತೆ ನಿಗಾವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾತ್ಕಾಲಿಕ ವ್ಯವಸ್ಥೆ: 198 ಪ್ರವಾಹಪೀಡಿತ ಪ್ರದೇಶಗಳಲ್ಲಿ 124 ಕಡೆ ಯಾವುದೇ ಸಮಸ್ಯೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಳಿದ 74 ಸ್ಥಳಗಳ ಪೈಕಿ 24 ಕಡೆಯೂ ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸಲಾಗುತ್ತಿದ್ದು, ಉಳಿದ 50 ಸ್ಥಳಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್ ಅವರು ಸಭೆಯಲ್ಲಿ ಮಾಹಿತಿ ನೀಡಿದರು.

ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್, ವಿಪತ್ತು ನಿರ್ವಹಣಾ ವಿಭಾಗದ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್, ಎಲ್ಲಾ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT