ಮಂಗಳವಾರ, ಮೇ 26, 2020
27 °C
ಅಚ್ಚುಕಟ್ಟು ಮಾಹಿತಿ

ನೆನಪು | ಶಿಸ್ತಿನ ಫೋಟೊಗ್ರಾಫರ್‌ ಟಿ.ಎಲ್‌. ರಾಮಸ್ವಾಮಿ

ಪ್ರೇಮಕುಮಾರ್ ಹರಿಯಬ್ಬೆ Updated:

ಅಕ್ಷರ ಗಾತ್ರ : | |

ಟಿ.ಎಲ್‌.ರಾಮಸ್ವಾಮಿ ಅಪರೂಪದ ಫೋಟೊಗ್ರಾಫರ್‌ ಎಂದಷ್ಟೇ ಹೇಳಿದರೆ ಸಾಕಾಗದು. ತಮ್ಮ ವೃತ್ತಿಗೆ ಅಗತ್ಯವಾದ ಶಿಸ್ತನ್ನು ರೂಢಿಸಿಕೊಂಡ ಅತ್ಯಂತ ವಿರಳ ಫೋಟೊಗ್ರಾಫರ್‌ ಅವರಾಗಿದ್ದರು. ಸುಮಾರು ಆರು ದಶಕಗಳ ಅವಧಿಯಲ್ಲಿ ಅವರು ತೆಗೆದ ಎಲ್ಲಾ ಚಿತ್ರಗಳ ದಿನಾಂಕ ಮತ್ತು ಸಂದರ್ಭ ಕುರಿತು ಒಂದು ಸಾಲಿನ ಮಾಹಿತಿಯನ್ನು ಬರೆದಿಡುವ ಶಿಸ್ತನ್ನು ಅವರು ರೂಢಿಸಿಕೊಂಡಿದ್ದರು!

ಹೀಗೆ ಚಿತ್ರಗಳ ಮಾಹಿತಿ ಮತ್ತು ದಿನಾಂಕ ಬರೆಯುವ ಶಿಸ್ತು ರೂಢಿಸಿಕೊಂಡವರು ಕರ್ನಾಟಕದ ಮಟ್ಟಿಗೆ ಬೆರಳೆಣಿಕೆಯಲ್ಲಿರಬಹುದು. ನಾನು ಅನೇಕ ಹಿರಿಯ ಹಾಗೂ ಪ್ರಸಿದ್ಧ ಫೋಟೊಗ್ರಾಫರ್‌ಗಳ ಚಿತ್ರಗಳನ್ನು ನೋಡಿದ್ದೇನೆ. ಚಿತ್ರಗಳನ್ನು ತೆಗೆದ ಸಂದರ್ಭ ಮತ್ತು ದಿನಾಂಕಗಳನ್ನು ರಾಮಸ್ವಾಮಿ ಅವರ ಹಾಗೆ ಬರೆದಿಟ್ಟವರು ಕಡಿಮೆ. ದೊಡ್ಡ ಪುಸ್ತಕವೊಂದರಲ್ಲಿ ಅವರು ಚಿತ್ರಗಳ ಮಾಹಿತಿ, ದಿನಾಂಕ ಇತ್ಯಾದಿಗಳನ್ನು ಬರೆದಿಟ್ಟಿದ್ದಾರೆ.

ಅವರು ತೆಗೆದ ಚಿತ್ರಗಳನ್ನು (ಹಕ್ಕುಸಹಿತ) ಪ್ರಜಾವಾಣಿ ಬಳಗ ದೊಡ್ಡ ಮೊತ್ತದ ಸಂಭಾವನೆ ಕೊಟ್ಟು ಅವರಿಂದ ಖರೀದಿಸಿತು. ಪ್ರಜಾವಾಣಿ ಸಂಗ್ರಹ ಸೇರಿದ ಅವರ ನಾಲ್ಕು ಲಕ್ಷಕ್ಕೂ ಹೆಚ್ಚು ನೆಗೆಟಿವ್‌ಗಳನ್ನು ನೋಡಿ, ಸೂಕ್ತ ಅನ್ನಿಸಿದವನ್ನು ಆಯ್ಕೆ ಮಾಡಿ ನಂತರ ಸ್ಕ್ಯಾನ್‌ ಮಾಡಿಸಿ, ಎಡಿಟ್‌ ಮಾಡಿ, ಕ್ಯಾಪ್ಷನ್‌ ಸಹಿತ ಸಂಗ್ರಹಿಸಿಡುವ ಯೋಜನೆಯಲ್ಲಿ ಕೆಲಸ ಮಾಡುವ ಅವಕಾಶ ನನ್ನದಾಗಿತ್ತು.


'ಪ್ರಜಾವಾಣಿ' ಸಂಪಾದಕರಾಗಿದ್ದ ಎಂ.ಬಿ.ಸಿಂಗ್ ಅವರೊಂದಿಗೆ ಟಿ.ಎಲ್.ರಾಮಸ್ವಾಮಿ (1955ರ ದಶಕದ ಚಿತ್ರ)

ಈ ಕೆಲಸ ಒಪ್ಪಿಕೊಂಡಾಗ ಎಂದೋ ತೆಗೆದ ಚಿತ್ರಗಳಿಗೆ ಕ್ಯಾಪ್ಷನ್‌ ಬರೆಯಲು ಸಾಧ್ಯವೇ ಎನ್ನುವ ಸಂದೇಹ ನನಗಿತ್ತು. ರಾಮಸ್ವಾಮಿ ಅವರ ನೆಗೆಟಿವ್‌ಗಳನ್ನು ನೋಡಿದ ಮೇಲೆ ಸಂದೇಹ ನಿವಾರಣೆ ಆಯಿತು. ಮೂರ್ನಾಲ್ಕು ಸಲ ಅವರನ್ನು ಭೇಟಿ ಮಾಡಿದ ನಂತರ ವಿಶ್ವಾಸ ಕುದುರಿತು. 1950 ರಿಂದ 1985ರವರೆಗೆ ಅವರು ತೆಗೆದ ಕಪ್ಪುಬಿಳುಪು ಚಿತ್ರಗಳ ದಿನಾಂಕ ಮತ್ತು ಒಂದು ಸಾಲಿನ ಮಾಹಿತಿಯೊಂದಿಗೆ ಅವರೇ ಬರೆದು ಪುಟ್ಟ ಕವರ್‌ಗಳಲ್ಲಿ ಹಾಕಿ ವ್ಯವಸ್ಥಿತವಾಗಿ ಜೋಡಿಸಿಟ್ಟಿದ್ದರು!

ಸುಮಾರು ನಾಲ್ಕು ಲಕ್ಷ ನೆಗೆಟಿವ್‌ಗಳನ್ನು ನೋಡಿ ಅವುಗಳ ಪೈಕಿ ತುಂಬಾ ಮುಖ್ಯ ಅನ್ನಿಸಿದ 45,000 ಚಿತ್ರಗಳನ್ನು ಆಯ್ಕೆ ಮಾಡಿದೆವು. ಚಿತ್ರ ತೆಗೆದ ದಿನಾಂಕ ಮತ್ತು ಮೂರ್ನಾಲ್ಕು ಪದಗಳ ಮಿತಿಯಲ್ಲಿದ್ದ ಮಾಹಿತಿ ಇಟ್ಟುಕೊಂಡು ಅಲ್ಲಿ, ಇಲ್ಲಿ ಹುಡುಕಾಡಿ ಕ್ಯಾಪ್ಷನ್‌ ಬರೆಯಲು ಸಾಧ್ಯವಾಯಿತು.

ಮೇಲಿನ ಅವಧಿಯಲ್ಲಿ ಬೆಂಗಳೂರಿಗೆ ಭೇಟಿ ನೀಡಿದ ಜಗತ್ತಿನ ಅನೇಕ ದೇಶಗಳ ಗಣ್ಯರು, ವಿಜ್ಞಾನಿಗಳು, ರಾಜತಾಂತ್ರಿಕರು, ರಾಜಕಾರಣಿಗಳಲ್ಲದೆ, ನಮ್ಮ ದೇಶ, ರಾಜ್ಯದ ಸಾಹಿತಿ, ಕಲಾವಿದರು, ಸಂಗೀತಗಾರರು ಸೇರಿದಂತೆ ಒಟ್ಟಾರೆ ಭಾರತದ ಮತ್ತು ಕರ್ನಾಟಕದ ಆರು ದಶಕಗಳ ಕಾಲದ ಪ್ರಮುಖ ಸಂಗತಿಗಳನ್ನು ನೆನಪಿಸುವ ಚಿತ್ರಗಳು ಈಗ ಪ್ರಜಾವಾಣಿ ಚಿತ್ರ ಸಂಗ್ರಹಾಗಾರದಲ್ಲಿವೆ.


ಮಗನೊಂದಿಗೆ ಲಾಲ್‌ಬಾಗ್‌ನಲ್ಲಿ ಟಿ.ಎಲ್.ರಾಮಸ್ವಾಮಿ. (ಅಕ್ಟೋಬರ್ 13, 1974ರ ಚಿತ್ರ)

ರಾಮಸ್ವಾಮಿ ತೀರಾ ಇತ್ತೀಚಿನವರೆಗೆಗೂ ಫೋಟೊಗ್ರಾಫರ್‌ ಆಗಿ ಕ್ರಿಯಾಶೀಲರಾಗಿದ್ದರು. ಮೊದಲ ಮುಖ್ಯಮಂತ್ರಿ ಕೆ.ಸಿ ರೆಡ್ಡಿಯವರಿಂದ ಹಿಡಿದು ಹಲವು ಮುಖ್ಯಮಂತ್ರಿಗಳ ಪ್ರಮಾಣವಚನ, ಕರ್ನಾಟಕ ಏಕೀಕರಣ, ಸಂಪುಟಗಳ ವಿಸ್ತರಣೆ, ಚುನಾವಣೆಗಳು, ರಾಜಕೀಯ ಮುಖಂಡರು, ಪ್ರಮುಖ ರಾಜಕೀಯ ವಿದ್ಯಮಾನಗಳು, ಭಿನ್ನಮತೀಯ ಚಟುವಟಿಕೆಗಳು, ಕರ್ನಾಟಕ ಕಂಡ ಚಳವಳಿಗಳು, ಕನ್ನಡ ಪರ ಹೋರಾಟಗಳು, ಕರ್ನಾಟಕ ಏಕೀಕರಣ, ಕರ್ನಾಟಕ ನಾಮಕರಣ, ಸರ್‌.ಎಂ.ವಿಶ್ವೇಶ್ವರಯ್ಯ, ಸಿ.ವಿ.ರಾಮನ್‌ ಸೇರಿದಂತೆ ನೂರಾರು ಗಣ್ಯರ ಚಿತ್ರಗಳನ್ನು ರಾಮಸ್ವಾಮಿ ತೆಗೆದು ಜತನದಿಂದ ಕಾಪಾಡಿಕೊಂಡು ಬಂದಿದ್ದರು. ಅವರ ಚಿತ್ರಗಳನ್ನು ಇಟ್ಟುಕೊಂಡು ಕರ್ನಾಟಕದ ಇತಿಹಾಸವನ್ನು ಬೇರೊಂದು ಆಯಾಮದಲ್ಲಿ ಬರೆಯಲು ಸಾಧ್ಯವಿದೆ.

ರಾಮಸ್ವಾಮಿ ಅವರ ನೆನಪಿನಲ್ಲಿ ಅನೇಕ ಸಂಗತಿಗಳು ಉಳಿದುಹೋದವು. ಮಯೂರ ಮಾಸಿಕದಲ್ಲಿ ಅವರು ಕೆಲವು ಮುಖ್ಯ ನೆನಪುಗಳನ್ನು ಹಂಚಿಕೊಂಡಿದ್ದರು. ಬರೆಯಲು ಸಾಧ್ಯವಾಗದ ವಿಷಯಗಳು ಹಲವಾರು ಇದ್ದವು. ಅವನ್ನೆಲ್ಲ ಬರೆಯುವ ಆಸಕ್ತಿ ಅವರಿಗೆ ಇತ್ತು. ಬರೆಯುವಂತೆ ಅವರನ್ನು ನಾನೂ ಒತ್ತಾಯಿಸಿದ್ದೆ. ವಯಸ್ಸಿನ ಕಾರಣದಿಂದ ಅದು ಸಾಧ್ಯವಾಗಲಿಲ್ಲವೇನೋ. ಸುಮಾರು ಆರು ದಶಕಗಳ ಕರ್ನಾಟಕದ ವಿದ್ಯಮಾನಗಳಿಗೆ ಸಾಕ್ಷಿಯಾಗಿದ್ದ ಹಿರಿಯ ಫೋಟೋಗ್ರಾಫರ್‌ತಮ್ಮ ಕೆಲಸ ಮುಗಿಸಿ ನಿರ್ಮಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.


ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ರಾಮಸ್ವಾಮಿ (ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್, ಜೂನ್ 18, 2016ರ ಚಿತ್ರ)

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.